ಧರ್ಮಪುರಿ: ಪರಿಶಿಷ್ಟ ಜಾತಿಯ ದಿನಗೂಲಿ ಕಾರ್ಮಿಕರ ಜೊತೆಯಲ್ಲಿ ಅಮಾನಯವೀಯವಾಗಿ ನಡೆದುಕೊಂಡಿರುವ ಘಟನೆ ಬೆಳಕಿಗೆ ಬಂದಿದೆ. ಈ ಸಂಬಂಧ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ಪ್ರಕರಣ ದಾಖಲಿಸಿದ್ದಾರೆ.
ಧರ್ಮಪುರಿ ಜಿಲ್ಲೆಯ ಮೊರಪ್ಪುರ್ ಪಕ್ಕದ ಆರ್. ಗೋಪಿನಾಥಂಪಟ್ಟಿ ಬಳಿಯ ಪಾಳೆಯಂಪಲ್ಲಿನ ಐವರು ಪರಿಶಿಷ್ಟ ಸಮುದಾಯದ ಹಿರಿಯ ಮಹಿಳೆಯರು ದಿನಗೂಲಿ ಕೆಲಸಕ್ಕೆ ಮಾರಪ್ಪನಾಯಕನಪಟ್ಟಿಗೆ ತೆರಳಿದ್ದರು. ಇಲ್ಲಿ ಭುವನೇಶ್ವರನ್ ಎಂಬುವವರ ಭೂಮಿಯಲ್ಲಿ ಕೃಷಿ ಕೆಲಸವನ್ನು ನಿರ್ವಹಿಸಿದ್ದರು. ಈ ವೇಳೆ ಎಸ್ಟೇಟ್ನ ಮಾಲೀಕರು ಈ ಐವರು ಮಹಿಳೆಯರಿಗೆ ತೆಂಗಿನ ಚಿಪ್ಪಿನಲ್ಲಿ ಟೀಯನ್ನು ನೀಡಿದ್ದು, ಮಾಲೀಕ ಬೆಳ್ಳಿ ಬಟ್ಟಲಲ್ಲಿ ಟೀ ಸೇವಿಸಿದ್ದರಂತೆ.
ಧರಣಿ ಮತ್ತು ಚಿನ್ನತಾಯಿ ಎಂಬುವರು ಐವರು ಮಹಿಳೆಯರಿಗೆ ಈ ರೀತಿ ಅವಮಾನ ಮಾಡಿದ್ದನ್ನು ಕಂಡ ಗ್ರಾಮದ ನಿವಾಸಿಯೊಬ್ಬರು ತಮ್ಮ ಫೋನ್‌ನಲ್ಲಿ ಘಟನೆಯನ್ನು ರೆಕಾರ್ಡ್ ಮಾಡಿದ್ದಾರೆ. ನಂತರ, ವಿಡಿಯೋವನ್ನು ಆನ್‌ಲೈನ್‌ನಲ್ಲಿ ಹಂಚಿಕೊಂಡಿದ್ದು, ಇದು ವೈರಲ್ ಆಗಿದೆ. ಇದರಲ್ಲಿ ಧರಣಿ ಮತ್ತು ಚಿನ್ನತಾಯಿ ಅಸ್ಪ್ರಶ್ಯತೆ ಆಚರಣೆ ಮಾಡುತ್ತಿರುವುದು ಕಂಡು ಬಂದಿದೆ.
ಈ ಬೆನ್ನಲ್ಲೇ, ಪ್ರಕರಣ ಸಂಬಂಧ ದೌರ್ಜನ್ಯಕ್ಕೆ ಒಳಗಾದ ಐವರು ಮಹಿಳೆಯರಲ್ಲಿ ಒಬ್ಬರಾಗಿರುವ ಚೆಲ್ಲಿ ಎಂಬುವವರು ಕಂಬೈನಲ್ಲೂರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಕೆಲಸಕ್ಕೆ ಕೂಲಿ ಕಾರ್ಮಿಕರಾಗಿ ಹೋದ ನಮಗೆ ತೆಂಗಿನ ಚಿಪ್ಪಿನಲ್ಲಿ ಟೀ ನೀಡುವ ಮೂಲಕ ಅವಮಾನ ಮಾಡಿದ್ದಾರೆ ಎಂದು ದೂರಿದ್ದಾರೆ. ಈ ದೂರಿನ ಆಧಾರದ ಮೇಲೆ ಆರೂರ್ ಉಪ ಪೊಲೀಸ್ ವರಿಷ್ಠಾಧಿಕಾರಿ ಜಗನ್ನಾಥನ್ ನೇತೃತ್ವದಲ್ಲಿ ತನಿಖೆ ನಡೆಸಲಾಗಿದ್ದು, ಟೀ ನೀಡಿದ್ದ ಧರಣಿ ಮತ್ತು ಅವರ ಅತ್ತೆ ಚಿನ್ನತಾಯಿ ಅವರನ್ನು ವಿಚಾರಣೆ ನಡೆಸಲಾಗಿದೆ.
ತನಿಖೆಯ ಬಳಿಕ 2015 ರ ದೌರ್ಜನ್ಯ ತಡೆ ತಿದ್ದುಪಡಿ ಕಾಯ್ದೆಯ ಅಡಿಯಲ್ಲಿ ಎಸ್‌ಸಿ ಮತ್ತು ಎಸ್‌ಟಿ ಸೆಕ್ಷನ್ ಅಡಿಯಲ್ಲಿ ಧರಣಿ ಮತ್ತು ಚಿನ್ನತಾಯಿ ವಿರುದ್ಧ ಪ್ರಕರಣ ದಾಖಲಿಸಿ, ಬಂಧಿಸಲಾಗಿದೆ. ಬಳಿಕ ಅವರನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದ್ದು, ಸೇಲಂ ಕೇಂದ್ರ ಕಾರಾಗೃಹಕ್ಕೆ ಕಳುಹಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಸ್ಟೂಡೆಂಟ್ ಯೂನಿಯನ್ ಎಲೆಕ್ಷನ್ ವಿಚಾರ: ಜೆಎನ್‌ಯುನಲ್ಲಿ ಎರಡು ಗುಂಪುಗಳ ನಡುವೆ ಘರ್ಷಣೆ