ಸಿಕರ್(ರಾಜಸ್ಥಾನ): ಮನೆಯಲ್ಲಿ ಹೆಣ್ಣು ಮಗು ಜನಿಸಿದ ಖುಷಿಯಲ್ಲಿ ಕುಟುಂಬದ ಸದಸ್ಯರು ಮರಣದ ಬಳಿಕ ತಮ್ಮ ದೇಹವನ್ನು ಆಸ್ಪತ್ರೆಯೊಂದಕ್ಕೆ ಸ್ವಯಂಪ್ರೇರಿತವಾಗಿ ದಾನ ಮಾಡುವ ಪ್ರತಿಜ್ಞೆ ಕೈಗೊಂಡಿದ್ದಾರೆ. ಈ ಅಪರೂಪದ ಬೆಳವಣಿಗೆ ರಾಜಸ್ಥಾನದ ಸಿಕರ್ ವ್ಯಾಪ್ತಿಯ ಚಂದಪುರದಲ್ಲಿ ಭಾನುವಾರ ವೈದ್ಯರು ಹಾಗೂ ಗ್ರಾಮಸ್ಥರ ಸಮ್ಮುಖದಲ್ಲಿ ನಡೆಯಿತು.
ಮಗು ಹುಟ್ಟಿದ ದಿನದಂದು ಮನೆಯಲ್ಲಿ ಧನ, ಧಾನ್ಯ, ಬಟ್ಟೆ ಅಥವಾ ಇತರ ಬೆಲೆ ಬಾಳುವ ವಸ್ತುಗಳನ್ನು ದಾನ ಮಾಡುವುದು ಸಂಪ್ರದಾಯ. ಆದರೆ, ಈ ಕುಟುಂಬ ಮನೆಯಲ್ಲಿ ಹೆಣ್ಣು ಮಗು ಜನಿಸಿದೆ ಎಂಬ ಖುಷಿಗೆ ತಾವು ಸತ್ತ ಬಳಿಕ ವೈದ್ಯಕೀಯ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕಾಗಿ ಅನುಕೂಲವಾಗಲಿ ಎಂದು ತಮ್ಮ ದೇಹದಾನ ಮಾಡುವ ತೀರ್ಮಾನ ಕೈಗೊಂಡಿದ್ದಾರೆ.
ಮುತ್ತಜ್ಜ, ಅಜ್ಜ ಮತ್ತು ಅಜ್ಜಿ ಸೇರಿದಂತೆ ಕುಟುಂಬದ ಆರು ಸದಸ್ಯರು ಸ್ವಇಚ್ಛೆಯಿಂದ ತಮ್ಮ ದೇಹ ದಾನ ಮಾಡುವ ಪ್ರತಿಜ್ಞೆ ಕೈಗೊಂಡರು. ತಮ್ಮ ಗ್ರಾಮದಲ್ಲಿ ಸಾಮೂಹಿಕವಾಗಿ ಈ ಕುರಿತ ಠರಾವಿಗೆ ಎಲ್ಲರೂ ಸಹಿ ಹಾಕಿದರು.
ಮುತ್ತಜ್ಜ ರಾಮೇಶ್ವರಲಾಲ್ ಪಚಾರ್, ಅಜ್ಜ ರಾಮಚಂದ್ರ ಸಿಂಗ್ ಪಾಚಾರ್ ಮತ್ತು ಅಜ್ಜಿ ಗೀತಾದೇವಿ ಮೊದಲು ತಮ್ಮ ದೇಹ ದಾನ ಮಾಡಲು ನಿರ್ಧರಿಸಿದ್ದರು. ಅವರ ಪ್ರೇರಣೆಯಿಂದ ಕುಟುಂಬದ ಇತರೆ ಸದಸ್ಯರಾದ ಸುಮನ್ ಬಹೇತಿ ಮತ್ತು ರಾಮಪ್ರಸಾದ್ ಮತ್ತು ಇವರ ಪತ್ನಿ ಅಂಜು ಕೂಡ ತಮ್ಮ ದೇಹ ದಾನ ಮಾಡುವ ಪ್ರತಿಜ್ಞೆ ಮಾಡಿದರು. ಎಲ್ಲರ ಠರಾವು ಪತ್ರಗಳನ್ನು ಒಟ್ಟಿಗೆ ಭರ್ತಿ ಮಾಡಲಾಯಿತು. ದೇಹದಾನದ ಪ್ರತಿಜ್ಞಾವಿಧಿ ಕಾರ್ಯಕ್ರಮದಲ್ಲಿ ಚಂದಾಪುರ ಗ್ರಾಮಸ್ಥರು ಭಾಗಿಯಾಗಿದ್ದರು.
