ಸಿಲಿಗುರಿ (ಸಿಕ್ಕಿಂ): ಈಶಾನ್ಯ ರಾಜ್ಯಗಳಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ರಸ್ತೆಗಳು, ವಿಮಾನ, ರೈಲು ಸಂಚಾರಕ್ಕೆ ಅಡ್ಡಿಯಾಗಿದೆ. ಸಿಕ್ಕಿಂಗೆ ಸಂಪರ್ಕ ಕಲ್ಪಿಸುವ, ರಾಜ್ಯದ ಜೀವನಾಡಿಯಾಗಿರುವ ರಾಷ್ಟ್ರೀಯ ಹೆದ್ದಾರಿ 10 ಅನ್ನು ಬಂದ್ ಮಾಡಿರುವುದು ರಾಜ್ಯದ ಆದಾಯಕ್ಕೆ ಭಾರೀ ಹೊಡೆತ ನೀಡಿದೆ.
ತೀವ್ರ ಮಳೆಯಿಂದಾಗಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಗುಡ್ಡ ಕುಸಿತ ಉಂಟಾಗಿದೆ. ಹೀಗಾಗಿ ಕಳೆದ 10 ದಿನಗಳಿಂದ ರಸ್ತೆಯನ್ನು ಮುಚ್ಚಲಾಗಿದೆ. ಇದು ಸಿಕ್ಕಿಂ ಸರ್ಕಾರದ ಬೊಕ್ಕಸಕ್ಕೆ ನಷ್ಟ ತಂದಿದೆ. ದಿನಕ್ಕೆ 100 ಕೋಟಿ ರೂಪಾಯಿ ಆದಾಯ ಖೋತಾ ಆಗುತ್ತಿದೆ ಎಂದು ಅಲ್ಲಿನ ಸಿಎಂ ತಿಳಿಸಿದ್ದಾರೆ.
ರಾಜ್ಯದ ಆದಾಯಕ್ಕೆ ಪೆಟ್ಟು: ರಾಷ್ಟ್ರೀಯ ಹೆದ್ದಾರಿ ಬಂದ್ ಆಗಿದ್ದಕ್ಕೆ ಕಳವಳ ವ್ಯಕ್ತಪಡಿಸಿದ ಸಿಕ್ಕಿಂ ಮುಖ್ಯಮಂತ್ರಿ ಪ್ರೇಮ್ ಸಿಂಗ್ ತಮಾಂಗ್, ರಾಜ್ಯದ ಜೀವನಾಡಿ ಆಗಿರುವ ರಾಷ್ಟ್ರೀಯ ಹೆದ್ದಾರಿ 10 ರ ಮುಚ್ಚುವಿಕೆಯಿಂದಾಗಿ ಸರ್ಕಾರವು ನಿತ್ಯ ಸುಮಾರು 100 ಕೋಟಿ ರೂಪಾಯಿ ಆದಾಯ ಕಳೆದುಕೊಳ್ಳುತ್ತಿದೆ. ಹೆದ್ದಾರಿಯು ಸಿಲಿಗುರಿಯಿಂದ ಕಾಲಿಂಪಾಂಗ್, ಡಾರ್ಜಿಲಿಂಗ್ ಮತ್ತು ಸಿಕ್ಕಿಂಗೆ ಸಂಪರ್ಕಿಸುವ ಮುಖ್ಯ ಕೊಂಡಿಯಾಗಿದೆ. ಆದರೆ, ಹಲವೆಡೆ ರಸ್ತೆ ಕುಸಿತವಾಗಿ ಕಳೆದ 10 ದಿನಗಳಿಂದ ಹೆದ್ದಾರಿ ಬಂದ್ ಆಗಿದೆ. ಸದ್ಯಕ್ಕೆ ಎಲ್ಲ ಸಂಚಾರ ಸ್ಥಗಿತಗೊಂಡಿದೆ. ಇದರಿಂದ ಆದಾಯ ನಷ್ಟವಾಗುತ್ತಿದೆ ಎಂದಿದ್ದಾರೆ.
ಪರ್ಯಾಯ ಮಾರ್ಗ ಆರಂಭಿಸಿದ್ದರೂ, ಆ ಮಾರ್ಗದಲ್ಲಿ ದೊಡ್ಡ ವಾಹನಗಳ ಸಂಚಾರ ನಿಷೇಧಿಸಲಾಗಿದೆ. ಪರಿಸ್ಥಿತಿಯು ಹೆಚ್ಚು ಆತಂಕಕಾರಿಯಾಗುತ್ತಿದೆ. ರಾಷ್ಟ್ರೀಯ ಹೆದ್ದಾರಿಯನ್ನು ಮುಚ್ಚಿರುವುದರಿಂದ, ಕಾಲಿಂಪಾಂಗ್ ಜಿಲ್ಲೆಯ ಕಡೆಗೆ ಭಾರೀ ವಾಹನ ದಟ್ಟಣೆ ಉಂಟಾಗುತ್ತಿದೆ. ಹೆದ್ದಾರಿಯ ಉದ್ದಕ್ಕೂ ವಾಹನಗಳು ಸಾಲುಗಟ್ಟಿ ನಿಂತಿವೆ ಎಂದಿದ್ದಾರೆ.
