ನವದೆಹಲಿ: ಕಾನೂನುಗಳ ಪರಿಪಾಲನೆ ಮತ್ತು ಉತ್ತಮ ಆಡಳಿತದ ಮಧ್ಯೆ ಆರ್ಥಿಕ ಹಾಗೂ ರಾಜಕೀಯವಾಗಿ ಬೆಳವಣಿಗೆ ಹೊಂದುತ್ತಿರುವ ಭಾರತಕ್ಕೆ 'ಸಮವಸ್ತ್ರದಲ್ಲಿರುವ ಸೇನಾ ಯೋಧರು' ಮಾತ್ರವಲ್ಲದೆ ದೇಶದ ಆಂತರಿಕ ಮತ್ತು ಬಾಹ್ಯ ಹಿತಾಸಕ್ತಿಗಳನ್ನು ಶ್ರದ್ಧೆ ಹಾಗೂ ಬುದ್ಧಿವಂತಿಕೆಯಿಂದ ನಿರ್ವಹಿಸಬಲ್ಲ 'ನಾಗರಿಕ ಯೋಧರ ಪಡೆ'ಯ ಅಗತ್ಯವೂ ಇದೆ ಎಂದು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಸೂರ್ಯ ಕಾಂತ್ ಭಾನುವಾರ ಹೇಳಿದ್ದಾರೆ.
ರಾಷ್ಟ್ರೀಯ ರಕ್ಷಾ ವಿಶ್ವವಿದ್ಯಾಲಯದಲ್ಲಿ ನಡೆದ ಅಂತಾರಾಷ್ಟ್ರೀಯ ಮೂಟ್ ಕೋರ್ಟ್ ಸ್ಪರ್ಧೆಯ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ನ್ಯಾ.ಕಾಂತ್, ಕಾನೂನು ಕ್ಷೇತ್ರವು ಪರಿಪೂರ್ಣತೆಗಿಂತ ಪರಿಶ್ರಮ, ಕುತೂಹಲ ಹಾಗೂ ನ್ಯಾಯ ಮತ್ತು ಸಮಾನತೆಯ ಆದರ್ಶಗಳಿಗೆ ಬದ್ಧತೆಯನ್ನು ಬಯಸುತ್ತದೆ ಎಂದರು.
"ಕಾನೂನಿನ ಪರಿಪಾಲನೆ ಮತ್ತು ಉತ್ತಮ ಆಡಳಿತದ ಅಡಿಯಲ್ಲಿ ಆರ್ಥಿಕವಾಗಿ, ರಾಜಕೀಯವಾಗಿ, ಪ್ರಜಾಸತ್ತಾತ್ಮಕವಾಗಿ ಬೆಳೆಯುತ್ತಿರುವ ರಾಷ್ಟ್ರಕ್ಕೆ ಸಮವಸ್ತ್ರದಲ್ಲಿರುವ ಮಿಲಿಟರಿ ಮಾತ್ರವಲ್ಲದೆ ನಾಗರಿಕ ಉಡುಪಿನಲ್ಲಿರುವ ಮಿಲಿಟರಿ ತತ್ವಗಳು ಸಹ ಬೇಕಾಗುತ್ತವೆ" ಎಂದು ನುಡಿದರು.
"ನೀವು ಕಾನೂನು ಪದವೀಧರರಾಗಿರಲಿ, ಕ್ರಿಮಿನಲ್ ಕಾನೂನು ಅಥವಾ ಅಂತಾರಾಷ್ಟ್ರೀಯ ಕಾನೂನಿನಲ್ಲಿ ಪರಿಣತರಾಗಿರಲಿ, ಪ್ರಾಧ್ಯಾಪಕರಾಗಿರಲಿ, ವಿಜ್ಞಾನಿಯಾಗಿರಲಿ ಅಥವಾ ಎಂಜಿನಿಯರ್ ಆಗಿರಲಿ ಅಥವಾ ಇನ್ನಾವುದೇ ಜವಾಬ್ದಾರಿಯುತ ಸ್ಥಾನದಲ್ಲಿರಲಿ ನೀವು ನಾಗರಿಕ ಸೇನೆಯ ಭಾಗವಾಗಿರುವಿರಿ. ಈ ನಾಗರಿಕ ಸೇನೆಯು ಬಹಳ ಎಚ್ಚರಿಕೆಯಿಂದ, ಬುದ್ಧಿವಂತಿಕೆಯಿಂದ, ಶ್ರದ್ಧೆಯಿಂದ ರಾಷ್ಟ್ರದ ಆಂತರಿಕ ಮತ್ತು ಬಾಹ್ಯ ಹಿತಾಸಕ್ತಿಗಳನ್ನು ರಕ್ಷಿಸುತ್ತದೆ" ಎಂದು ಅವರು ಸುದ್ದಿಸಂಸ್ಥೆ ಪಿಟಿಐಗೆ ತಿಳಿಸಿದ್ದಾರೆ.
