ಕೋಲ್ಕತಾ : ಪಶ್ಚಿಮ ಬಂಗಾಳದ ಮುರ್ಷಿದಾಬಾದ್ ಜಿಲ್ಲೆಯ ಭಾರತ್ ಸೇವಾಶ್ರಮ ಸಂಘದ ಬಹರಾಂಪುರ ಘಟಕದೊಂದಿಗೆ ಸಂಬಂಧ ಹೊಂದಿರುವ ಸನ್ಯಾಸಿ ಕಾರ್ತಿಕ್ ಮಹಾರಾಜ್ ಸೋಮವಾರ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರಿಗೆ ಲೀಗಲ್ ನೋಟಿಸ್ ಕಳುಹಿಸಿದ್ದಾರೆ. ಕಾರ್ತಿಕ್ ಮಹಾರಾಜ್ ಅವರು ಇತ್ತೀಚಿನ ದಿನಗಳಲ್ಲಿ ಸಾರ್ವಜನಿಕ ಸಭೆಯಲ್ಲಿ ಬಿಜೆಪಿ ಪರವಾಗಿ ಕೆಲಸ ಮಾಡುತ್ತಿದ್ದಾರೆ ಮತ್ತು ಮತದಾರರ ಮೇಲೆ ಪ್ರಭಾವ ಬೀರಲು ಪ್ರಯತ್ನಿಸುತ್ತಿದ್ದಾರೆ ಎಂದು ಸಿಎಂ ಮಮತಾ ಆರೋಪಿಸಿದ್ದರು.
ಮಮತಾ ಬ್ಯಾನರ್ಜಿ ಅವರಿಗೆ ಕಳುಹಿಸಲಾದ ಲೀಗಲ್ ನೋಟಿಸ್ನ ಪ್ರತಿ ಐಎಎನ್ಎಸ್ಗೆ ಲಭ್ಯವಾಗಿದೆ. ಬಹಿರಂಗ ಸಭೆಯಲ್ಲಿ ಸಿಎಂ ಮಮತಾ ತಮ್ಮ ವಿರುದ್ಧ ಮಾಡಿರುವ ಆರೋಪಗಳು ಆಧಾರರಹಿತ, ಸುಳ್ಳು ಮತ್ತು ಅತ್ಯಂತ ಮಾನಹಾನಿಕರವಾಗಿವೆ ಎಂದು ಮಹಾರಾಜ್ ನೋಟಿಸ್ನಲ್ಲಿ ಹೇಳಿದ್ದಾರೆ. ಮುಂದಿನ ನಾಲ್ಕು ದಿನಗಳಲ್ಲಿ ಉತ್ತರ ನೀಡದಿದ್ದರೆ ಸೂಕ್ತ ಕಾನೂನು ಕ್ರಮಕ್ಕೆ ಮುಂದಾಗುವುದಾಗಿ ಅವರು ಲೀಗಲ್ ನೋಟಿಸ್ ನಲ್ಲಿ ತಿಳಿಸಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಕಾರ್ತಿಕ್ ಮಹಾರಾಜ್, ಮುಖ್ಯಮಂತ್ರಿಗೆ ಲೀಗಲ್ ನೋಟಿಸ್ ನೀಡಿರುವುದನ್ನು ದೃಢಪಡಿಸಿದ್ದಾರೆ. ಮುಖ್ಯಮಂತ್ರಿಗಳು ತಮ್ಮ ವಿರುದ್ಧ ಮಾಡಿದ ಆರೋಪಗಳು ಸುಳ್ಳು ಮತ್ತು ಆಧಾರರಹಿತ ಎಂದು ಅವರು ಈ ಸಂದರ್ಭದಲ್ಲಿ ಹೇಳಿದರು.
