ಛಾಪ್ರಾ (ಬಿಹಾರ) : ಸಾಧನೆಗೆ ಲಿಂಗಭೇದ, ಬಡತನ ಸವಾಲೇ ಅಲ್ಲ ಎಂಬುದು ಮತ್ತೆ ಸಾಬೀತಾಗಿದೆ. ಬಿಹಾರದ ಒಂದೇ ಕುಟುಂಬದ 7 ಮಂದಿ ಅಕ್ಕ-ತಂಗಿಯರು ಪೊಲೀಸ್ ಇಲಾಖೆಯಲ್ಲಿ ಹುದ್ದೆ ಗಿಟ್ಟಿಸಿಕೊಳ್ಳುವ ಮೂಲಕ ವಿಶಿಷ್ಟ ದಾಖಲೆ ಬರೆದಿದ್ದಾರೆ. ಹೆಣ್ಣೆಂದು ಜರಿದ ಜನರಿಗೆ ತಮ್ಮ ಸಾಧನೆಯಿಂದಲೇ ಅವರು ಉತ್ತರ ನೀಡಿದ್ದಾರೆ.
ಛಾಪ್ರಾ ಜಿಲ್ಲೆಯ ಎಕ್ಮಾ ಪ್ರದೇಶದ ನಿವಾಸಿ ಕಮಲ್ ಸಿಂಗ್ ದಂಪತಿ ಪುತ್ರಿಯರ ಈ ಸಾಧನೆ ರಾಜ್ಯದಲ್ಲಿ ಮನೆಮಾತಾಗಿದೆ. ಒಂದಲ್ಲ ಎರಡಲ್ಲ 7 ಮಂದಿ ಅಕ್ಕ- ತಂಗಿಯರು ಪೊಲೀಸ್ ಇಲಾಖೆಯಲ್ಲಿ ಉದ್ಯೋಗ ಪಡೆದಿದ್ದಾರೆ. ಬಡ ಕುಟುಂಬಕ್ಕೆ ಹೆಣ್ಣು ಮಕ್ಕಳು ಶಾಪ ಎಂಬ ಮಾತನ್ನು ಅವರು ಸುಳ್ಳು ಮಾಡಿದ್ದಾರೆ.
ಬಡತನದಲ್ಲಿ ಅರಳಿದ ಕುಸುಮಗಳು: ಕಮಲ್ ಸಿಂಗ್ ಅವರ ಕುಟುಂಬ ಬಡತನದಲ್ಲಿ ಬೆಂದಿದೆ. ಏಳು ಮಂದಿ ಹೆಣ್ಣುಮಕ್ಕಳಾದಾಗ ನೆರೆಹೊರೆಯವರು ಆಡಿಕೊಳ್ಳುತ್ತಿದ್ದರು. ಹೆಣ್ಣು ಮಕ್ಕಳು ಮನೆಗೆ ಹೊರೆ ಎಂದು ಟೀಕಿಸುತ್ತಿದ್ದರು. ಆದರೆ, ಹೆತ್ತ ಮಕ್ಕಳನ್ನು ಅಧಿಕಾರಿಗಳನ್ನಾಗಿ ಮಾಡಬೇಕು ಎಂದು ಪಣತೊಟ್ಟ ಕಮಲ್ ಸಿಂಗ್ ಅವರು ಮಕ್ಕಳಿಗಾಗಿ ಹಗಲು - ರಾತ್ರಿ ಎನ್ನದೇ ಶ್ರಮಿಸಿದರು. ಹಿಟ್ಟಿನ ಗಿರಣಿಯನ್ನು ನಡೆಸುವ ಅವರು ಎಲ್ಲರಿಗೂ ಉತ್ತಮ ಶಿಕ್ಷಣ ಕೊಡಿಸಿದರು. ಓರ್ವ ಪುತ್ರನು ಕೂಡ ಅಕ್ಕ- ತಂಗಿಯರಿಗಾಗಿ ಕಷ್ಟಪಟ್ಟು ದುಡಿದ.
