ಅಲಿಗಢ (ಉತ್ತರಪ್ರದೇಶ): ಉತ್ತರಪ್ರದೇಶದಲ್ಲಿ ಬುಧವಾರ ತ್ರಿವಳಿ ಕೊಲೆ ನಡೆದಿದೆ. ಹುಚ್ಚು ಹಿಡಿದ ವ್ಯಕ್ತಿಯೊಬ್ಬ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದವರ ಮೇಲೆ ದಾಳಿ ಮಾಡಿದ್ದಾನೆ. ಇಬ್ಬರನ್ನು ದೊಣ್ಣೆಯಿಂದ ಹೊಡೆದಿದ್ದಾನೆ. ಬಳಿಕ ಅದರಲ್ಲಿ ಒಬ್ಬನನ್ನು ಜೀವಂತ ದಹಿಸಿದ್ದಾನೆ. ವಿಷಯ ತಿಳಿದ ಗ್ರಾಮಸ್ಥರು ಹುಚ್ಚನನ್ನು ಸುತ್ತುವರೆದು ಬಡಿದು ಕೊಂದಿದ್ದಾರೆ.
ಅಲಿಗಢದ ಮೆಹಂದಿ ಗ್ರಾಮದಲ್ಲಿ ಈ ದುರಂತ ಸಂಭವಿಸಿದೆ. ಹುಚ್ಚನ ದಾಳಿಗೆ ಇಬ್ಬರು ಪ್ರಾಣ ತೆತ್ತಿದ್ದಾರೆ. ಜೊತೆಗೆ ಗ್ರಾಮಸ್ಥರ ಕೋಪಕ್ಕೆ ಹುಚ್ಚನೂ ಬಲಿಯಾಗಿದ್ದಾನೆ. ಘಟನೆಯಲ್ಲಿ ಇನ್ನೋರ್ವ ಯುವಕ ಗಂಭೀರವಾಗಿ ಗಾಯಗೊಂಡಿದ್ದಾನೆ. ಈ ಬಗ್ಗೆ ಪ್ರಕರಣ ದಾಖಲಾಗಿದೆ.
ಘಟನೆಯ ಹಿನ್ನೆಲೆ: ಮೃತ ವ್ಯಕ್ತಿ ಮತ್ತು ಆತನ ಪುತ್ರ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದರು. ಈ ವೇಳೆ, ಅಲ್ಲಿಗೆ ಬಂದ ಮಾನಸಿಕ ಅಸ್ವಸ್ಥನೊಬ್ಬ ಏಕಾಏಕಿ ವ್ಯಕ್ತಿಯ ಮೇಲೆ ದೊಣ್ಣೆಯಿಂದ ದಾಳಿ ಮಾಡಿದ್ದಾನೆ. ತಲೆಗೆ ಬಲವಾಗಿ ಹೊಡೆದಿದ್ದರಿಂದ ಆತ ಅಲ್ಲಿಯೇ ಕುಸಿದುಬಿದ್ದಿದ್ದಾನೆ. ಇದನ್ನು ಕಂಡ ವ್ಯಕ್ತಿಯ ಪುತ್ರ ಬಿಡಿಸಲು ಬಂದಾಗ ಆತನ ಮೇಲೂ ಹುಚ್ಚ ಹಲ್ಲೆ ಮಾಡಿದ್ದಾನೆ.
ಇದರಿಂದ ಇಬ್ಬರೂ ಜಮೀನಿನಲ್ಲಿ ರಕ್ತದ ಮಡುವಿನಲ್ಲಿ ಬಿದ್ದಿದ್ದಾರೆ. ಇದನ್ನು ಕಂಡ ಅಲ್ಲಿಯೇ ಕೆಲಸ ಮಾಡುತ್ತಿದ್ದ ಮಹಿಳೆಯರು ಕಿರುಚಾಡಿದ್ದಾರೆ. ಆಗ ಹುಚ್ಚ ಮಹಿಳೆಯರ ಮೇಲೆ ದಾಳಿಗೆ ಮುಂದಾಗಿದ್ದಾನೆ. ಕೆಲವರು ಕಿರುಚುತ್ತಾ ಊರಿನ ಕಡೆಗೆ ಓಡಿ ವಿಷಯ ತಿಳಿಸಿದ್ದಾರೆ.
