ನವದೆಹಲಿ: ಉತ್ತರಪ್ರದೇಶ, ಹರಿಯಾಣ, ಅಸ್ಸಾಂ ಸೇರಿದಂತೆ ಹಲವು ರಾಜ್ಯಗಳಲ್ಲಿ 'ಆಪರೇಷನ್ ಬುಲ್ಡೋಜರ್' ನಡೆಸಿದ ಕ್ರಮವನ್ನು ಸುಪ್ರೀಂಕೋರ್ಟ್ ಟೀಕಿಸಿದೆ. ಕ್ರಿಮಿನಲ್ ಪ್ರಕರಣಗಳಲ್ಲಿ ಆರೋಪಿಗಳಾಗಿದ್ದರೆ, ಅಂಥವರ ಮನೆಯನ್ನು ಕೆಡವಿದರೆ ಹೇಗೆ?. ಅದು ಅಕ್ರಮವಾಗಿದ್ದರೆ ಕಾನೂನು ಪ್ರಕಾರ ಕೈಗೊಳ್ಳಬೇಕೇ ವಿನಹಃ ಆರೋಪಿ ಎಂದಾಕ್ಷಣ ಶಿಕ್ಷೆ ನೀಡುವುದಲ್ಲ ಎಂದು ಹೇಳಿದೆ.
ಮನೆಗಳ ಮೇಲೆ ಬುಲ್ಡೋಜರ್ ಕ್ರಮವನ್ನು ವಿರೋಧಿಸಿ ಸಲ್ಲಿಸಲಾಗಿದ್ದ ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಬಿ.ಆರ್.ಗವಾಯಿ ಮತ್ತು ನ್ಯಾಯಮೂರ್ತಿ ಕೆ.ವಿ.ವಿಶ್ವನಾಥನ್ ಅವರಿದ್ದ ಪೀಠವು ಈ ರೀತಿ ಅಭಿಪ್ರಾಯ ವ್ಯಕ್ತಪಡಿಸಿದೆ.
ಕೆಲವು ರಾಜ್ಯಗಳಲ್ಲಿ ಇತ್ತೀಚೆಗೆ ಆಪರೇಷನ್ ಬುಲ್ಡೋಜರ್ ಕ್ರಮಗಳು ಹೆಚ್ಚಾಗಿವೆ ಎಂಬುದನ್ನು ಗಮನಿಸಿದ ಕೋರ್ಟ್, ಕ್ರಿಮಿನಲ್ ಪ್ರಕರಣಗಳಲ್ಲಿ ಆರೋಪಿಗಳಾಗಿದ್ದರೆ ಅವರ ಮನೆಗಳನ್ನು ಕೆಡವಲು ಹೇಗೆ ಸಾಧ್ಯ ಎಂದು ಕೇಂದ್ರ ಸರ್ಕಾರವನ್ನು ಪ್ರಶ್ನಿಸಿತು. ಈ ಕುರಿತು ರಾಷ್ಟ್ರಮಟ್ಟದಲ್ಲಿ ಸೂಕ್ತ ಮಾರ್ಗಸೂಚಿ ರೂಪಿಸಲಾಗುವುದು ಎಂದು ಇದೇ ವೇಳೆ ಹೇಳಿತು.
