ಹೈದರಾಬಾದ್(ತೆಲಂಗಾಣ): ಮನೆಯಲ್ಲಿ ಮಕ್ಕಳ ಚೇಷ್ಟೆ ಅಷ್ಟಿಷ್ಟಲ್ಲ. ಸದಾ ವಿಶೇಷ ನಿಗಾ ಇಡಲೇಬೇಕು. ಇಲ್ಲದೇ ಇದ್ದರೆ ಮಕ್ಕಳ ತುಂಟಾಟಗಳು ಕೆಲವೊಮ್ಮೆ ದೊಡ್ಡವರಿಗೆ ತಲೆನೋವು ತರಿಸುತ್ತವೆ. ಇಂಥದ್ದೇ ಘಟನೆ ತೆಲಂಗಾಣದಲ್ಲಿ ನಡೆದಿದೆ. ಹೌದು, ಆಟವಾಡುತ್ತಿದ್ದ ಮಕ್ಕಳು ಸೀದಾ ರೈಲು ಹತ್ತಿದ ಘಟನೆ ರಂಗಾರೆಡ್ಡಿ ಜಿಲ್ಲೆಯ ರಾಜೇಂದ್ರನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮಂಗಳವಾರ ನಡೆದಿದೆ.
ತಾವು ಎಲ್ಲಿಗೆ ಹೋಗುತ್ತಿದ್ದೇವೆ ಎಂಬುದು ತಿಳಿಯದೇ ಆಟವಾಡುತ್ತಿದ್ದ ಮಕ್ಕಳು ರೈಲು ಹತ್ತಿದ್ದಾರೆ. ದಾರಿ ತಿಳಿಯದೇ ಮತ್ತೊಂದು ಸ್ಟೇಷನ್‌ನಲ್ಲಿ ಇಳಿದಿದ್ದಾರೆ. ಒಂಟಿಯಾಗಿದ್ದ ಮಕ್ಕಳನ್ನು ಗಮನಿಸಿದ ಆಟೋ ಚಾಲಕ ಅವರನ್ನು ಹಿಂಬಾಲಿಸಿದ್ದಾನೆ. ಇಬ್ಬರೊಂದಿಗೆ ಯಾರೂ ಇಲ್ಲವೆಂದು ಖಚಿತಪಡಿಸಿಕೊಂಡು ಅಪಹರಿಸಲು ಯತ್ನಿಸಿದ್ದಾನೆ. ಆದರೆ ವಿಚಾರ ತಿಳಿದು ಪೊಲೀಸರು ಸ್ಥಳಕ್ಕಾಗಮಿಸಿದಾಗ ಆತನ ಯೋಜನೆ ಉಲ್ಟಾ ಆಗಿದೆ.
ರಾಜೇಂದ್ರನಗರ ಟ್ರಾಫಿಕ್ ಇನ್ಸ್‌ಪೆಕ್ಟರ್ ಬಿಲ್ಲಾ ಕಿರಣ್‌ಕುಮಾರ್ ಅವರು ಮಾಹಿತಿ ನೀಡಿದ್ದು, 6 ಮತ್ತು 4 ವರ್ಷದ ಇಬ್ಬರು ಗಂಡು ಮಕ್ಕಳು ಮಂಗಳವಾರ ಮಧ್ಯಾಹ್ನ 3 ಗಂಟೆಗೆ ಬುದ್ವೆಲ್ ರೈಲು ನಿಲ್ದಾಣದಲ್ಲಿ ಶಂಶಾಬಾದ್‌ನ ವಾಜನಗರ ಮಾರ್ಗವಾಗಿ ಬರುತ್ತಿದ್ದ ರೈಲಿನಿಂದ ಇಳಿದಿದ್ದಾರೆ. ಮನೆಗೆ ಹೋಗುವ ದಾರಿ ತಿಳಿಯದೆ ಹೊರಬಂದು ಆರಂಗರ ಚೌಕವನ್ನು ಕಾಲ್ನಡಿಗೆಯಲ್ಲೇ ದಾಟಿದಾಗ ರಾಜೇಂದ್ರನಗರ ಸಂಚಾರ ಠಾಣೆ ಬಳಿ ಆಟೋ ಚಾಲಕ ಅಪಹರಣಕ್ಕೆ ಯತ್ನಿಸಿದ್ದಾನೆ. ಆತನನ್ನು ಹಿಡಿಯುವಷ್ಟರಲ್ಲಿ ಓಡಿ ಹೋಗಿದ್ದಾನೆ.
