ನಾಂದೇಡ್: ಮಹಾರಾಷ್ಟ್ರದ ನಾಂದೇಡ್ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಸಂಸದ ವಸಂತ ಚವ್ಹಾಣ್ ಅವರು ಹೈದರಾಬಾದ್‌ನ ಖಾಸಗಿ ಆಸ್ಪತ್ರೆಯಲ್ಲಿ ಸೋಮವಾರ ನಿಧನರಾದರು. ಕಳೆದ ಕೆಲವು ದಿನಗಳಿಂದ 69 ವರ್ಷದ ಸಂಸದರು ಮೂತ್ರಪಿಂಡದ ಸಮಸ್ಯೆಯಿಂದ ಬಳಲುತ್ತಿದ್ದರು. ವಸಂತ್ ಅವರ ಅಂತ್ಯಕ್ರಿಯೆಯನ್ನು ನೈಗಾಂವ್‌ನಲ್ಲಿ ಬೆಳಗ್ಗೆ 11 ಗಂಟೆಗೆ ನೆರವೇರಿಸಲಾಗುವುದು ಎಂದು ಮೂಲಗಳು ತಿಳಿಸಿವೆ.
ವಸಂತ ಚವ್ಹಾಣ್ ಅವರು ಬೆಳಿಗ್ಗೆ 4 ಗಂಟೆಗೆ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ. ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಕಳೆದೊಂದು ವಾರದಿಂದ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಮಾಜಿ ಸಿಎಂ ಅಶೋಕ್ ಚವಾಣ್ ಅವರು ಲೋಕಸಭೆ ಚುನಾವಣೆಗೆ ಮುನ್ನ ಬಿಜೆಪಿ ಸೇರಿದರೂ ವಂಸತ್ ಅವರು ಅನಾರೋಗ್ಯದಲ್ಲೂ ಈ ವರ್ಷ ನಾಂದೇಡ್ ಲೋಕಸಭಾ ಸ್ಥಾನವನ್ನು ಗೆದ್ದಿದ್ದರು.
ಲೋಕಸಭಾ ಚುನಾವಣೆಯಲ್ಲಿ, ವಸಂತ ಚವ್ಹಾಣ್ ಅವರು ಹಾಲಿ ಬಿಜೆಪಿ ಸಂಸದ ಪ್ರತಾಪ್ ಪಾಟೀಲ್ ಅವರನ್ನು 59,442 ಮತಗಳಿಂದ ಸೋಲಿಸಿದ್ದರು. ಅಶೋಕ್ ಚವ್ಹಾಣ್ ಚುನಾವಣೆಗೆ ಸ್ವಲ್ಪ ಮೊದಲು ಬಿಜೆಪಿಗೆ ಪಕ್ಷಾಂತರಗೊಂಡ ನಂತರ ದುರ್ಬಲವಾದ ಪಕ್ಷ ಮತ್ತು ಆರೋಗ್ಯ ಸಮಸ್ಯೆಗಳಲ್ಲೂ ಚುನಾವಣೆ ಎದುರಿಸಿ ಗೆದ್ದು ಗಮನ ಸೆಳೆದಿದ್ದರು.
ನಾಂದೇಡ್ ಜಿಲ್ಲೆಯ ನೈಗಾಂವ್‌ನಲ್ಲಿ ಜನಿಸಿದ ವಸಂತ ಚವ್ಹಾಣ್ ಅವರು ದೀರ್ಘಕಾಲದವರೆಗೆ ಗ್ರಾಮ ಪಂಚಾಯಿತಿ ಸದಸ್ಯರಾಗಿದ್ದರು ಮತ್ತು ನಂತರ 1990 ಮತ್ತು 2002 ರಲ್ಲಿ ಜಿಲ್ಲಾ ಪರಿಷತ್ ಸದಸ್ಯರಾಗಿದ್ದರು.
ವಸಂತ್ ಅವರು 2002 ರಲ್ಲಿ ಮಹಾರಾಷ್ಟ್ರ ವಿಧಾನಪರಿಷತ್ ಸದಸ್ಯರಾಗಿ ಆಯ್ಕೆ ಆಗಿದ್ದರು. ಬಳಿಕ ನೈಗಾಂವ್ ವಿಧಾನಸಭಾ ಕ್ಷೇತ್ರದಿಂದ ರಾಜ್ಯ ವಿಧಾನಸಭೆಯ ಸದಸ್ಯರಾದರು. ಅವರು 2009 ರಿಂದ 2014 ರವರೆಗೆ ಶಾಸಕರಾಗಿದ್ದರು. 2021 ರಿಂದ 2023 ರವರೆಗೆ ನಾಂದೇಡ್ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನ ಅಧ್ಯಕ್ಷರೂ ಆಗಿದ್ದರು.
ಇದನ್ನೂ ಓದಿ: ಮಹಿಳೆಯರ ಮೇಲಿನ ದೌರ್ಜನ್ಯ ಮಹಾಪಾಪ, ಅಪರಾಧಿಗಳನ್ನು ಬಿಡಬಾರದು: ಪ್ರಧಾನಿ ಮೋದಿ - Modi On Crimes Against Women