ನವದೆಹಲಿ : ದಿಲ್ಲಿ ಉಚ್ಚ ನ್ಯಾಯಾಲಯಕ್ಕೆ ಮಂಜೂರು ಮಾಡಲಾದ ಭೂಮಿಯನ್ನು ಅತಿಕ್ರಮಿಸಿ ನಿರ್ಮಿಸಲಾದ ಪಕ್ಷದ ಕಚೇರಿಯನ್ನು ಆ.10ರೊಳಗೆ ಖಾಲಿ ಮಾಡುವಂತೆ ಆಮ್ ಆದ್ಮಿ ಪಕ್ಷಕ್ಕೆ (ಎಎಪಿ)ಗೆ ಸುಪ್ರೀಂ ಕೋರ್ಟ್ ಸೋಮವಾರ ಆದೇಶಿಸಿದೆ. ನ್ಯಾಯಮೂರ್ತಿ ವಿಕ್ರಮ್ ನಾಥ್ ನೇತೃತ್ವದ ರಜಾಕಾಲದ ಪೀಠವು ಮಾರ್ಚ್ 4 ರಂದು ಸುಪ್ರೀಂ ಕೋರ್ಟ್ ನಿಗದಿಪಡಿಸಿದ ಜೂನ್ 15ರ ಗಡುವು ವಿಸ್ತರಿಸುವಂತೆ ಕೋರಿ ಎಎಪಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿ, ಈ ಆದೇಶ ನೀಡಿತು.
ನ್ಯಾಯಮೂರ್ತಿ ಸಂದೀಪ್ ಮೆಹ್ತಾ ಅವರನ್ನೂ ಒಳಗೊಂಡ ನ್ಯಾಯಪೀಠವು, ಈ ವರ್ಷದ ಆಗಸ್ಟ್ 10 ರಂದು ಅಥವಾ ಅದಕ್ಕೂ ಮೊದಲು ಶಾಂತಿಯುತವಾಗಿ ಆವರಣವನ್ನು ಹಸ್ತಾಂತರಿಸುವುದಾಗಿ ಒಂದು ವಾರದೊಳಗೆ ಸುಪ್ರೀಂ ಕೋರ್ಟ್ ರಿಜಿಸ್ಟ್ರಿಗೆ ಮುಚ್ಚಳಿಕೆಯನ್ನು ಸಲ್ಲಿಸುವಂತೆ ಆಮ್ ಆದ್ಮಿ ಪಕ್ಷಕ್ಕೆ ಆದೇಶಿಸಿದೆ. ಸಿಎಂ ಅರವಿಂದ್ ಕೇಜ್ರಿವಾಲ್ ಅಬಕಾರಿ ನೀತಿ ಪ್ರಕರಣಕ್ಕೆ ಸಂಬಂಧಿಸಿದ ಮನಿ ಲಾಂಡರಿಂಗ್ ಪ್ರಕರಣದಲ್ಲಿ ಜೈಲಿನಲ್ಲಿರುವುದು ಗಮನಾರ್ಹ.
ಜಿಲ್ಲಾ ನ್ಯಾಯಾಂಗ ಇಲಾಖೆಯ ಮೂಲಸೌಕರ್ಯ ಅಗತ್ಯಗಳನ್ನು ಪೂರೈಸಲು ಹೈಕೋರ್ಟ್ಗೆ ಮಂಜೂರು ಮಾಡಲಾದ ರೌಸ್ ಅವೆನ್ಯೂದ ಜಾಗದ ಒಂದು ಭಾಗವನ್ನು ಅತಿಕ್ರಮಿಸಿದ್ದಕ್ಕಾಗಿ ಸಿಜೆಐ ಚಂದ್ರಚೂಡ್ ನೇತೃತ್ವದ ನ್ಯಾಯಪೀಠವು ಈ ಹಿಂದೆ ಎಎಪಿಯನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದನ್ನು ಇಲ್ಲಿ ಸ್ಮರಿಸಬಹುದು.