ತಂಗಿಯರಿಗೆ ಅಕ್ಕಂದಿರೇ ಮಾರ್ಗದರ್ಶಿ: ಇವರು ಸರ್ಕಾರಿ ಹುದ್ದೆಯನ್ನು ಪಡೆಯಲು ವಿಶೇಷ ಶಿಕ್ಷಣ ಪಡೆದಿಲ್ಲ. ಒಂದು ದಿನವೂ ಕೋಚಿಂಗ್ ಸೆಂಟರ್ಗೆ ಎಡತಾಕಿಲ್ಲ. ತಂಗಿಯಯರಿಗೆ ಅಕ್ಕಂದಿರೇ ಶಿಕ್ಷಕರು - ಮಾರ್ಗದರ್ಶಕರಾಗಿದ್ದರು. ದೊಡ್ಡ ಅಕ್ಕ ಸೀಮಾ ಬಾಲ್ ಅವರು ಸಶಸ್ತ್ರ ಪಡೆಯಲ್ಲಿ ಕಾನ್‌ಸ್ಟೇಬಲ್ ಹುದ್ದೆಗೆ ಆಯ್ಕೆಯಾದರು. ನಂತರ ಅವರು ಇತರ ಸಹೋದರಿಯರಿಗೆ ಮಾರ್ಗದರ್ಶನ ಮಾಡಿದರು. ಎರಡನೇ ಸಹೋದರಿ ರಾಣಿ ವಿವಾಹದ ನಂತರ 2009 ರಲ್ಲಿ ಬಿಹಾರ ಪೊಲೀಸ್ ಸಿಬ್ಬಂದಿ ಆಗಿ ಆಯ್ಕೆಯಾದರು. ಇದರ ನಂತರ, ಇತರ ಐದೂ ಸಹೋದರಿಯರು ಸಹ ವಿವಿಧ ಪಡೆಗಳಲ್ಲಿ ನೇಮಕಗೊಂಡರು.
ತಮ್ಮಲ್ಲಿರುವ ಸಾಧಿಸುವ ಛಲ ಮತ್ತು ಆಡಿಕೊಳ್ಳುವ ಜನರಿಗೆ ಉತ್ತರಿಸುವ ಗುರಿ ಅವರನ್ನು ಸರ್ಕಾರ ಹುದ್ದೆಯನ್ನು ಅಲಂಕರಿಸುವಂತೆ ಮಾಡಿತು. ಹಳ್ಳಿಯ ಚಿಕ್ಕ ಮನೆಯಲ್ಲಿ ಓದುತ್ತಾ, ತಮ್ಮ ಹೊಲದಲ್ಲಿ ದೈಹಿಕ ಕಸರತ್ತು ಮಾಡುತ್ತಾ ಪೊಲೀಸ್ ಇಲಾಖೆಗೆ ಬೇಕಾದ ಅರ್ಹತೆ ಗಿಟ್ಟಿಸಿಕೊಂಡರು. ಈ ಮೂಲಕ ಹೆಣ್ಣು ಮಕ್ಕಳು ಶಾಪವಲ್ಲ ವರ ಎಂಬುದನ್ನು ಸಮಾಜಕ್ಕೆ ಸಾರಿದರು.
