ನವದೆಹಲಿ: ಯಾವುದೇ ಸಮಾಲೋಚನೆ ನಡೆಸದೇ ನ್ಯಾಯಾಲಯದ ಲಾಂಛನ ಮತ್ತು ನ್ಯಾಯದೇವತೆಯ ಪ್ರತಿಮೆಯಲ್ಲಿ ಬದಲಾವಣೆ ಮಾಡಿರುವುದನ್ನು ಆಕ್ಷೇಪಿಸಿ ಸುಪ್ರೀಂ ಕೋರ್ಟ್ ಬಾರ್ ಅಸೋಸಿಯೇಷನ್ (ಎಸ್ಸಿಬಿಎ) ನಿರ್ಣಯ ಪಾಸ್ ಮಾಡಿದೆ.
ನ್ಯಾಯಾಲಯದ ಆಡಳಿತದಲ್ಲಿ ನಾವೂ ಕೂಡ ಸಮಾನ ಭಾಗಿದಾರರು. ಆದರೆ, ನಮ್ಮ ಗಮನಕ್ಕೆ ತಾರದೇ ಮಹತ್ವದ ಬದಲಾವಣೆ ಮಾಡಲಾಗಿದೆ. ಈ ಕುರಿತು ನಮಗೆ ಯಾವುದೇ ಸೂಚನೆಯನ್ನೂ ನೀಡಿಲ್ಲ ಎಂದು ನಿರ್ಣಯದಲ್ಲಿ ಆಕ್ಷೇಪಿಸಿದೆ.
ಕೋರ್ಟ್‌ನ ಅತಿ ಭದ್ರತಾ ವಲಯದಲ್ಲಿ ಮ್ಯೂಸಿಯಂ ಮತ್ತು ವಕೀಲರಿಗೆ ಕೆಫೆ ಕಂ ಲೌಂಜ್ ನಿರ್ಮಾಣ ಮಾಡುವುದಕ್ಕೂ ವಿರೋಧ ವ್ಯಕ್ತಪಡಿಸಿದೆ. ನಾವು ಲೈಬ್ರೆರಿಗೆ ಬೇಡಿಕೆ ಇಟ್ಟಿದ್ದೆವು. ಇದೀಗ ಅಲ್ಲಿ ಮ್ಯೂಸಿಯಂ ಸ್ಥಾಪಿಸಲು ಪ್ರಸ್ತಾಪಿಸಲಾಗಿದೆ. ಈಗಿರುವ ಕೆಫೆಟಿರಿಯಾದಲ್ಲಿ ಬಾರ್ ಸದಸ್ಯರಿಗೆ ಕೆಫೆ ಕಂ ಲೌಂಜ್ ನಿರ್ಮಾಣಕ್ಕೆ ನಿರ್ಧರಿಸಿದ್ದಾರೆ. ಇದಕ್ಕೆ ನಮ್ಮ ವಿರೋಧವಿದೆ ಎಂದು ಹೇಳಿದೆ.
ನವೆಂಬರ್ 10ರಂದು ನಿವೃತ್ತಿ ಹೊಂದುತ್ತಿರುವ ಸಿಜೆಐ ಚಂದ್ರಚೂಡ್ ಅವರು ನ್ಯಾಯದೇವತೆಯ ಪ್ರತಿಮೆಯಲ್ಲಿ ಬದಲಾವಣೆ ಮಾಡಿದ್ದರು. ನ್ಯಾಯದೇವತೆಯ ಕಣ್ಣಿಗೆ ಕಟ್ಟಿದ್ದ ಕಪ್ಪುಪಟ್ಟಿ ಬಿಚ್ಚಿದ್ದರ ಜೊತೆಗೆ, ಕೈಯಲ್ಲಿ ಕತ್ತಿಯ ಬದಲಾಗಿ ಸಂವಿಧಾನವನ್ನು ನೀಡಿದ್ದರು.
ಸಾಂಪ್ರದಾಯಿಕವಾಗಿ ನ್ಯಾಯದೇವತೆಯ ಮೂರ್ತಿಯ ಕಣ್ಣುಗಳಿಗೆ ಕಪ್ಪು ಬಣ್ಣದ ಪಟ್ಟಿ ಕಟ್ಟಲಾಗಿದೆ. ಯಾವುದೇ ಸ್ಥಾನಮಾನ, ಸಂಪತ್ತು ಅಥವಾ ಅಧಿಕಾರದಿಂದ ಪ್ರಭಾವಿತವಾಗದೇ ನ್ಯಾಯ ನೀಡಬೇಕು ಎಂಬುದು ಇದರ ಹಿಂದಿನ ಉದ್ದೇಶ. ಪ್ರತಿಮೆಯ ಕೈಯಲ್ಲಿರುವ ಕತ್ತಿ ಅಧಿಕಾರ ಮತ್ತು ಶಿಕ್ಷೆಯನ್ನು ಪ್ರತಿಬಿಂಬಿಸುತ್ತಿತ್ತು. (ಐಎಎನ್ಎಸ್)
ಇದನ್ನೂ ಓದಿ: ಸಿಜೆಐ ಚಂದ್ರಚೂಡ್ ಉತ್ತರಾಧಿಕಾರಿಯಾಗಿ ನ್ಯಾಯಮೂರ್ತಿ ಖನ್ನಾ ಹೆಸರು ಪ್ರಸ್ತಾಪ