ವಾರಂಗಲ್, ತೆಲಂಗಾಣ: ಆ ರೈಲು ನಿಲ್ದಾಣದಲ್ಲಿ ಕೆಲವರು ನಿತ್ಯ 60ಕ್ಕೂ ಹೆಚ್ಚು ಟಿಕೆಟ್ ಖರೀದಿಸುತ್ತಾರೆ. ಆದರೆ ಅವರು ಬೇರೆ ಯಾವ ಊರಿಗೂ ಪ್ರಯಾಣ ಮಾಡುವುದಿಲ್ಲ. ಅವರ ಉದ್ದೇಶ ಮಾತ್ರ ಒಳ್ಳೆಯದೇ ಆಗಿದೆ. ಅಷ್ಟೇ ಅಲ್ಲ ಅವರಿಗೆ ವ್ಯಾಪಾರಿಗಳು, ದಾನಿಗಳು ಮುಂದೆ ಬಂದು ದೇಣಿಗೆ ನೀಡುತ್ತಿರುವುದು ಗಮನಾರ್ಹ.
ಈ ಘಟನೆ ವಾರಂಗಲ್ ಜಿಲ್ಲೆಯ ನೆಕ್ಕೊಂಡ ರೈಲ್ವೆ ನಿಲ್ದಾಣದಲ್ಲಿ ನಿತ್ಯ ಈ ಘಟನೆ ಕಂಡು ಬರುತ್ತಿದೆ. ಇಡೀ ನರಸಂಪೇಟೆ ಕ್ಷೇತ್ರಕ್ಕೆ ಇದೊಂದೇ ರೈಲು ನಿಲ್ದಾಣ ಆಗಿರುವುದರಿಂದ ಆಯಾಯ ತಾಲೂಕಿನ ಜನರು ಇಲ್ಲಿಗೆ ಬರುತ್ತಾರೆ. ತಿರುಪತಿ, ಹೈದರಾಬಾದ್, ದೆಹಲಿ, ಶಿರಡಿ ಸೇರಿದಂತೆ ಪ್ರಮುಖ ಸ್ಥಳಗಳಿಗೆ ತೆರಳುವ ರೈಲುಗಳಿಗೆ ಇಲ್ಲಿ ನಿಲುಗಡೆ ಇಲ್ಲದ ಕಾರಣ ಜನರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಇದಕ್ಕೆ ಪೂರಕ ಎಂಬಂತೆ ಆದಾಯ ಕಡಿಮೆ ಬರುತ್ತಿದೆ, ರೈಲ್ವೆಗೆ ನಷ್ಟ ಉಂಟಾಗುತ್ತಿದೆ ಎಂಬ ನೆಪದಲ್ಲಿ ಪದ್ಮಾವತಿ ಎಕ್ಸ್‌ಪ್ರೆಸ್‌ನ ರೈಲು ನಿಲುಗಡೆಯನ್ನು ಅಧಿಕಾರಿಗಳು ಏಕಾಏಕಿ ರದ್ದುಗೊಳಿಸಿದ್ದರು. ಇದು ಇಲ್ಲಿನ ಜನರನ್ನು ಮತ್ತಷ್ಟು ಸಂಕಷ್ಟಕ್ಕೆ ದೂಡಿತ್ತು.
