ನವದೆಹಲಿ: ವೈವಾಹಿಕ, ಆಸ್ತಿ ವಿವಾದ, ಅಪಘಾತ, ಭೂಸ್ವಾಧೀನ ಸೇರಿದಂತೆ ವಿಲೇವಾರಿಯಾಗದೇ ಬಾಕಿ ಉಳಿದ ವಿವಿಧ ಪ್ರಕರಣಗಳನ್ನು ತ್ವರಿತವಾಗಿ ಇತ್ಯರ್ಥ ಮಾಡಲು ಸುಪ್ರೀಂ ಕೋರ್ಟ್ ಜುಲೈ 29 ರಿಂದ ಆಗಸ್ಟ್ 3ರ ವರೆಗೆ ವಿಶೇಷ ಲೋಕ ಅದಾಲತ್ ನಡೆಸಲಿದೆ. ದೇಶದ ಅತ್ಯುನ್ನತ ನ್ಯಾಯಾಲಯ ಸ್ಥಾಪನೆಯಾಗಿ 2024 ಕ್ಕೆ 75 ವರ್ಷವಾಗಲಿದ್ದು, ಇದರ ವಿಶೇಷಾರ್ಥ ಅದಾಲತ್ ಆಯೋಜಿಸಲಾಗುತ್ತಿದೆ.
ಈ ಬಗ್ಗೆ ಮಂಗಳವಾರ ಅಧಿಕೃತ ಹೇಳಿಕೆ ಬಿಡುಗಡೆ ಮಾಡಿರುವ ನ್ಯಾಯಾಲಯ, ಜನರ ಅನುಕೂಲಕ್ಕಾಗಿ ಇತ್ಯರ್ಥವಾಗದೇ ಬಾಕಿ ಉಳಿದ ವಿವಿಧ ರೀತಿಯ ಪ್ರಕರಣಗಳನ್ನು ಸೌಹಾರ್ದಯುತವಾಗಿ ವಿಲೇವಾರಿ ಮಾಡಲು ವಿಶೇಷ ಲೋಕ ಅದಾಲತ್ ಆಯೋಜಿಸಲಾಗುತ್ತಿದೆ. ಜುಲೈ 29 ರಿಂದ ಆಗಸ್ಟ್ 3ರ ವರೆಗೆ ಅರ್ಥಾತ್ 6 ದಿನ ನಡೆಯಲಿದೆ. ನ್ಯಾಯ ಮತ್ತು ಪ್ರಕರಣ ಇತ್ಯರ್ಥ ಮಾಡಿಕೊಳ್ಳಲು ಕಾಯುತ್ತಿರುವ ಜನರು ಇದರಲ್ಲಿ ಭಾಗವಹಿಸಬಹುದು ಎಂದು ತಿಳಿಸಿದೆ.
1950ರ ಜನವರಿ 26 ರಂದು ಸುಪ್ರೀಂಕೋರ್ಟ್ ಅಸ್ತಿತ್ವಕ್ಕೆ ಬಂದಿತು. ಸ್ಥಾಪನೆಯಾಗಿ 75 ವರ್ಷ ತುಂಬಲಿದ್ದು, ಇದರ ವಿಶೇಷವಾಗಿ ಲೋಕ ಅದಾಲತ್ ಹಮ್ಮಿಕೊಳ್ಳಲಾಗುತ್ತಿದೆ. ಲೋಕ ಅದಾಲತ್ ನ್ಯಾಯಾಂಗ ವ್ಯವಸ್ಥೆಯ ಪ್ರಮುಖ ವಿಧಾನವಾಗಿದೆ. ಇದು ನ್ಯಾಯಪೀಠದ ಜೊತೆಗೆ ಸೌಹಾರ್ದಯುತವಾಗಿ ಪ್ರಕರಣಗಳನ್ನು ಸ್ಥಳದಲ್ಲೇ ಇತ್ಯರ್ಥ ಮಾಡಲು ಮತ್ತು ತ್ವರಿತ ನ್ಯಾಯ ಪರಿಹಾರವಾಗಿದೆ ಎಂದು ಹೇಳಿಕೆಯಲ್ಲಿ ತಿಳಿಸಿದೆ.
ಯಾವೆಲ್ಲಾ ಪ್ರಕರಣಗಳಿಗೆ ಅವಕಾಶ: ಸುಪ್ರೀಂ ಕೋರ್ಟ್‌ನಲ್ಲಿ ಹಲವು ದಿನಗಳಿಂದ ಬಾಕಿ ಇರುವ ವೈವಾಹಿಕ, ಆಸ್ತಿ ವಿವಾದಗಳು, ಮೋಟಾರು ಅಪಘಾತ ಕೇಸ್ಗಳು, ಭೂಸ್ವಾಧೀನ, ಪರಿಹಾರ, ಸೇವೆ ಮತ್ತು ಕಾರ್ಮಿಕ ಸೇರಿದಂತೆ ಇತ್ಯರ್ಥ ಮಾಡಲು ಅವಕಾಶವಿರುವ ಎಲ್ಲ ಪ್ರಕರಣಗಳನ್ನು ತ್ವರಿತ ವಿಲೇವಾರಿಗೆ ಅನುಕೂಲವಾಗುವಂತೆ ಪರಿಗಣನೆಗೆ ತೆಗೆದುಕೊಳ್ಳಲಾಗುವುದು ಎಂದು ಸುಪ್ರಿಂ ಕೋರ್ಟ್ ತಿಳಿಸಿದೆ.
ಇದನ್ನೂ ಓದಿ: 'ಹಮಾರೆ ಬಾರಾ' ಸಿನಿಮಾ ಬಿಡುಗಡೆಗೆ ಸುಪ್ರೀಂ ಕೋರ್ಟ್ ತಡೆಯಾಜ್ಞೆ - Hamare Baarah Movie