ನವದೆಹಲಿ: 11 ನೇ ಶತಮಾನದ ಸಂರಕ್ಷಿತ ಸ್ಮಾರಕವಾದ ಭೋಜ್ಶಾಲಾ ಸಮೀಕ್ಷೆ ನಡೆಸುವಂತೆ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಗೆ (ಎಎಸ್ಐ) ಮಧ್ಯಪ್ರದೇಶ ಹೈಕೋರ್ಟ್ ನೀಡಿದ ಆದೇಶವನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್ ಶುಕ್ರವಾರ ನಿರಾಕರಿಸಿದೆ. ತುರ್ತು ವಿಚಾರಣೆ ಕೋರಿ ಸಲ್ಲಿಕೆಯಾಗಿದ್ದ ಅರ್ಜಿ ಕುರಿತು ಪ್ರತಿಕ್ರಿಯಿಸಿದ ನ್ಯಾಯಮೂರ್ತಿ ಹೃಷಿಕೇಶ್ ರಾಯ್ ನೇತೃತ್ವದ ನ್ಯಾಯಪೀಠ, ಸಮೀಕ್ಷೆಗೆ ತಡೆಯಾಜ್ಞೆ ನೀಡಲು ಸಾಧ್ಯವಿಲ್ಲ. ಹೋಳಿ ಹಬ್ಬದ ನಂತರ ಏಪ್ರಿಲ್ 1 ರಂದು ಅರ್ಜಿಯ ವಿಚಾರಣೆ ಕೈಗೆತ್ತಿಕೊಳ್ಳುತ್ತೇವೆ ಎಂದು ನ್ಯಾಯಪೀಠ ಹೇಳಿದೆ.
ಎಎಸ್ಐ ಸಮೀಕ್ಷೆ ಶುಕ್ರವಾರದಿಂದ ಪ್ರಾರಂಭವಾಗಲಿದೆ. ಸಮೀಕ್ಷೆಯು ಸಂರಕ್ಷಿತ ಸ್ಮಾರಕವನ್ನು ಹಾನಿಗೊಳಿಸುತ್ತದೆ ಎಂದು ಮೌಲಾನಾ ಕಮಲುದ್ದೀನ್ ವೇಲ್ಫೇರ್ ಸೊಸೈಟಿ ಗುರುವಾರ ತುರ್ತು ವಿಚಾರಣೆಗಾಗಿ ಸುಪ್ರೀಂ ಕೋರ್ಟ್ ರಿಜಿಸ್ಟ್ರಿಯನ್ನು ಸಂಪರ್ಕಿಸಿತ್ತು. ಮೇ 2022 ರಲ್ಲಿ, ಹಿಂದೂ ಫ್ರಂಟ್ ಫಾರ್ ಜಸ್ಟಿಸ್ ಭೋಜ್ಶಾಲಾದಲ್ಲಿ ನಮಾಜ್ ವಿರುದ್ಧ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿತ್ತು. ಭೋಜ್ಶಾಲಾದ ನಿಜವಾದ ಧಾರ್ಮಿಕ ಸ್ವರೂಪವನ್ನು ನಿರ್ಧರಿಸಲು ಸಮೀಕ್ಷೆ ನಡೆಸಲು ನಿರ್ದೇಶನ ನೀಡುವಂತೆ ಹಿಂದೂ ಪರ ಸಂಸ್ಥೆ ನ್ಯಾಯಾಲಯಕ್ಕೆ ಮನವಿ ಮಾಡಿತ್ತು. ಸಂಸ್ಕೃತ ಶ್ಲೋಕಗಳನ್ನು ಬರೆದಿರುವ ಸ್ತಂಭಗಳ ಫೋಟೋಗಳನ್ನು ಅರ್ಜಿದಾರರು ಪ್ರಸ್ತುತಪಡಿಸಿದ ಪುರಾವೆಗಳ ಆಧಾರದ ಮೇಲೆ ಸ್ಮಾರಕದಲ್ಲಿ ಸಮೀಕ್ಷೆ ನಡೆಸಲು ಹೈಕೋರ್ಟ್ ಎಎಸ್ಐಗೆ ಅನುಮತಿ ನೀಡಿತ್ತು.