"ತೃಣಮೂಲ ಕಾಂಗ್ರೆಸ್ ಏಜೆಂಟರನ್ನು ಮತದಾನ ಕೇಂದ್ರಗಳಿಂದ ಓಡಿಸುವಂತೆ ನಾನು ಹೇಳುತ್ತಿದ್ದೇನೆ ಎಂಬುದಾಗಿ ಅವರು ಆರೋಪಿಸಿದ್ದಾರೆ. ಆದರೆ ನಾನು ಅಂತಹ ಮಾತುಗಳನ್ನು ಎಂದಿಗೂ ಹೇಳಿಲ್ಲ. ನಾನೊಬ್ಬ ಸನ್ಯಾಸಿ. ನಾನು ಯಾವುದೇ ರಾಜಕೀಯ ಪಕ್ಷದೊಂದಿಗೆ ಸಂಬಂಧ ಹೊಂದಿಲ್ಲ. ಹೀಗಾಗಿ ಮುಖ್ಯಮಂತ್ರಿಗಳು ತಮ್ಮ ಆರೋಪಗಳನ್ನು ಸಾಬೀತುಪಡಿಸಲು ಎಂದಿಗೂ ಸಾಧ್ಯವಾಗುವುದಿಲ್ಲ" ಎಂದು ಕಾರ್ತಿಕ್ ಮಹಾರಾಜ್ ಹೇಳಿದರು.
ಪಶ್ಚಿಮ ಬಂಗಾಳದಲ್ಲಿ ಭಾನುವಾರ ನಡೆದ ಮೂರು ವಿಭಿನ್ನ ಚುನಾವಣಾ ರ್ಯಾಲಿಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಇದೇ ವಿಚಾರವಾಗಿ ಸಿಎಂ ಮಮತಾ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದರು. ರಾಮಕೃಷ್ಣ ಮಠ ಮತ್ತು ರಾಮಕೃಷ್ಣ ಮಿಷನ್, ಭಾರತ್ ಸೇವಾಶ್ರಮ ಸಂಘ ಮತ್ತು ಇಸ್ಕಾನ್ ನಂತಹ ಶ್ರೇಷ್ಠ ಸಂಸ್ಥೆಗಳಿಗೆ ಸಂಬಂಧಿಸಿದ ಸಂತರನ್ನು ನಿಂದಿಸುವ ಮತ್ತು ಬೆದರಿಕೆ ಹಾಕುವ ಮೂಲಕ ಸಿಎಂ ಎಲ್ಲಾ ಮಿತಿಗಳನ್ನು ಮೀರಿದ್ದಾರೆ ಎಂದು ಪ್ರಧಾನಿ ಹೇಳಿದ್ದರು.
ಲೀಗಲ್ ನೋಟಿಸ್ ಬಗ್ಗೆ ಈವರೆಗೂ ತೃಣಮೂಲ ಕಾಂಗ್ರೆಸ್ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಈ ಬಗ್ಗೆ ಮಾತನಾಡಿದ ಪಶ್ಚಿಮ ಬಂಗಾಳ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸುವೇಂದು ಅಧಿಕಾರಿ, ಸನಾತನ ಧರ್ಮದ ಮೇಲೆ ಮಮತಾ ಬ್ಯಾನರ್ಜಿ ಅವರ ದಾಳಿಗಳ ವಿರುದ್ಧ ಧ್ವನಿ ಎತ್ತುವ ಮೂಲಕ ನೇರವಾಗಿ ಸಿಎಂರನ್ನು ಪ್ರಶ್ನೆ ಮಾಡಿದ್ದಕ್ಕಾಗಿ ಕಾರ್ತಿಕ್ ಮಹಾರಾಜ್ ಅವರಿಗೆ ಕೃತಜ್ಞತೆ ಸಲ್ಲಿಸಿದರು.
ಇದನ್ನೂ ಓದಿ : ಅಕ್ಷಯ್ ಕುಮಾರ್, ರಾಜ್‌ಕುಮಾರ್ ರಾವ್, ಜಾಹ್ನವಿ ಕಪೂರ್, ಫರ್ಹಾನ್ ಅಖ್ತರ್ ಸೇರಿ ಸೆಲೆಬ್ರಿಟಿಗಳಿಂದ ಮತದಾನ - CELEBRITIES VOTING