ಹುಚ್ಚನ ದಾಳಿಯನ್ನು ತಡೆಯಲು ಪಕ್ಕದ ಜಮೀನಿನ ಇನ್ನೊಬ್ಬ ರೈತ ಬಂದಾಗ ಆತನ ಮೇಲೂ ದೊಣ್ಣೆಯಿಂದ ಹಲ್ಲೆ ಮಾಡಿದ್ದಾನೆ. ದುರಂತ ಎಂದರೆ, ಜನರು ಬರುವ ವೇಳೆಗೆ ರೈತನನ್ನು ಬೆಂಕಿ ಹಚ್ಚಿ ಸಜೀವ ದಹನ ಮಾಡಿದ್ದಾನೆ.
ಹುಚ್ಚನನ್ನು ಬಡಿದು ಕೊಂದ ಜನರು: ಹುಚ್ಚನ ದಾಳಿಯನ್ನು ತಿಳಿದ ಜನರು ದೊಣ್ಣೆಗಳ ಸಮೇತ ಓಡಿ ಬಂದಿದ್ದಾರೆ. ಅಷ್ಟೊತ್ತಿಗಾಗಲೇ ಇಬ್ಬರನ್ನು ಆತ ಬಲಿ ತೆಗೆದುಕೊಂಡಿದ್ದ. ಇದನ್ನು ಕಂಡ ಜನರು ಹುಚ್ಚನನ್ನು ಸುತ್ತುವರೆದು ಹಲ್ಲೆ ಮಾಡಿದ್ದಾರೆ. ದೊಣ್ಣೆಗಳಿಂದ ಬಡಿದಿದ್ದಾರೆ. ಇದರಿಂದ ಆತನೂ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಬಳಿಕ ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಲಾಗಿದೆ. ಸ್ಥಳಕ್ಕೆ ಬಂದ ಖಾಕಿ ಪಡೆ, ಮೂವರ ಮೃತದೇಹಗಳನ್ನು ವಶಕ್ಕೆ ಪಡೆದಿದ್ದಾರೆ. ಸ್ಥಳದಲ್ಲಿದ್ದವರ ಹೇಳಿಕೆಯನ್ನು ದಾಖಲಿಸಿಕೊಂಡಿದ್ದಾರೆ.
ಘಟನೆಯ ಬಗ್ಗೆ ಮಾಹಿತಿ ನೀಡಿರುವ ಎಸ್‌ಎಸ್‌ಪಿ ಸಂಜೀವ್ ಸುಮನ್ ಅವರು, 50 ವರ್ಷದ ರೈತನನ್ನು ಮಾನಸಿಕ ಅಸ್ವಸ್ಥನೊಬ್ಬ ಬಡಿದುಕೊಂದಿದ್ದಾನೆ. ಇನ್ನೊಬ್ಬ ರೈತನನ್ನು ಜೀವಂತ ಸುಟ್ಟು ಹಾಕಲಾಗಿದೆ. ರೈತನ ಮಗನ ಮೇಲೆ ಗಂಭೀರ ಹಲ್ಲೆ ನಡೆದಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಬಳಿಕ ಗ್ರಾಮಸ್ಥರೂ ಹುಚ್ಚನನ್ನು ಬಡಿದು ಕೊಂದಿದ್ದಾರೆ. ಗ್ರಾಮದಲ್ಲಿ ಮೂರು ಕೊಲೆಗಳಾಗಿವೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ. ಸ್ಥಳ ಪರಿಶೀಲನೆ ನಡೆಸಲಾಗಿದೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಗ್ರಾಮಸ್ಥರನ್ನು ವಿಚಾರಣೆಗೊಳಪಡಿಸಿ ಮುಂದಿನ ಕಾನೂನು ಕ್ರಮ ಜರುಗಿಸಲಾಗುವುದು ಎಂದರು.