ಸಾರ್ವತ್ರಿಕ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಕಚೇರಿ ಖಾಲಿ ಮಾಡಲು ಜೂನ್ 15 ರ ಗಡುವನ್ನು ಸಿಜೆಐ ಚಂದ್ರಚೂಡ್ ನೇತೃತ್ವದ ಪೀಠ ನಿಗದಿಪಡಿಸಿತ್ತು ಮತ್ತು ಕಚೇರಿಗಾಗಿ ಪರ್ಯಾಯ ಸ್ಥಳ ಪಡೆಯಲು ಕೇಂದ್ರ ಸರ್ಕಾರದ ಭೂಮಿ ಮತ್ತು ಅಭಿವೃದ್ಧಿ ಕಚೇರಿಯನ್ನು (ಎಲ್ &ಡಿಒ) ಸಂಪರ್ಕಿಸುವಂತೆ ಎಎಪಿಗೆ ಸೂಚಿಸಿತ್ತು.
ತಾತ್ಕಾಲಿಕ ಜಾಗಕ್ಕಾಗಿ ಎಎಪಿ ಸಲ್ಲಿಸಿರುವ ಅರ್ಜಿಯ ಬಗ್ಗೆ ಆರು ವಾರಗಳಲ್ಲಿ ನಿರ್ಧರಿಸುವಂತೆ ದೆಹಲಿ ಹೈಕೋರ್ಟ್ ಕಳೆದ ವಾರ ಕೇಂದ್ರಕ್ಕೆ ನಿರ್ದೇಶನ ನೀಡಿತ್ತು. ಮಾನ್ಯತೆ ಪಡೆದ ರಾಷ್ಟ್ರೀಯ ಪಕ್ಷವಾಗಿ, ಎಎಪಿ ತನ್ನ ಕಚೇರಿಯನ್ನು ನಿರ್ಮಿಸಲು ಶಾಶ್ವತ ಭೂಮಿಯನ್ನು ಮಂಜೂರು ಮಾಡುವವರೆಗೆ ತಾತ್ಕಾಲಿಕ ಕಚೇರಿ ಸ್ಥಳ ಪಡೆಯಲು ಪಕ್ಷವು ಅರ್ಹವಾಗಿದೆ ಎಂದು ಆಪ್ ವಾದಿಸಿತ್ತು.
ಕೇಜ್ರಿವಾಲ್ ಜಾಮೀನು ಅರ್ಜಿ ಜೂ.14 ರಂದು ವಿಚಾರಣೆ: ದೆಹಲಿ ಅಬಕಾರಿ ನೀತಿ 2021-22ಕ್ಕೆ ಸಂಬಂಧಿಸಿದ ಮನಿ ಲಾಂಡರಿಂಗ್ ಪ್ರಕರಣದಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ದೆಹಲಿ ನ್ಯಾಯಾಲಯ ಜೂನ್ 14 ಕ್ಕೆ ಮುಂದೂಡಿದೆ. ಕೇಜ್ರಿವಾಲ್ ಈ ತಿಂಗಳ ಆರಂಭದಲ್ಲಿ ನ್ಯಾಯಾಲಯದಲ್ಲಿ ಎರಡು ಪ್ರತ್ಯೇಕ ಜಾಮೀನು ಅರ್ಜಿಗಳನ್ನು ಸಲ್ಲಿಸಿದ್ದರು. ಮೊದಲನೆಯದು ವೈದ್ಯಕೀಯ ಆಧಾರದ ಮೇಲೆ ಮಧ್ಯಂತರ ಜಾಮೀನು ಅರ್ಜಿ, ಎರಡನೆಯದು ಪ್ರಕರಣದಲ್ಲಿ ನಿಯಮಿತ ಜಾಮೀನು ಅರ್ಜಿ ಆಗಿದ್ದವು. ಬುಧವಾರ, ನ್ಯಾಯಾಲಯವು ಅವರಿಗೆ ಮಧ್ಯಂತರ ಜಾಮೀನು ನಿರಾಕರಿಸಿತ್ತು.