ರಂಗಾರೆಡ್ಡಿ(ತೆಲಂಗಾಣ): ಪೊಲೀಸರಿಂದ ತಪ್ಪಿಸಿಕೊಂಡು ಓಡುತ್ತಿದ್ದ ವೇಳೆ ಎಬಿವಿಪಿ ಮಹಿಳಾ ರಾಜ್ಯ ಕಾರ್ಯದರ್ಶಿಯನ್ನು ಮಹಿಳಾ ಕಾನ್ಸ್ಟೇಬಲ್ ಕೂದಲು ಹಿಡಿದು ಎಳೆದು ಕೆಳಗೆ ಬೀಳಿಸಿರುವ ಘಟನೆಯ ವಿಡಿಯೋ ವೈರಲ್ ಆಗುತ್ತಿದೆ.
ನಡೆದ್ದಾದರೂ ಏನು?: ಕೃಷಿ ಮತ್ತು ತೋಟಗಾರಿಕಾ ವಿಶ್ವವಿದ್ಯಾಲಯಗಳ ಭೂಮಿಯನ್ನು ಹೈಕೋರ್ಟ್ ನಿರ್ಮಾಣಕ್ಕೆ ಮಂಜೂರು ಮಾಡಬಾರದು ಎಂದು ಆಗ್ರಹಿಸಿ ಕೆಲ ದಿನಗಳಿಂದ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸುತ್ತಿದ್ದಾರೆ. ಈ ಪ್ರತಿಭಟನೆಗೆ ಎಬಿವಿಪಿ ಮುಖಂಡರು ಬುಧವಾರ ಬೆಂಬಲ ಘೋಷಿಸಿದ್ದಲ್ಲದೇ ರಾಜೇಂದ್ರನಗರದ ವಿಶ್ವವಿದ್ಯಾನಿಲಯದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿ ವಿದ್ಯಾರ್ಥಿಗಳೊಂದಿಗೆ ಕೆಲಕಾಲ ಧರಣಿ ನಡೆಸಿದ್ದರು. ಪ್ರತಿಭಟನೆ ತೀವ್ರಗೊಳ್ಳುತ್ತಿದ್ದಂತೆ ಪೊಲೀಸರು ಎಬಿವಿಪಿ ಕಾರ್ಯಕರ್ತರನ್ನು ವಶಕ್ಕೆ ಪಡೆದು ಡಿಸಿಎಂ ವ್ಯಾನ್‌ನಲ್ಲಿ ರಂಗಾರೆಡ್ಡಿ ಜಿಲ್ಲೆಯ ರಾಜೇಂದ್ರನಗರ ಠಾಣೆಗೆ ಕರೆದೊಯ್ದರು.
ಈ ವೇಳೆ ಎಬಿವಿಪಿ ಸಂಘಟನೆಯ ರಾಜ್ಯ ಕಾರ್ಯದರ್ಶಿ ಝಾನ್ಸಿ ಅವರು ಪೊಲೀಸರಿಂದ ತಪ್ಪಿಸಿಕೊಂಡು ಓಡುತ್ತಿರುವಾಗ ಹಿಂದಿನಿಂದ ದ್ವಿಚಕ್ರದಲ್ಲಿ ಬಂದ ಇಬ್ಬರು ಮಹಿಳಾ ಕಾನ್ಸ್ಟೇಬಲ್ಸ್ ಆಕೆಯ ಕೂದಲನ್ನು ಹಿಡಿದು ಎಳೆದಿದ್ದಾರೆ. ಪರಿಣಾಮ ಆಕೆ ರಸ್ತೆ ಮೇಲೆ ಬಿದ್ದಿದ್ದಾರೆ. ತಕ್ಷಣವೇ ಪೊಲೀಸ್ ಸಿಬ್ಬಂದಿ ಗಾಡಿ ನಿಲ್ಲಿಸಿದರೂ ಆಕೆಯ ಕೂದಲನ್ನು ಮಾತ್ರ ಬಿಡದೇ ಹಿಡಿದುಕೊಂಡಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಇಬ್ಬರ ಮಹಿಳಾ ಪೊಲೀಸ್ ಸಿಬ್ಬಂದಿಯ ದುರ್ವತೆನೆಯನ್ನು ಪ್ರತಿಪಕ್ಷಗಳು ಮತ್ತು ನೆಟ್ಟಿಗರು ಟೀಕಿಸುತ್ತಿದ್ದಾರೆ. ಮಹಿಳಾ ಪೊಲೀಸರ ವಿರುದ್ಧ ಸಮಗ್ರ ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಸೈಬರಾಬಾದ್ ಪೊಲೀಸ್ ಆಯುಕ್ತ ಅವಿನಾಶ್ ಮಹಂತಿ ತಿಳಿಸಿದ್ದಾರೆ.
ಬಿಆರ್ಎಸ್ ಎಂಎಲ್ಸಿ ಕವಿತಾ ಖಂಡನೆ: ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದವರ ಮೇಲೆ ತೆಲಂಗಾಣ ಪೊಲೀಸರು ತೆಗೆದುಕೊಂಡಿರುವ ಕ್ರಮ ಅಮಾನವೀಯ. ಈ ಘಟನೆ ಅತ್ಯಂತ ಕಳವಳಕಾರಿಯಾಗಿದೆ. ವಿದ್ಯಾರ್ಥಿಗಳನ್ನು ಎಳೆದುಕೊಂಡು ಹೋಗುವುದು ಮತ್ತು ಅವರ ಮೇಲೆ ದುರ್ವತನೆ ತೋರುವುದು ಸ್ವೀಕಾರಾರ್ಹವಲ್ಲ. ಈ ದುರಹಂಕಾರದ ವರ್ತನೆಗೆ ತೆಲಂಗಾಣ ಪೊಲೀಸರು ಕ್ಷಮೆಯಾಚಿಸಬೇಕು. ಮಾನವ ಹಕ್ಕುಗಳ ಆಯೋಗವು ಸಂಬಂಧಪಟ್ಟವರ ವಿರುದ್ಧ ಶೀಘ್ರ ಮತ್ತು ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.
ಇನ್ನು, ಈ ಘಟನೆಗೆ ಸಿಪಿಎಂ ರಾಜ್ಯ ಕಾರ್ಯದರ್ಶಿ, ಮಾಜಿ ಶಾಸಕ ಜೂಲಕಾಂತಿ ರಂಗಾರೆಡ್ಡಿ ಮಾತನಾಡಿ, ಹೈಕೋರ್ಟ್ ನಿರ್ಮಾಣಕ್ಕೆ ಬೇರೆಡೆ ಜಾಗ ಮಂಜೂರು ಮಾಡಬೇಕು ಎಂದಿದ್ದಾರೆ. ಅಲ್ಲದೆ ಬುಧವಾರ ನಡೆದ ವಿದ್ಯಾರ್ಥಿಗಳ ಪ್ರತಿಭಟನೆಗೆ ಬೆಂಬಲವನ್ನು ಅವರು ಘೋಷಿಸಿದ್ದರು.
ಇದನ್ನೂ ಓದಿ: ತೆಲಂಗಾಣ ಸರ್ಕಾರಿ ಅಧಿಕಾರಿ ಬಳಿ ₹100 ಕೋಟಿ ಮೌಲ್ಯದ ಆಸ್ತಿ! ಎಸಿಬಿ ದಾಳಿಯಲ್ಲಿ ಬಹಿರಂಗ