ಇತ್ತೀಚೆಗೆ, ಸಿಕಂದರಾಬಾದ್‌ನಿಂದ ಗುಂಟೂರಿಗೆ ಇಂಟರ್‌ಸಿಟಿ ಎಕ್ಸ್‌ಪ್ರೆಸ್ ಅನ್ನು ಪ್ರಯಾಣಿಕರು ಪದೇ ಪದೆ ವಿನಂತಿಸಿದ್ದರಿಂದ ತಾತ್ಕಾಲಿಕವಾಗಿ ನಿಲುಗಡೆಗೆ ರೈಲ್ವೆ ಇಲಾಖೆ ಅವಕಾಶ ಕಲ್ಪಿಸಿದೆ. ಆದರೆ ಮೂರು ತಿಂಗಳವರೆಗೆ ಆದಾಯ ಬಂದರೆ ಮಾತ್ರ ಸಂಪೂರ್ಣ ನಿಲುಗಡೆ ನೀಡುತ್ತೇವೆ, ಇಲ್ಲದಿದ್ದರೆ ರದ್ದುಪಡಿಸುತ್ತೇವೆ ಎಂದು ರೈಲ್ವೆ ಅಧಿಕಾರಿಗಳು ಇಲ್ಲಿನ ಜನರಿಗೆ ಷರತ್ತು ವಿಧಿಸಿದ್ದಾರೆ.
ಇದರಿಂದ ಹಾಲ್ಟಿಂಗ್ ಕಳೆದುಕೊಳ್ಳದ ಗ್ರಾಮಸ್ಥರು ಸಂಘಟಿತರಾಗಿದ್ದಾರೆ. ರೈಲು ನಿಲುಗಡೆ ಉಳಿಸಿಕೊಳ್ಳಲು ನಿರ್ಧಾರವೊಂದನ್ನು ಕೈಗೊಂಡಿದ್ದಾರೆ. ‘ನೆಕ್ಕೊಂಡ ಟೌನ್ ರೈಲ್ವೇ ಟಿಕೆಟ್ಸ್ ಫೋರಂ’ ಹೆಸರಿನ ವಾಟ್ಸ್ಆ್ಯಪ್ ಗ್ರೂಪ್ ರಚಿಸಿಕೊಂಡಿದ್ದಾರೆ. ಸುಮಾರು 400 ಮಂದಿ ಸದಸ್ಯರಾಗಿ ಸೇರಿಕೊಂಡಿದ್ದಾರೆ. ಇವರೆಲ್ಲರೂ ದೇಣಿಗೆ ರೂಪದಲ್ಲಿ ಈವರೆಗೆ ರೂ.25 ಸಾವಿರ ರೂ. ಸಂಗ್ರಹಿಸಿದ್ದಾರೆ. ಈ ಹಣದಲ್ಲಿ ನೆಕ್ಕೊಂಡದಿಂದ ಖಮ್ಮಂ, ಸಿಕಂದರಾಬಾದ್ ಮತ್ತಿತರ ಕಡೆ ರೈಲು ಟಿಕೆಟ್ ಖರೀದಿಸುತ್ತಾರೆ.
ಗ್ರೂಪ್ ಅಡ್ಮಿನ್ಗಳಾದ ರಾಮಗೋಪಾಲ್, ವೆಂಕಣ್ಣ, ಮಹಿಪಾಲ್ ರೆಡ್ಡಿ, ವೇಣುಗೋಪಾಲ್ ರೆಡ್ಡಿ, ಶ್ರೀನಿವಾಸ್ ಮತ್ತಿತರರು ನಿಲ್ದಾಣದ ಆದಾಯವನ್ನು ತೋರಿಸಲು ಈ ರೀತಿ ಮಾಡುತ್ತಿದ್ದು, ಹೆಚ್ಚಿನ ರೈಲುಗಳ ನಿಲುಗಡೆಗೆ ಶ್ರಮಿಸುವುದಾಗಿ ಹೇಳಿದ್ದಾರೆ. ಗ್ರಾಮಕ್ಕಾಗಿ ದುಡಿಯುವ ಈ ಜನರ ಕಾರ್ಯ ಮೆಚ್ಚುಗೆಗೆ ಪಾತ್ರವಾಗಿದೆ.
ಓದಿ: ಬೆಂಗಳೂರು ಮೆಟ್ರೋ ನೇಮಕಾತಿ: ಮ್ಯಾನೇಜರ್ ಹುದ್ದೆಗಳಿಗೆ ಅರ್ಜಿ ಆಹ್ವಾನ