ನವದೆಹಲಿ: ಚುನಾವಣಾ ಬಾಂಡ್ ಯೋಜನೆಯ ಕುರಿತು ಸುಪ್ರೀಂಕೋರ್ಟ್ ಗುರುವಾರ ಮಹತ್ವದ ತೀರ್ಪು ನೀಡಿದೆ. ಈ ಯೋಜನೆಯು ಸಂವಿಧಾನ ಬಾಹಿರವಾಗಿದೆ. ಮೂಲಭೂತ ಹಕ್ಕುಗಳ ಉಲ್ಲಂಘನೆಯಾಗುತ್ತದೆ. ಹೀಗಾಗಿ ಯೋಜನೆಯನ್ನ ರದ್ದು ಮಾಡಬೇಕು ಎಂದು ಆದೇಶಿಸಿದೆ.
ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ಅವರ ನೇತೃತ್ವದ ಪಂಚಪೀಠವು ಈ ತೀರ್ಪು ನೀಡಿದೆ. ಚುನಾವಣಾ ಬಾಂಡ್ ಅಸಂವಿಧಾನಿಕ. ರಾಜಕೀಯ ಪಕ್ಷಗಳಿಗೆ ಬಾಂಡ್‌ಗಳನ್ನು ಕೊಡುವುದನ್ನು ನಿಲ್ಲಿಸಿಬಿಡಿ ಎಂದು ಪೀಠವು ಸೂಚಿಸಿದೆ.
ತೀರ್ಪಿನಲ್ಲಿ ಏನಿದೆ?: ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ, ಬಿಆರ್ ಗವಾಯಿ, ಜೆಬಿ ಪರ್ದಿವಾಲಾ ಮತ್ತು ಮನೋಜ್ ಮಿಶ್ರಾ ಅವರನ್ನೊಳಗೊಂಡ ಪೀಠವು ವಿಚಾರಣೆಯ ನಂತರ ತನ್ನ ತೀರ್ಪನ್ನು ನವೆಂಬರ್ 2, 2023 ರಂದು ಕಾಯ್ದಿರಿಸಿತ್ತು. ಪ್ರಕರಣದ ತೀರ್ಪನ್ನು ಇಂದು (ಫೆಬ್ರವರಿ 15) ಪ್ರಕಟಿಸಲಾಗಿದೆ. ಅದರಲ್ಲಿ ನ್ಯಾಯಮೂರ್ತಿ ಸಂಜೀವ್ ಖನ್ನಾ ಅವರು ಪ್ರತ್ಯೇಕ ತೀರ್ಪು ನೀಡಿದರು. ಸಿಜೆಐ ಚಂದ್ರಚೂಡ್ ನ್ಯಾಯಮೂರ್ತಿಗಳಾದ ಗವಾಯಿ, ಪರ್ದಿವಾಲಾ ಮತ್ತು ಮಿಶ್ರಾ ಅವರು ಏಕ ತೀರ್ಪು ನೀಡಿದರು.
ರಾಜಕೀಯ ಪಕ್ಷಗಳಿಗೆ ನಿಧಿಯ ರೂಪದಲ್ಲಿ ನೀಡಲಾಗುವ ಅನಾಮಧೇಯ ಚುನಾವಣಾ ಬಾಂಡ್ಗಳ ಬಗ್ಗೆ ಮಾಹಿತಿ ಬಹಿರಂಗ ಮಾಡಬೇಕು. ಇಲ್ಲವಾದಲ್ಲಿ ಅದು ಜನರ ಮಾಹಿತಿ ಹಕ್ಕನ್ನೇ ಕಸಿದಂತಾಗುತ್ತದೆ. ಎಲ್ಲ ರೀತಿಯ ಕೊಡುಗೆಗಳು ಸಾರ್ವಜನಿಕ ಒಳಿತಿಗಾಗಿ ನೀಡುವ ಉದ್ದೇಶ ಹೊಂದಿರುವುದಿಲ್ಲ. ಹಣದ ದುರುಪಯೋಗವೂ ಇದರಲ್ಲಿ ಅಡಕವಾಗಿರುವ ಸಾಧ್ಯತೆ ಇದೆ. ಇಂತಹ ದೇಣಿಗೆಗೆ ಗೌಪ್ಯತೆಯ ರಕ್ಷಣೆ ನೀಡಬಾರದು ಎಂದು ಕೋರ್ಟ್ ಹೇಳಿದೆ.
ಚುನಾವಣಾ ಬಾಂಡ್ ಯೋಜನೆಯು ಅಸಂವಿಧಾನಿಕ ಎಂದು ಪರಿಗಣಿಸಿದ ಕೋರ್ಟ್, ದೇಣಿಗೆಯ ಹಣವನ್ನು ಆದಾಯ ತೆರಿಗೆ ಕಾಯ್ದೆ, ಜನರ ಪ್ರಾತಿನಿಧ್ಯ ಕಾಯ್ದೆಯಿಂದ ಹೊರಗಿಡುವುದು ಸಮಂಜಸವಲ್ಲ. ಇದನ್ನು ಮೊದಲು ರದ್ದು ಮಾಡಬೇಕು ಎಂದಿದೆ.
ಕಾರ್ಪೋರೇಟ್ ಮಾಹಿತಿ ಬಹಿರಂಗ ಮಾಡಿ: ಚುನಾವಣಾ ಬಾಂಡ್ಗಳ ಮೂಲಕ ಕಾರ್ಪೋರೇಟ್ ಸಂಸ್ಥೆಗಳು ನೀಡುವ ಕೊಡುಗೆಯನ್ನ ಎಲ್ಲ ರಾಜಕೀಯ ಪಕ್ಷಗಳು ಬಹಿರಂಗ ಮಾಡಬೇಕು. ಇಂತಹ ದೇಣಿಗೆ ಅಕ್ರಮವಾಗಿರುವ ಸಾಧ್ಯತೆ ಹೆಚ್ಚಿರುತ್ತದೆ. ಖಾಸಗಿ ಸಂಸ್ಥೆಗಳು ರಾಜಕೀಯ ಪಕ್ಷಗಳಿಗೆ ದೇಣಿಗೆ ನೀಡುವುದಕ್ಕೆ ಅವಕಾಶ ನೀಡಿದರೆ, ಚುನಾವಣೆಯಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳಲು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟಿದೆ.