'ಯಾವುದೇ ಪ್ರಕರಣದಲ್ಲಿ ಆರೋಪಿಯಾಗಿದ್ದರೆ ಆತನ ಮನೆಯನ್ನು ಕೆಡವಿದರೆ ಹೇಗೆ? ಒಬ್ಬ ವ್ಯಕ್ತಿಯು ತಪ್ಪಿತಸ್ಥನೆಂದು ಕಂಡು ಬಂದರೂ, ಕಾನೂನು ರೀತಿಯಲ್ಲಿ ಮಾತ್ರ ಅವನಿಗೆ ಶಿಕ್ಷೆ ನೀಡಬೇಕು. ಅದು ಬಿಟ್ಟು ಆತನ ಮನೆಯನ್ನು ಕೆಡುವುದಲ್ಲ. ಹಾಗಂತ ಅಕ್ರಮವಾಗಿ ಕಟ್ಟಿದ ಕಟ್ಟಡಗಳನ್ನು ರಕ್ಷಿಸಬೇಕು ಎಂದಲ್ಲ. ಕಾನೂನು ಪ್ರಕಾರ ಮಾತ್ರ ಕ್ರಮ ಜರುಗಿಸಬೇಕು. ಅಕ್ರಮ ಕಟ್ಟಡಗಳನ್ನು ನೆಲಸಮ ಮಾಡುವ ಬಗ್ಗೆ ಮಾರ್ಗಸೂಚಿಗಳನ್ನು ರೂಪಿಸಬೇಕಾಗಿದೆ. ಈ ಬಗ್ಗೆ ಸರ್ಕಾರ ಮತ್ತು ಜನರು ಸಲಹೆಗಳನ್ನು ನೀಡಬಹುದು. ಶೀಘ್ರವೇ ಅಂತಿಮ ತೀರ್ಮಾನ ಕೈಗೊಳ್ಳುತ್ತೇವೆ ಎಂದು ಪೀಠ ಸ್ಪಷ್ಟಪಡಿಸಿದೆ. ನಂತರ, ಅರ್ಜಿಯ ಮುಂದಿನ ವಿಚಾರಣೆಯನ್ನು ಸೆಪ್ಟೆಂಬರ್ 17ಕ್ಕೆ ಮುಂದೂಡಲಾಯಿತು.
ಬುಲ್ಡೋಜರ್ ಕ್ರಮವೇಕೆ?: ಹಲವು ರಾಜ್ಯಗಳಲ್ಲಿ ವಿವಿಧ ಪ್ರಕರಣಗಳಲ್ಲಿ ಭಾಗಿಯಾದ ಆರೋಪಿಗಳಿಗೆ ಸೇರಿದ ಕಟ್ಟಡಗಳನ್ನು ಬುಲ್ಡೋಜರ್ ಮೂಲಕ ನೆಲಸಮ ಮಾಡುವ ಕಾರ್ಯವನ್ನು ಆಯಾ ಸರ್ಕಾರಗಳು ನಡೆಸಿದ್ದರು. ಇದು ಭಾರೀ ಚರ್ಚೆಗೆ ಗ್ರಾಸವಾಗಿತ್ತು. ಕಳೆದ ವರ್ಷ ಹರಿಯಾಣದ ನುಹ್ ಜಿಲ್ಲೆಯಲ್ಲಿ ನಡೆದ ಘರ್ಷಣೆಯ ನಂತರ, ಅಧಿಕಾರಿಗಳು ಅಕ್ರಮವಾಗಿ ನಿರ್ಮಿತ ಕಟ್ಟಡಗಳನ್ನು ಕೆಡವಿದ್ದರು.
ಇವೆಲ್ಲವೂ ಗಲಭೆಕೋರರಿಗೆ ಸೇರಿದ ಕಟ್ಟಡಗಳಾಗಿದ್ದವು. ಘರ್ಷಣೆಯ ವೇಳೆ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿದ್ದರು. ಬಳಿಕ ಸರ್ವೆ ನಡೆಸಿದ ಜಿಲ್ಲಾಡಳಿತ ಅಕ್ರಮವಾಗಿ ನಿರ್ಮಿಸಲಾಗಿದ್ದ ಎಲ್ಲ ಕಟ್ಟಡಗಳನ್ನು ಕೆಡವಿ ಕಠಿಣ ಶಿಕ್ಷೆ ನೀಡಿತ್ತು. ಇದರಂತೆ ಉತ್ತರಪ್ರದೇಶದಲ್ಲೂ ಸಿಎಂ ಯೋಗಿ ಆದಿತ್ಯನಾಥ್ ಸರ್ಕಾರ ಕೂಡ ವಿವಿಧ ಪ್ರಕರಣಗಳಳ್ಲಿ ಬಾಗಿಯಾಗಿದ್ದ ಆರೋಪಿಗಳ ಮನೆ ಮೇಲೆ ಬುಲ್ಡೋಜರ್ ಹತ್ತಿಸಿತ್ತು.
ಇದನ್ನೂ ಓದಿ: ಉತ್ತರಾಖಂಡ್: ಹಲ್ದ್ವಾನಿಯಲ್ಲಿ ಮುಂದುವರೆದ ಒತ್ತುವರಿ ತೆರವು ಕಾರ್ಯಾಚರಣೆ, ಮತ್ತೆ ಬುಲ್ಡೋಜರ್ಗಳ ಸದ್ದು