ಕೂಡಲೇ ಇಬ್ಬರು ಬಾಲಕರನ್ನು ಕರೆತಂದು ವಿಚಾರಿಸಿದರೂ ಸರಿಯಾದ ಉತ್ತರ ನೀಡಲಿಲ್ಲ. ಶಂಶಾಬಾದ್‌ನಿಂದ ಬಂದಿರುವುದಾಗಿ ಹಿರಿಯ ಬಾಲಕ ಹೇಳಿದ್ದರಿಂದ ಪೊಲೀಸರು ಅಲರ್ಟ್ ಆಗಿದ್ದಾರೆ. ಈ ನಡುವೆ ಶಂಶಾಬಾದ್ ಹೊರವಲಯದ ಗುಡಿಸಲಿನಲ್ಲಿ ವಾಸವಿದ್ದ ಮಕ್ಕಳ ತಾಯಿ ಶೈಲಜಾ ಎಂಬವರು ತಮ್ಮ ಮಕ್ಕಳು ಎಲ್ಲಿಗೆ ಹೋಗಿದ್ದಾರೆ ಎಂದು ಗಾಬರಿಗೊಂಡಿದ್ದರು. ಮಾಹಿತಿ ಪಡೆದು ರಾಜೇಂದ್ರನಗರ ಸಂಚಾರ ಪೊಲೀಸರನ್ನು ಸಂಪರ್ಕಿಸಿದ್ದಾರೆ. ಬಳಿಕ ಟ್ರಾಫಿಕ್ ಇನ್ಸ್‌ಪೆಕ್ಟರ್ ಆಕೆಗೆ ಕೌನ್ಸೆಲಿಂಗ್ ಮಾಡಿ ಮಕ್ಕಳನ್ನು ಒಪ್ಪಿಸಿದ್ದಾರೆ.
ಮಕ್ಕಳ ಬಗ್ಗೆ ಎಚ್ಚರವಿರಲಿ: ಮಕ್ಕಳೊಂದಿಗೆ ಜಾಗರೂಕರಾಗಿರಿ ಎಂದು ಸಂಚಾರ ಪೊಲೀಸರು ಸಲಹೆ ನೀಡಿದ್ದಾರೆ. ವಿಶೇಷವಾಗಿ, ರಜಾ ದಿನಗಳಲ್ಲಿ ಅವರ ಮೇಲೆ ನಿಗಾ ಇಡಲೇಬೇಕು ಎಂದು ತಿಳಿಸಿದ್ದಾರೆ. ನೀವು ಎಲ್ಲಿಗಾದರೂ ಹೋಗಬೇಕಿದ್ದರೆ ಮಕ್ಕಳು ಮನೆಯ ಹತ್ತಿರವೇ ಇರುವಂತೆ ಬುದ್ಧಿಮಾತು ಹೇಳಬೇಕು ಎಂದಿದ್ದಾರೆ. ಕೆಲವೊಮ್ಮೆ ನಿರ್ಲಕ್ಷ್ಯದಿಂದ ಭಾರೀ ಬೆಲೆ ತೆರಬೇಕಾಗುತ್ತದೆ ಎಂದು ಪೊಲೀಸರು ಎಚ್ಚರಿಸಿದ್ದಾರೆ.
ಇದನ್ನೂ ಓದಿ: ಬೆಂಗಳೂರು: ಕೆಲಸಕ್ಕೆಂದು ತೆರಳಿದ್ದ ಯುವತಿ ಅನುಮಾನಾಸ್ಪದ ಸಾವು - Young Woman Died