''ಸಂಶೋಧನಾ ಉದ್ದೇಶಕ್ಕಾಗಿ ವೈದ್ಯಕೀಯ ಕಾಲೇಜುಗಳ ವೈದ್ಯರ ಆಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ನಾವು ನಮ್ಮ ದೇಹಗಳನ್ನು ದಾನ ಮಾಡುವ ನಿರ್ಧಾರ ತೆಗೆದುಕೊಂಡಿದ್ದೇವೆ. ಕೆಲವು ತಿಂಗಳ ಹಿಂದೆ ನಾನು ಕಾಲೇಜಿನಲ್ಲಿ ವಿದ್ಯಾರ್ಥಿಗಳ ವೈದ್ಯಕೀಯ ಅಭ್ಯಾಸಕ್ಕಾಗಿ ಶವಗಳ ಕೊರತೆ ಇರುವುದನ್ನು ಗಮನಿಸಿದೆ. ವೈದ್ಯಕೀಯ ಶಿಕ್ಷಣಕ್ಕಾಗಿ ಸತ್ತ ಬಳಿಕ ದೇಹದಾನ ಮಾಡುವುದು ವಿದ್ಯಾರ್ಥಿಗಳಿಗೆ ಬಹಳ ಉಪಯುಕ್ತ ಎಂದು ಮನಗಂಡೆ. ನಮ್ಮ ಮನೆಯಲ್ಲಿ ಹೆಣ್ಣು ಮಗು ಹುಟ್ಟಿದ್ದರಿಂದ ದೇಹದಾನ ಮಾಡುವ ನಿರ್ಧಾರಕ್ಕೆ ಬಂದೆವು. ಎಲ್ಲರೂ ಸ್ವಯಂಪ್ರೇರಿತವಾಗಿ ದಾನ ಮಾಡುವುದಕ್ಕೆ ಸಹಿ ಹಾಕಿದ್ದೇವೆ'' ಎಂದು ರಾಮಚಂದ್ರ ಸಿಂಗ್ ಪಾಚಾರ್ ತಿಳಿಸಿದರು.
ಅಖಿಲ ಭಾರತ ಕಿಸಾನ್ ಕಾಂಗ್ರೆಸ್ ಸಮಿತಿಯ ರಾಜ್ಯಾಧ್ಯಕ್ಷ ಶಿವಭಗವಾನ್ ನಾಗ, ಶ್ರೀ ಕಲ್ಯಾಣ್ ಮೆಡಿಕಲ್ ಕಾಲೇಜಿನ ಅಂಗರಚನಾಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ಸರಯೂ ಸೈನ್ ಮತ್ತು ಡಾ.ದೀಪಕ್ ಯಾದವ್ ಅವರು ಮುಖ್ಯ ಅತಿಥಿಗಳಾಗಿ ನಿರ್ಣಯದ ನಮೂನೆಗಳನ್ನು ಭರ್ತಿ ಮಾಡಿದರು.
ಇದನ್ನೂ ಓದಿ: ರಾಮನಗರದ ಪಾಲನಹಳ್ಳಿ ಮಠಕ್ಕೆ 3 ಸಾವಿರ ಎಕರೆ ಭೂಮಿ ದಾನ ಮಾಡಿದ ಗಣಿ ಉದ್ಯಮಿ!