ರಾಷ್ಟ್ರೀಯ ಹೆದ್ದಾರಿ 10 ಅನ್ನು ಬಂದ್ ಮಾಡಿದ್ದು, ಸಿಕ್ಕಿಂನ ಟ್ರಾಫಿಕ್ ವ್ಯವಸ್ಥೆಯ ಮೇಲೆ ಪರಿಣಾಮ ಬೀರಿದ್ದಲ್ಲದೇ, ನಿತ್ಯ ಸಂಗ್ರಹವಾಗುತ್ತಿದ್ದ ಟೋಲ್ ಹಣ ನಿಂತು ಹೋಗಿದೆ. ಇದು ರಾಜ್ಯದ ಬೊಕ್ಕಸಕ್ಕೆ ನಷ್ಟ ತಂದಿದೆ. ಶೀಘ್ರವೇ ಹೆದ್ದಾರಿಯನ್ನು ದುರಸ್ತಿ ಮಾಡಿ ಸಂಚಾರಕ್ಕೆ ಅನುವು ಮಾಡಿಕೊಡಿ ಎಂದು ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ, ರಸ್ತೆ ಮತ್ತು ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರನ್ನು ಸಿಎಂ ತಮಾಂಗ್ ಅವರು ಕೋರಿದ್ದಾರೆ.
ಸಿಕ್ಕಿಂ ಮುಖ್ಯಮಂತ್ರಿ ಜತೆಗೆ ಡಾರ್ಜಿಲಿಂಗ್ ಸಂಸದ ರಾಜು ಬಿಸ್ತಾ ಮತ್ತು ಸಿಕ್ಕಿಂ ಸಂಸದರೂ ಹೆದ್ದಾರಿ ದುರಸ್ತಿಗೆ ಕೇಂದ್ರವನ್ನು ಆಗ್ರಹಿಸಿದ್ದಾರೆ. ಅಕ್ಟೋಬರ್‌ನಲ್ಲಿ ಹರ್ಪಾ ನಿಷೇಧದಿಂದಾಗಿ ಸಿಕ್ಕಿಂನ ತೀಸ್ತಾ ನದಿಯು ಎಂಟರಿಂದ ಹತ್ತು ಮೀಟರ್‌ಗಳಷ್ಟು ಏರಿಕೆಯಾಗಿದೆ. ನದಿ ನೀರಿನ ರಭಸವು ರಾಷ್ಟ್ರೀಯ ಹೆದ್ದಾರಿಗೆ ಮತ್ತಷ್ಟು ಹಾನಿ ಮಾಡುತ್ತಿದೆ.
ಕಾಲಿಂಪಾಂಗ್, ಕೂಚ್ ಬೆಹಾರ್‌ಗೆ ರೆಡ್ ಅಲರ್ಟ್: ಸಿಕ್ಕಿಂಗ್ಗೆ ಹೊಂದಿರುವ ಉತ್ತರ ಬಂಗಾಳದಲ್ಲಿ ತೀವ್ರ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಬಂಗಾಳದ ಡಾರ್ಜಿಲಿಂಗ್, ಕಾಲಿಂಪಾಂಗ್, ಅಲಿಪುರ್ದೂರ್, ಜಲ್ಪೈಗುರಿ ಮತ್ತು ಕೂಚ್ ಬೆಹಾರ್ ಜಿಲ್ಲೆಗಳಲ್ಲಿ ಅತಿ ಹೆಚ್ಚು ಮಳೆಯಾಗುವ ಸಾಧ್ಯತೆಯಿದೆ. ಕಾಲಿಂಪಾಂಗ್ ಮತ್ತು ಕೂಚ್ ಬೆಹಾರ್ನಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ.
ಇದನ್ನೂ ಓದಿ: ಉತ್ತರ ಪ್ರದೇಶದ ಉನ್ನಾವ್‌ನಲ್ಲಿ ಭೀಕರ ರಸ್ತೆ ಅಪಘಾತ: ಹಾಲಿನ ಕಂಟೈನರ್‌ಗೆ ಬಸ್ ಡಿಕ್ಕಿ; 18 ಜನ ಸಾವು - UP Road Accident