ಸೂರತ್ (ಗುಜರಾತ್): ಹಿಂದೂ ಮುಖಂಡರ ಹತ್ಯೆಗೆ ಸಂಚು ಮತ್ತು ಕೊಲೆ ಬೆದರಿಕೆ ಆರೋಪದಡಿ ಗುಜರಾತ್ನ ಸೂರತ್ ಜಿಲ್ಲೆಯಲ್ಲಿ ವ್ಯಕ್ತಿಯೋರ್ವನನ್ನು ಬಂಧಿಸಲಾಗಿದೆ. ಕಮ್ರೇಜ್ ತಾಲೂಕಿನ ಕರ್ಶ್ ಗ್ರಾಮದ ಮೊಹಮ್ಮದ್ ಸೊಹೈಲ್ ಅಬೂಬಕರ್ ಮೌಲ್ವಿ ಎಂಬಾತನೇ ಬಂಧಿತ ಆರೋಪಿ ಎಂದು ಗುರುತಿಸಲಾಗಿದೆ. ಈತ ಪಾಕಿಸ್ತಾನ ಮತ್ತು ನೇಪಾಳದ ನಂಟು ಹೊಂದಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಸನಾತನ ಸಂಘದ ರಾಷ್ಟ್ರೀಯ ಅಧ್ಯಕ್ಷ ಉಪದೇಶ್ ರಾಣಾ, ಹೈದರಾಬಾದ್ನ ಬಿಜೆಪಿ ಶಾಸಕ ರಾಜಾ ಸಿಂಗ್ ಮತ್ತು ಬಿಜೆಪಿಯ ಮಾಜಿ ವಕ್ತಾರೆ ನೂಪುರ್ ಶರ್ಮಾ ಅವರ ಹತ್ಯೆಗೆ ಸಂಚು ರೂಪಿಸಿ ಕೊಲೆ ಬೆದರಿಕೆ ಹಾಕಲಾಗಿತ್ತು. ಈ ಹಿಂದೂ ನಾಯಕರ ಹಲವು ಹೇಳಿಕೆಗಳಿಂದಾಗಿಯೇ ಇವರನ್ನು ಗುರಿಯಾಗಿಸಿಕೊಳ್ಳಲಾಗಿತ್ತು ಎಂದು ಸೂರತ್ ಪೊಲೀಸ್ ಕಮಿಷನರ್ ಅನುಪಮ್ ಸಿಂಗ್ ಗೆಹ್ಲೋಟ್ ಬಹಿರಂಗ ಪಡಿಸಿದ್ದಾರೆ.
ಈ ಸಂಬಂಧ 27 ವರ್ಷದ ಆರೋಪಿ ಮೊಹಮ್ಮದ್ ಸೊಹೈಲ್ನನ್ನು ಶನಿವಾರ ಬಂಧಿಸಲಾಗಿದೆ. ಈತ ಮಹಾರಾಷ್ಟ್ರದ ನಂದುರ್ಬಾರ್ ಜಿಲ್ಲೆಯ ನಿವಾಸಿಯಾಗಿದ್ದು, ಸೂರತ್ ಜಿಲ್ಲೆಯ ಕರ್ಶ್ ಗ್ರಾಮದಲ್ಲಿ ಮದರಸಾದಲ್ಲಿ ದೀರ್ಘಕಾಲದಿಂದ ಮಕ್ಕಳಿಗೆ ಪಾಠ ಮಾಡುತ್ತಿದ್ದಾನೆ. ಪಾಕಿಸ್ತಾನದ ಡೊಂಗರ್ ಎಂಬ ವ್ಯಕ್ತಿ ಮತ್ತು ನೇಪಾಳದ ಶೆಹನಾಜ್ ಎಂಬ ವ್ಯಕ್ತಿಯೊಂದಿಗೆ ಈತ ಕಳೆದ ಒಂದೂವರೆ ವರ್ಷದಿಂದ ಸಂಪರ್ಕ ಹೊಂದಿದ್ದ. ನೇಪಾಳದ ಶೆಹನಾಜ್ ಮೊಹಮ್ಮದ್ಗೆ ಪ್ರಚೋದಿಸುತ್ತಿದ್ದ. ಈ ಕೃತ್ಯ ಎಸಗಲು ಒಂದು ಕೋಟಿ ರೂಪಾಯಿ ಮತ್ತು ಪಾಕಿಸ್ತಾನದಿಂದ ಶಸ್ತ್ರಾಸ್ತ್ರಗಳನ್ನು ಖರೀದಿಸಲು ಸಂಚು ನಡೆಸುತ್ತಿರುವುದು ತನಿಖೆಯಿಂದ ಗೊತ್ತಾಗಿದೆ ಎಂದು ತಿಳಿಸಿದ್ದಾರೆ.