ಚುನಾವಣಾ ಬಾಂಡ್‌ಗಳನ್ನು ನೀಡುವುದನ್ನು ತಕ್ಷಣವೇ ನಿಲ್ಲಿಸುವಂತೆ ಬ್ಯಾಂಕ್‌ಗಳಿಗೆ ಸುಪ್ರೀಂ ಕೋರ್ಟ್ ಹೇಳಿತಲ್ಲದೇ, ಮಾರ್ಚ್ 6 ರೊಳಗೆ ಈವರೆಗೂ ನೀಡಿದ ಬಾಂಡ್ಗಳ ವಿವರವನ್ನು ಚುನಾವಣಾ ಆಯೋಗಕ್ಕೆ ಒದಗಿಸಬೇಕು ಎಂದು ಎಸ್‌ಬಿಐಗೆ ಸೂಚಿಸಿತು. ಅದನ್ನು ಆಯೋಗವು ಮಾರ್ಚ್ 13 ರೊಳಗೆ ತನ್ನ ವೆಬ್‌ಸೈಟ್‌ನಲ್ಲಿ ಮಾಹಿತಿಯನ್ನು ಹಂಚಿಕೊಳ್ಳಬೇಕು ಎಂದೂ ಆದೇಶಿಸಿತು.
ಏನಿದು ಚುನಾವಣಾ ಬಾಂಡ್ ಯೋಜನೆ?: ಕೇಂದ್ರ ಸರ್ಕಾರ 2018ರ ಜನವರಿ 2 ರಂದು ಚುನಾವಣಾ ಬಾಂಡ್ ಯೋಜನೆಯನ್ನು ಜಾರಿಗೆ ತಂದಿತು. ರಾಜಕೀಯ ಪಕ್ಷಗಳಿಗೆ ನೀಡಲಾಗುವ ನಗದು ದೇಣಿಗೆಗೆ ಪರ್ಯಾಯವಾಗಿ ಬಾಂಡ್‌ಗಳನ್ನು ಪರಿಚಯಿಸಿತು. ನಿಧಿಯಲ್ಲಿ ಪಾರದರ್ಶಕತೆ ತರುವ ಪ್ರಯತ್ನವಾಗಿ ಇದನ್ನು ಸರ್ಕಾರ ಅನುಷ್ಠಾನಕ್ಕೆ ತಂದಿತ್ತು.
ಜನತಾ ಪ್ರಾತಿನಿಧ್ಯ ಕಾಯಿದೆಯ ಪ್ರಕಾರ ನೋಂದಾಯಿಸಲಾದ ರಾಜಕೀಯ ಪಕ್ಷಗಳು ಮಾತ್ರ ಇಂತಹ ದೇಣಿಗೆಗಳನ್ನು ಸ್ವೀಕರಿಸಲು ಅರ್ಹವಾಗಿರುತ್ತವೆ. ಲೋಕಸಭೆ ಅಥವಾ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಕನಿಷ್ಠ ಶೇಕಡಾ 1 ರಷ್ಟು ಮತಗಳನ್ನು ಪಡೆದ ಪಕ್ಷಗಳು ಮಾತ್ರ ದೇಣಿಗೆಯನ್ನು ಪಡೆಯಬೇಕು. ಬಾಂಡ್‌ಗಳನ್ನು ರಾಜಕೀಯ ಪಕ್ಷವು ಅಧಿಕೃತ ಬ್ಯಾಂಕ್‌ನ ಖಾತೆಯ ಮೂಲಕ ಮಾತ್ರ ಎನ್‌ಕ್ಯಾಶ್ ಮಾಡಬೇಕು. ಎಲೆಕ್ಟೋರಲ್ ಬಾಂಡ್‌ಗಳು ಪ್ರಾಮಿಸರಿ ನೋಟ್ ಅಥವಾ ಬೇರರ್ ಬಾಂಡ್‌ನಲ್ಲಿ ನೀಡಬಹುದು. ಇದನ್ನು ಯಾವುದೇ ವ್ಯಕ್ತಿ, ಕಂಪನಿ, ಸಂಸ್ಥೆ ಅಥವಾ ವ್ಯಕ್ತಿಗಳ ಸಂಘದಿಂದ ಖರೀದಿಸಬಹುದು. ದೇಣಿಗೆ ನೀಡುವ ಸಂಸ್ಥೆಯು ದೇಶದಲ್ಲಿ ಸ್ಥಾಪಿತವಾಗಿರಬೇಕು. ವ್ಯಕ್ತಿಯಾದಲ್ಲಿ ಅವರು ದೇಶದ ಪ್ರಜೆಯಾಗಿರಬೇಕು ಎಂದು ಮಾನದಂಡ ವಿಧಿಸಲಾಗಿತ್ತು.
ಇದನ್ನೂ ಓದಿ: ಇಂದು ಸುಪ್ರೀಂನಿಂದ ಎಲೆಕ್ಟೋರಲ್ ಬಾಂಡ್ಸ್ ಸ್ಕೀಂ ಸಿಂಧುತ್ವ ಪ್ರಶ್ನಿಸಿ ಸಲ್ಲಿಸಿದ ಅರ್ಜಿಗಳ ತೀರ್ಪು