ಮಧ್ಯಪ್ರದೇಶದ ಬುಡಕಟ್ಟು ಪ್ರಾಬಲ್ಯದ ಧಾರ್ ಜಿಲ್ಲೆಯಲ್ಲಿ ವಿವಾದಿತ ಸ್ಥಳವು ಹಿಂದೂಗಳಿಗೆ ಸೇರಿದೆಯೇ ಅಥವಾ ಮುಸ್ಲಿಮರಿಗೆ ಸೇರಿದೆಯೇ ಎಂದು ಖಚಿತಪಡಿಸಿಕೊಳ್ಳಲು ಮಧ್ಯಪ್ರದೇಶ ಹೈಕೋರ್ಟ್ ನಿರ್ದೇಶನ ನೀಡಿದ ನಂತರ ಎಎಸ್ಐ ತಂಡವು ಸಮೀಕ್ಷೆಯನ್ನು ಪ್ರಾರಂಭಿಸಿದೆ. ಈ ಸ್ಥಳವು ಸರಸ್ವತಿ ದೇವಿಯ ದೇವಾಲಯ ಎಂದು ಹಿಂದೂಗಳು ವಾದಿಸಿದರೆ. ಮುಸ್ಲಿಮರು ಇದನ್ನು 'ಕಮಲ್ ಮೌಲಾ ಮಸೀದಿ ಎಂದು ವಾದಿಸುತ್ತಿದ್ದಾರೆ.
ಬ್ಯಾಂಕ್ವೆಟ್ ಹಾಲ್ ಒಳಗೆ ಜನರ ಪ್ರವೇಶವನ್ನು ಕಟ್ಟುನಿಟ್ಟಿನ ನಿಷೇಧದ ನಡುವೆಯೇ ಅರವತ್ತು ಕ್ಯಾಮೆರಾಗಳ ಕಣ್ಗಾವಲಿನಲ್ಲಿ ಸಮೀಕ್ಷೆ ನಡೆಸಲಾಗುತ್ತಿದೆ. ಮಧ್ಯಪ್ರದೇಶ ಹೈಕೋರ್ಟ್‌ನ ಇಂದೋರ್ ಪೀಠವು ಮಾರ್ಚ್ 11 ರಂದು ಜ್ಞಾನವಾಪಿ ಮಸೀದಿಯ ಮಾದರಿಯಲ್ಲಿ ಧಾರ್ನ ಭೋಜಶಾಲದಲ್ಲಿ ಎಎಸ್ಐ ಮೂರು ವಾರಗಳಲ್ಲಿ ವೈಜ್ಞಾನಿಕ ಸಮೀಕ್ಷೆ ನಡೆಸಬೇಕು ಎಂದು ಆದೇಶಿಸಿತ್ತು.
ಇಂದಿನಿಂದ ಪ್ರಾರಂಭವಾದ ಸಮೀಕ್ಷೆ: ಶುಕ್ರವಾರ ಬೆಳಗ್ಗೆ 6 ಗಂಟೆಗೆ ಸಮೀಕ್ಷೆ ಆರಂಭವಾಗಿದೆ. ಎರಡು ಹಂತಗಳಲ್ಲಿ ಸಮೀಕ್ಷೆ ನಡೆದಿದೆ. ಮೊದಲ ಹಂತವು 12 ಗಂಟೆಗೆ ಮುಕ್ತಾಯಗೊಂಡರೆ, ಎರಡನೇ ಹಂತವು ಸಂಜೆ ನಾಲ್ಕು ಗಂಟೆಗೆ ಪ್ರಾರಂಭವಾಯಿತು. ಮುಸ್ಲಿಮರ ಪವಿತ್ರ ರಂಜಾನ್ ಮಾಸದ ಮಧ್ಯೆ ವಿವಾದಿತ ಸ್ಥಳದ ಸುತ್ತಲೂ ಭದ್ರತೆಯನ್ನು ಹೆಚ್ಚಿಸಲಾಗಿದೆ. ಮುಂಜಾಗ್ರತಾ ಕ್ರಮವಾಗಿ ಎಎಸ್‌ಪಿ, ಸಿಎಸ್‌ಪಿ, ಡಿಎಸ್‌ಪಿ ಮತ್ತು ಎಂಟು ಪೊಲೀಸ್ ಠಾಣೆಗಳ ಠಾಣಾಧಿಕಾರಿಗಳು ಸೇರಿದಂತೆ 175 ಪೊಲೀಸ್ ಸಿಬ್ಬಂದಿಯನ್ನು ಸ್ಥಳದಲ್ಲಿ ನಿಯೋಜಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಸಮೀಕ್ಷೆ ವೇಳೆ ಸ್ಥಳದಲ್ಲಿ ಹಾಜರಿರುವಂತೆ ಎರಡೂ ಕಡೆಯವರಿಗೆ ಎಎಸ್‌ಐ ನೋಟಿಸ್ ನೀಡಿದೆ.