ಪೂರ್ವ ಗೋದಾವರಿ(ಆಂಧ್ರ ಪ್ರದೇಶ): ರಾಜ್ಯದ ಎರಡು ಗೋದಾವರಿ ಜಿಲ್ಲೆಗಳನ್ನು ಸಂಪರ್ಕಿಸುವ ಪ್ರಮುಖ ರಸ್ತೆ ಕಳೆದ ರಾತ್ರಿ ರಕ್ತಸಿಕ್ತವಾಗಿತ್ತು. ಮಧ್ಯರಾತ್ರಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಏಳು ಕಾರ್ಮಿಕರು ಸಾವನ್ನಪ್ಪಿದ್ದು, ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಏಲೂರು ಜಿಲ್ಲೆಯ ತಿ.ನರಸಾಪುರಂ ತಾಲೂಕಿನ ಬೊರ್ರಂಪಾಲೆಂ ಗ್ರಾಮದಿಂದ ಪೂರ್ವ ಗೋದಾವರಿ ಜಿಲ್ಲೆಯ ನಿಡದವೋಲು ತಾಲೂಕಿನ ತಾಡಿಮಲ್ಲಕ್ಕೆ ಮಿನಿ ಲಾರಿಯೊಂದು ಬೀಜಗಳ ಮೂಟೆಗಳೊಂದಿಗೆ ಹೊರಟಿತ್ತು. ರಿಪಾಟಿದಿಬ್ಬಾಳು-ಚಿನ್ನಾಯಿಗುಡೆಂ ರಸ್ತೆಯ ದೇವರಪಲ್ಲಿ ತಾಲೂಕಿನ ಚಿಲಕವಾರಿಪಾಕಲು ಸಮೀಪ ಬರುತ್ತಿದ್ದಂತೆ ಲಾರಿ ಪಲ್ಟಿಯಾಗಿದೆ. ವಾಹನದಲ್ಲಿ ಚಾಲಕ ಸೇರಿ 10 ಮಂದಿ ಕಾರ್ಮಿಕರಿದ್ದರು. ಈ ಪೈಕಿ ಏಳು ಮಂದಿ ಸಾವನ್ನಪ್ಪಿದ್ದಾರೆ. ಗಾಯಗೊಂಡ ಇಬ್ಬರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ. ಚಾಲಕ ಪರಾರಿಯಾಗಿದ್ದಾನೆ.
ಬಿತ್ತನೆ ಬೀಜ ತುಂಬಿದ ಚೀಲಗಳಡಿ ಸಿಲುಕಿ ಕಾರ್ಮಿಕರು ಸಾವು: ಮಿನಿ ಲಾರಿ ಪಲ್ಟಿಯಾಗಿ ಬೀಜ ತುಂಬಿದ್ದ ಚೀಲದಡಿ ಸಿಲುಕಿ ಕಾರ್ಮಿಕರು ಮೃತಪಟ್ಟಿದ್ದಾರೆ. ಡಿಎಸ್ಪಿ ದೇವಕುಮಾರ್ ಮತ್ತು ಇತರೆ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ರಕ್ಷಣಾ ಕಾರ್ಯಾಚರಣೆ ಆರಂಭಿಸಿದ್ದರು. ಚೀಲದಡಿ ಸಿಕ್ಕಿಬಿದ್ದ ಮೃತದೇಹಗಳನ್ನು ಹೊರತೆಗೆದು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ.
ಮೃತರರನ್ನು ದೇವಬತ್ತುಲ ಬೂರಯ್ಯ (40), ತಮ್ಮಿರೆಡ್ಡಿ ಸತ್ಯನಾರಾಯಣ (45), ಪಿ.ಚಿನಮುಸಲಯ್ಯ (35), ಕಟ್ಟವ್ವ ಕೃಷ್ಣ (40), ಕಟ್ಟವ್ವ ಸತ್ತಿಪಂಡು (40), ತಾಡಿಮಲ್ಲದ ತಾಡಿ ಕೃಷ್ಣ (45) ಹಾಗು ಕಟಕೋಟೇಶ್ವರ ಬೊಕ್ಕ ಪ್ರಸಾದ್ ಎಂದು ಗುರುತಿಸಲಾಗಿದೆ.
ಗಾಯಗೊಂಡವರಲ್ಲಿ ಒಬ್ಬರನ್ನು ಘಂಟಾ ಮಧು ಎಂದು ಗುರುತಿಸಲಾಗಿದ್ದು, ಮತ್ತೊಬ್ಬರ ಮಾಹಿತಿ ಇನ್ನಷ್ಟೇ ತಿಳಿಯಬೇಕಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: ಮಣಿಪುರ ಹಿಂಸಾಚಾರ: ಮತ್ತೆರಡು ಸಿಆರ್ಪಿಎಫ್ ಪಡೆ ರವಾನೆ - Manipur Violence