7 ಅಲ್ಲ 8 ಪುತ್ರಿಯರು: ಕಮಲ್ ಸಿಂಗ್ ಅವರು ತನಗೆ ಏಳಲ್ಲ ಎಂಟು ಪುತ್ರಿಯರು ಇದ್ದರು. ಮೊದಲ 5 ಹೆಣ್ಣು ಮಕ್ಕಳ ನಂತರ, ಅವಳಿ ಪುತ್ರಿಯರು ಜನಿಸಿದರು. ಆದರೆ, ಅದರಲ್ಲಿ ಒಂದು ಮಗು ಚಿಕ್ಕಂದಿನಲ್ಲೇ ಅಸುನೀಗಿತು. ಮಕ್ಕಳು ಸರ್ಕಾರಿ ಉದ್ಯೋಗಿಗಳಾಗಬೇಕು ಎಂಬುದು ನನ್ನ ಕನಸಾಗಿತ್ತು. ಅವರು ಯಾರಿಗೂ ಹೊರೆಯಾಗಬಾರದು ಎಂದು ಶಿಕ್ಷಣ ಕೊಡಿಸಿ ಬೆಳೆಸಿದೆ. ನನ್ನ ಏಳು ಪುತ್ರಿಯರು ಎಸ್‌ಎಸ್‌ಬಿ, ಜಿಆರ್‌ಪಿ, ಬಿಹಾರ ಪೊಲೀಸ್, ಸಿಆರ್‌ಪಿಎಫ್, ಅಬಕಾರಿ ಇಲಾಖೆಯಲ್ಲಿ ಒಂದೊಂದು ಹುದ್ದೆ ಪಡೆದಿದ್ದಾರೆ. ಇಂದು ಅವರು ತಮ್ಮ ಕಾಲ ಮೇಲೆ ನಿಂತಿದ್ದಾರೆ. ಒಬ್ಬ ಅಪ್ಪನಿಗೆ ಇದಕ್ಕಿಂತ ಹೆಮ್ಮೆಯ ಸಂಗತಿ ಏನಿದೆ ಎಂಬುದು ಕಮಲ್ ಸಿಂಗ್ ಅವರ ಸಂತಸ ವ್ಯಕ್ತಪಡಿಸಿದ್ದಾರೆ.
ತಂದೆಗೆ 4 ಅಂತಸ್ತಿನ ಮನೆ ಉಡುಗೊರೆ: ಹೆಮ್ಮರದಂತೆ ನಿಂತು ಸಲುಹಿದ ಅಪ್ಪನಿಗೆ ಇಂದು ಪುತ್ರಿಯರು ಎದೆಯುಬ್ಬಿಸಿಕೊಂಡು ತಿರುಗಾಡುವ ಹಾಗೇ ಗೌರವ ತಂದಿದ್ದಾರೆ. ಸಮಾಜದಲ್ಲಿ ತಮ್ಮನ್ನು ಕೀಳಾಗಿ ಕಂಡು ಹಿಯಾಳಿಸುತ್ತಿದ್ದ ಜನರು ಎದುರು ಸ್ವಾಭಿಮಾನದ ಬದುಕು ನಡೆಸುತ್ತಿದ್ದಾರೆ. ವೃದ್ಧಾಪ್ಯದಲ್ಲಿರುವ ತಂದೆ-ತಾಯಿಗೆ ಮಕ್ಕಳು 4 ಅಂತಸ್ತಿನ ಮನೆಯನ್ನು ಕಟ್ಟಿಸಿ ಉಡುಗೊರೆಯಾಗಿ ನೀಡಿದ್ದಾರೆ. ಅದರಲ್ಲಿ ಬಾಡಿಗೆ ನೀಡಲಾಗಿದ್ದು, ತಿಂಗಳಿಗೆ 20 ಸಾವಿರ ಆದಾಯ ಬರುತ್ತಿದೆ. ಅದರಲ್ಲಿ ಅವರು ಜೀವನ ಸಾಗಿಸುತ್ತಿದ್ದಾರೆ.
ಇದನ್ನೂ ಓದಿ: ಸಹೋದರರಿಬ್ಬರು ಎರಡು ರಾಜ್ಯಗಳ ಡಿಜಿಪಿಗಳಾಗಿ ಸೇವೆ: ಪೊಲೀಸ್ ಇಲಾಖೆಯಲ್ಲಿ ಇದೇ ಮೊದಲು