ಕೊಲಂಬೊ(ಶ್ರೀಲಂಕಾ): ಅಕ್ರಮವಾಗಿ ಮೀನುಗಾರಿಕೆ ನಡೆಸಿದ ಆರೋಪದ ಮೇಲೆ ಭಾರತದ 19 ಜನ ಮೀನುಗಾರರನ್ನು ಶ್ರೀಲಂಕಾ ನೌಕಾಪಡೆ ಬಂಧಿಸಿದೆ. ಉತ್ತರ ಜಾಫ್ನಾ ಪ್ರಾಂತ್ಯದ ಡೆಲ್ಫಟ್ ದ್ವೀಪದ ಸಮೀಪ ಮೀನುಗಾರಿಕೆ ನಡೆಸಲಾಗುತ್ತಿತ್ತು ಎಂದು ನೌಕಾಪಡೆ ತಿಳಿಸಿದೆ.
ಶ್ರೀಲಂಕಾ ನೌಕಾಪಡೆಯು ಕೋಸ್ಟ್ ಗಾರ್ಡ್‌ನೊಂದಿಗೆ ಬುಧವಾರ ಕಾರ್ಯಾಚರಣೆ ನಡೆಸಿದೆ. ಈ ವೇಳೆ, ಭಾರತೀಯ ಮೀನುಗಾರರ ಬಂಧಿಸಿ, ಎರಡು ಟ್ರಾಲರ್ ಬೋಟುಗಳನ್ನು ವಶಪಡಿಸಿಕೊಂಡಿಸಿಕೊಳ್ಳಲಾಗಿದೆ. ಮುಂದಿನ ಕ್ರಮಕ್ಕಾಗಿ ಮೈಲಾಡಿ ಮೀನುಗಾರಿಕಾ ನಿರೀಕ್ಷಕರಿಗೆ ಹಸ್ತಾಂತರಿಸಲಾಗಿದೆ ಎಂದು ಪ್ರಕಟಣೆಯಲ್ಲಿ ಹೇಳಿದೆ.
ಸ್ಥಳೀಯರ ಜೀವನೋಪಾಯದ ಮೇಲೆ ನೇರ ಪರಿಣಾಮ ಬೀರುವುದರಿಂದ ವಿದೇಶಿ ಮೀನುಗಾರರು ನಡೆಸುವ ಅಕ್ರಮ ಮೀನುಗಾರಿಕೆಯನ್ನು ನಿಗ್ರಹಿಸಲಾಗುತ್ತಿದೆ. ಈ ನಿಟ್ಟಿನಲ್ಲಿ ನೌಕಾಪಡೆಯು ಶ್ರೀಲಂಕಾದ ನೀರಿನಲ್ಲಿ ನಿಯಮಿತ ಗಸ್ತು ಮತ್ತು ಕಾರ್ಯಾಚರಣೆಗಳನ್ನು ನಡೆಸುತ್ತಿದೆ. ಈ ವರ್ಷ ಇಲ್ಲಿಯವರೆಗೆ ಶ್ರೀಲಂಕಾ ನೌಕಾಪಡೆಯು ದ್ವೀಪದ ನೀರಿನಲ್ಲಿ 88 ಭಾರತೀಯ ಮೀನುಗಾರರನ್ನು ಬಂಧಿಸಲಾಗಿದೆ. ಇದರ ಜೊತೆಗೆ 12 ಟ್ರಾಲರ್ ಬೋಟುಗಳನ್ನು ಜಪ್ತಿ ಮಾಡಲಾಗಿದೆ ಎಂದು ಮಾಹಿತಿ ನೀಡಿದೆ.
ಭಾರತ ಮತ್ತು ಶ್ರೀಲಂಕಾ ನಡುವಿನ ಬಾಂಧವ್ಯದಲ್ಲಿ ಮೀನುಗಾರರ ಸಮಸ್ಯೆ ವಿವಾದಾಸ್ಪದವಾಗಿದೆ. ಲಂಕಾ ನೌಕಾಪಡೆಯ ಸಿಬ್ಬಂದಿ ಪಾಕ್ ಜಲಸಂಧಿಯಲ್ಲೂ ಭಾರತೀಯ ಮೀನುಗಾರರ ಮೇಲೆ ಗುಂಡು ಹಾರಿಸಿದ ಘಟನೆಗಳು ವರದಿಯಾಗಿವೆ. ಶ್ರೀಲಂಕಾದ ಪ್ರಾದೇಶಿಕ ಜಲವನ್ನು ಅಕ್ರಮವಾಗಿ ಪ್ರವೇಶಿಸಿದ ಹಲವಾರು ಘಟನೆಗಳಲ್ಲಿ ಸಿಬ್ಬಂದಿ ದೋಣಿಗಳನ್ನು ವಶಪಡಿಸಿಕೊಂಡಿದ್ದಾರೆ.
ಪಾಕ್ ಜಲಸಂಧಿಯು ತಮಿಳುನಾಡನ್ನು ಶ್ರೀಲಂಕಾದಿಂದ ಬೇರ್ಪಡಿಸುವ ನೀರಿನ ಕಿರಿದಾದ ಪಟ್ಟಿಯಾಗಿದೆ. ಎರಡೂ ದೇಶಗಳ ಮೀನುಗಾರರಿಗೆ ಶ್ರೀಮಂತ ಮೀನುಗಾರಿಕೆ ಕೇಂದ್ರವಾಗಿದೆ. ಅಂತಾರಾಷ್ಟ್ರೀಯ ಕಡಲ ಗಡಿ ರೇಖೆಯನ್ನು ದಾಟಿ ಶ್ರೀಲಂಕಾದ ನೀರಿನಲ್ಲಿ ಮೀನುಗಾರಿಕೆ ನಡೆಸಿದ ಆರೋಪದ ಮೇಲೆ ಭಾರತೀಯ ಮೀನುಗಾರರನ್ನು ಶ್ರೀಲಂಕಾ ಬಂಧಿಸುತ್ತಿದೆ. 2023ರಲ್ಲಿ ದ್ವೀಪ ರಾಷ್ಟ್ರದ ನೌಕಾಪಡೆಯು 240 ಭಾರತೀಯ ಮೀನುಗಾರರನ್ನು ಬಂಧಿಸಿತ್ತು.
ಇದನ್ನೂ ಓದಿ: ಸಮುದ್ರದಲ್ಲಿನ ಕಲ್ಲುಬಂಡೆಗೆ ಬಡಿದು ಮುಳುಗಿದ ದೋಣಿ: ಐವರು ಮೀನುಗಾರರ ರಕ್ಷಣೆ