"ಅಂತಾರಾಷ್ಟ್ರೀಯ ಕಾನೂನು, ಜಾಗತಿಕ ಭದ್ರತೆ, ಸೈಬರ್ ಭಯೋತ್ಪಾದನೆ ಮತ್ತು ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದ ವಿಷಯಗಳಿಗೆ ಸಂಬಂಧಿಸಿದ ಕಾಲ್ಪನಿಕ ಪ್ರಕರಣಗಳಲ್ಲಿ ವ್ಯವಹರಿಸುವಾಗ ಸ್ಪರ್ಧಾತ್ಮಕ ಸನ್ನಿವೇಶದಲ್ಲಿ ಕಾನೂನಿನ ಸಂಕೀರ್ಣ ಕ್ಷೇತ್ರಗಳಲ್ಲಿನ ಆರಂಭಿಕ ಅನುಭವ ಪಡೆಯಲು ಮೂಟ್ ಕೋರ್ಟ್ ಉಪಯುಕ್ತವಾಗಿದೆ" ಎಂದು ನ್ಯಾ.ಕಾಂತ್ ಹೇಳಿದರು.
"ನೀವು ನಾಗರಿಕ ಸೇವೆ ಅಥವಾ ಇತರ ಯಾವುದೇ ಸಾರ್ವಜನಿಕ ಸೇವೆಯ ಹುದ್ದೆಗಳಲ್ಲಿ ನೇಮಕವಾದರೆ ಆತ್ಮವಿಶ್ವಾಸದಿಂದ ಮಾತನಾಡುವ ಕಲೆ, ಭಾಷಣ, ಅಭಿವ್ಯಕ್ತಿ ಬಹಳ ಮುಖ್ಯ. ನೀವು ಈ ವಿಶ್ವಾಸವನ್ನು ಪಡೆಯಲು ಮತ್ತು ಕಲಿಯಲು ಇವು ವೇದಿಕೆಗಳಾಗಿವೆ. ಒಂದು ಚಟುವಟಿಕೆಯಾಗಿ ಮೂಟಿಂಗ್ ಸ್ಪರ್ಧೆಯ ಪ್ರಜ್ಞೆಯನ್ನು ಮೂಡಿಸುತ್ತದೆ ಮತ್ತು ಸಮಗ್ರ ಅಭಿವೃದ್ಧಿ, ಬೌದ್ಧಿಕ ತೊಡಗಿಸಿಕೊಳ್ಳುವಿಕೆ ಮತ್ತು ಗೆಳೆಯರಲ್ಲಿ ಆಲೋಚನೆಗಳನ್ನು ಹಂಚಿಕೊಳ್ಳಲು ಅನುವು ಮಾಡಿಕೊಡುತ್ತದೆ" ಎಂದು ಅವರು ಪ್ರತಿಪಾದಿಸಿದರು.
"ಭಾರತದಂತಹ ದೇಶಗಳಲ್ಲಿ ಆರ್ಥಿಕ ಮತ್ತು ಹಣಕಾಸು ಅಪರಾಧಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಸಂಶೋಧನಾ ತರಬೇತಿ ಪಡೆಯುವುದು ಕಡ್ಡಾಯವಾಗಿದೆ" ಎಂದು ಅವರು ಹೇಳಿದರು.
ಇದನ್ನೂ ಓದಿ: ನಕಲಿ LLB ಡಿಗ್ರಿ ಆರೋಪ: ಬಾರ್ ಕೌನ್ಸಿಲ್ ಉಪಾಧ್ಯಕ್ಷ ನಾಸಿಯಾರ್ ವಜಾ, ಸಿಬಿಐ ತನಿಖೆ