ಇಂದೋರ್: ದೇಶದ ಹಲವೆಡೆ ಬುಧವಾರ ಭೀಕರ ರಸ್ತೆ ಅಪಘಾತಗಳು ಸಂಭವಿಸಿದ್ದು ಒಟ್ಟು 18 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.
ಮಧ್ಯ ಪ್ರದೇಶದಲ್ಲಿ 8 ಮಂದಿ ಸಾವು: ರಸ್ತೆ ಬದಿ ನಿಂತಿದ್ದ ಟ್ರಕ್ಗೆ ಕಾರು ಡಿಕ್ಕಿಯಾಗಿ 8 ಜನರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಮಧ್ಯ ಪ್ರದೇಶದ ಇಂದೋರ್ನಲ್ಲಿ ಬುಧವಾರ ನಡೆಯಿತು.
ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ರೂಪೇಶ್ ಕುಮಾರ್ ದ್ವಿವೇದಿ ಘಟನೆಯ ಬಗ್ಗೆ ಮಾಹಿತಿ ನೀಡಿ, "ಇಂದೋರ್-ಅಹಮದಾಬಾದ್ ರಾಷ್ಟ್ರೀಯ ಹೆದ್ದಾರಿಯ ಘಾಟಬಿಲ್ಲೋಡ್ ಎಂಬ ಪ್ರದೇಶದ ಸಮೀಪ ತಡರಾತ್ರಿ ಬೊಲೆರೊ ವಾಹನವು ರಸ್ತೆ ಬದಿ ನಿಂತಿದ್ದ ಟ್ರಕ್ಗೆ ಡಿಕ್ಕಿ ಹೊಡೆದಿದೆ. ಬೊಲೆರೊ ಸಂಪೂರ್ಣವಾಗಿ ಜಖಂಗೊಂಡಿದ್ದು, ಅದರಲ್ಲಿದ್ದ 8 ಜನರು ಅಸುನೀಗಿದ್ದಾರೆ. ಓರ್ವ ವ್ಯಕ್ತಿ ಗಂಭೀರವಾಗಿ ಗಾಯಗೊಂಡಿದ್ದು ಆತನನ್ನು ಸ್ಥಳೀಯ ಆಸ್ಪತ್ರೆಗೆ ಸೇರಿಸಲಾಗಿದೆ. ಅಪಘಾತದ ಬಳಿಕ ಟ್ರಕ್ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ. ಮೃತರೆಲ್ಲರೂ ಗುನಾ ಜಿಲ್ಲೆಗೆ ಸೇರಿದವರೆಂದು ತಿಳಿದು ಬಂದಿದ್ದು, ಗುರುತು ಪತ್ತೆ ಹಚ್ಚಲಾಗುತ್ತಿದೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಆಸ್ಪತ್ರೆಗೆ ಕಳುಹಿಸಲಾಗಿದೆ" ಎಂದು ತಿಳಿಸಿದರು.
ಒಡಿಶಾದಲ್ಲಿ 6 ಮಂದಿ ಸಾವು: ಒಡಿಶಾದ ಕಿಯೋಂಜಾರ್‌ನಲ್ಲಿ ಬುಧವಾರ ಸಂಜೆ ಕಾರು ಮತ್ತು ಟ್ರಕ್ ನಡುವೆ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು 6 ಜನ ಸಾವನ್ನಪ್ಪಿದ್ದಾರೆ. ರಾಷ್ಟ್ರೀಯ ಹೆದ್ದಾರಿ 520ರಲ್ಲಿ ಚಲಿಸುತ್ತಿದ್ದ ಕಾರು ನಿಯಂತ್ರಣ ಕಳೆದುಕೊಂಡು ಮುಂದಿದ್ದ ಲಾರಿಗೆ ಡಿಕ್ಕಿಯಾಗಿದೆ. ಅಷ್ಟರಲ್ಲೇ ಹಿಂದಿನಿಂದ ಬಂದ ಮತ್ತೊಂದು ಲಾರಿ ಕಾರಿಗೆ ಗುದ್ದಿದ್ದು, ಎರಡು ಟ್ರಕ್ಗಳ ಮಧ್ಯೆ ಸಿಲುಕಿದ ಕಾರು ನಜ್ಜುಗುಜ್ಜಾಗಿದೆ ಎಂದು ತಿಳಿದುಬಂದಿದೆ.
ಪೊಲೀಸ್ ಮೂಲಗಳ ಪ್ರಕಾರ, ಭದ್ರಸಾಹಿ ಪ್ರದೇಶದ ಹೀರಾಲಾಲ್ ಪಲೈ ಎಂಬವರ ಕುಟುಂಬ ಮದುವೆ ಸಮಾರಂಭದಲ್ಲಿ ಪಾಲ್ಗೊಂಡು ಕಾರಿನಲ್ಲಿ ಹಿಂತಿರುಗುತ್ತಿದ್ದಾಗ ರಾತ್ರಿ 9 ಗಂಟೆಗೆ ರಿಮುಲಿ ಬೈಪಾಸ್‌ನಲ್ಲಿ ಅಪಘಾತ ಸಂಭವಿಸಿದೆ.
ಸಂಜಯ್ ಮಹಾಕುಡ್, ಪತ್ನಿ ಪ್ರಣತಿ ಪಾಲೆ, ಪಾರ್ಶಿ ಲೂಸಿ ಪಾಲೆ, ಶಾಲಾ ಸಿಪುನ್, 12 ವರ್ಷದ ಬಾಲಕಿ ಮತ್ತು ವಾಹನದ ಚಾಲಕ ಮೃತಪಟ್ಟಿದ್ದಾರೆ.
ತಮಿಳುನಾಡಿನಲ್ಲಿ 4 ಮಂದಿ ಸಾವು: ಚೆನ್ನೈ-ತಿರುಚ್ಚಿ ರಾಷ್ಟ್ರೀಯ ಹೆದ್ದಾರಿಯ ಮದುರಂತುಕಂ ಎಂಬಲ್ಲಿ ಬಸ್ ಮತ್ತು ಲಾರಿ ಡಿಕ್ಕಿಯಾಗಿ 4 ಮಂದಿ ಸಾವನ್ನಪ್ಪಿ, 15ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಈ ಘಟನೆ ಕಳೆದ ರಾತ್ರಿ ಸಂಭವಿಸಿತು. ಲಾರಿಯನ್ನು ಹಿಂದಿಕ್ಕುವ ಭರದಲ್ಲಿ ಅಪಘಾತ ಸಂಭವಿಸಿದೆ. ಗಾಯಾಳುಗಳನ್ನು ಚೆಂಗಲ್ಪಟ್ಟು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಡಿವೈಡರ್ ಹಾರಿ ಟ್ರಕ್ಗೆ ಗುದ್ದಿದ ಕಾರು; ಸ್ಥಳದಲ್ಲೇ 6 ಜನ ಸಾವು - UP Road Accident