ಆರೋಪಿಯು ಪಾಕಿಸ್ತಾನ ಸೇರಿದಂತೆ ಇತರ ದೇಶಗಳಿಗೆ ವರ್ಚುವಲ್ ಕರೆಗಳನ್ನು ಮಾಡಿದ್ದಾನೆ. ವಾಟ್ಸಪ್ ಸೇರಿದಂತೆ ಇತರೆ ಸಾಮಾಜಿಕ ಜಾಲತಾಣಗಳಲ್ಲಿ ಚಾಟ್ ಮಾಡಿ ಮಾತನಾಡುತ್ತಿದ್ದ. ತಾವು ಟಾರ್ಗೆಟ್ ಮಾಡುತ್ತಿರುವ ಹಿಂದೂ ನಾಯಕರಿಗೆ ಕೋಡ್ ವರ್ಡ್ ಇಡಲಾಗಿತ್ತು. ಅಷ್ಟೇ ಅಲ್ಲ, ಪಾಕಿಸ್ತಾನ, ವಿಯೆಟ್ನಾಂ, ಇಂಡೋನೇಷಿಯಾ, ಕಜಕಿಸ್ತಾನ್, ಲಾವೋಸ್‌ನಂತಹ ವಿವಿಧ ದೇಶಗಳ ಕೋಡ್‌ಗಳನ್ನು ಹೊಂದಿರುವ ವಾಟ್ಸಾಪ್ ಮೊಬೈಲ್ ಸಂಖ್ಯೆಗಳನ್ನು ಹೊಂದಿರುವವರೊಂದಿಗೂ ಸಂಪರ್ಕ ಆರೋಪಿ ಹೊಂದಿದ್ದ ಎಂದು ಪೊಲೀಸ್ ಕಮಿಷನರ್ ಮಾಹಿತಿ ನೀಡಿದ್ದಾರೆ.
ಸಂಚು ಬಯಲಾಗಿದ್ದು ಹೇಗೆ: ಸೂರತ್‌ನ ಉಪದೇಶ್ ರಾಣಾಗೆ ಬೆದರಿಕೆ ಹಾಕಲಾಗಿತ್ತು. ಅಲ್ಲದೇ, ಇವರ ಸನಾತನ ಸಂಘದ ಕಮಲೇಶ್ ತಿವಾರಿ ಅವರನ್ನು 2019ರಲ್ಲಿ ಲಖನೌದಲ್ಲಿ ಹತ್ಯೆ ಮಾಡಲಾಗಿತ್ತು. ಹೀಗಾಗಿ ಉಪದೇಶ್ ರಾಣಾಗೆ ಎಕ್ಸ್ ಕೆಟಗರಿ ಭದ್ರತೆ ನೀಡಲಾಗಿದೆ. ಬೆದರಿಕೆ ಸಂಬಂಧ ತನಿಖೆ ವೇಳೆ ಈ ಸಂಚು ಬಯಲಾಗಿದೆ.
ಈ ಕುರಿತು ಮೊಹಮ್ಮದ್ ಸೊಹೈಲ್ ಅಬೂಬಕರ್ ಮೌಲ್ವಿಯ ಚಲನವಲನಗಳ ಬಗ್ಗೆಯೂ ಮಾಹಿತಿ ಬಂದಿತ್ತು. ಆದ್ದರಿಂದ ಆತನ ಮೇಲೆ ನಿಗಾ ಇರಿಸಲಾಗಿತ್ತು. ಕೊನೆಗೆ ಸೂರತ್‌ನ ಚೌಕ್ ಬಜಾರ್ ಪ್ರದೇಶದಲ್ಲಿರುವ ಮನೆಗೆ ತೆರಳಿ ಆರೋಪಿಯನ್ನು ವಶಕ್ಕೆ ಪಡೆದು ಮೊಬೈಲ್ ಪರಿಶೀಲಿಸಿದಾಗ ಮತ್ತಷ್ಟು ಮಾಹಿತಿ ಬಹಿರಂಗವಾಗಿದೆ. ಲೋಕಸಭೆ ಚುನಾವಣೆ ಮುಗಿಯುವ ಮುನ್ನವೇ ದಾಳಿ ನಡೆಸಲು ಸಂಚು ರೂಪಿಸಿ ದೇಶದ ಶಾಂತಿಯನ್ನು ಹದಗೆಡಿಸಲು ಬಯಸಿದ್ದರಾ ಎಂಬ ಬಗ್ಗೆಯೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಸದ್ಯ ಆರೋಪಿಯ ವಿರುದ್ಧ ಭಾರತೀಯ ದಂಡ ಸಂಹಿತೆ ಸೆಕ್ಷನ್ 153 (ಎ)(ಧರ್ಮ, ಜನಾಂಗದ ಮೇಲೆ ವಿನಾಕಾರಣ ನಿಂದನೆ ಅಥವಾ ದಾಳಿಯಲ್ಲಿ ತೊಡಗಿರುವುದು), 467, 468 ಮತ್ತು 471 (ದಾಖಲೆಗಳು ಅಥವಾ ಎಲೆಕ್ಟ್ರಾನಿಕ್ ದಾಖಲೆಗಳ ನಕಲಿ) ಮತ್ತು ಸೆಕ್ಷನ್ 120 (ಬಿ) (ಕ್ರಿಮಿನಲ್ ಪಿತೂರಿ) ಹಾಗೂ ಮಾಹಿತಿ ತಂತ್ರಜ್ಞಾನ ಕಾಯ್ದೆಯಡಿ ಕೇಸ್ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ: ಪೂಂಚ್‌ನಲ್ಲಿ ವಾಯುಪಡೆ ವಾಹನದ ಮೇಲೆ ಉಗ್ರರ ದಾಳಿ: ಓರ್ವ ಯೋಧ ಹುತಾತ್ಮ, ನಾಲ್ವರಿಗೆ ಗಾಯ