ಚೆನ್ನೈ (ತಮಿಳುನಾಡು): ದೇಶದ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹತ್ಯೆ ಪ್ರಕರಣದಲ್ಲಿ 30 ವರ್ಷಗಳ ಜೈಲುವಾಸ ಅನುಭವಿಸಿದ್ದ ಸಂತನ್ ಸಾವನ್ನಪ್ಪಿದ್ದಾರೆ. ಈ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿರುವ ಏಳು ಜನರಲ್ಲಿ ಶ್ರೀಲಂಕಾದ ಸಂತನ್ ಒಬ್ಬರು ಆಗಿದ್ದರು. 2022ರ ನವೆಂಬರ್ನಲ್ಲಿ ಸಂತನ್ನನ್ನು ಸುಪ್ರೀಂ ಕೋರ್ಟ್ ಬಿಡುಗಡೆ ಮಾಡಿತ್ತು.
ಸಂತನ್ ಅವರನ್ನು ತಿರುಚ್ಚಿ ಕೇಂದ್ರ ಕಾರಾಗೃಹದ ಸ್ಪೆಷಲ್ ಕ್ಯಾಂಪ್ನಲ್ಲಿ ಇರಿಸಲಾಗಿತ್ತು. ಈ ವೇಳೆ ಲಿವರ್ ಹಾನಿ ಹಾಗೂ ಕಾಲು ಊತದಿಂದ ಬಳಲುತ್ತಿದ್ದ ಅವರು ಇಂದು (ಫೆ.28) ಬೆಳಗ್ಗೆ 7.50ಕ್ಕೆ ಚೆನ್ನೈನ ರಾಜೀವ್ ಗಾಂಧಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.
ನಿರಂತರವಾಗಿ ಮನವಿ ಮಾಡಿದ್ದ ಸಂತನ್: ಕಳೆದ ಕೆಲ ತಿಂಗಳಿಂದ ತಿರುಚ್ಚಿ ಸ್ಪೆಷಲ್ ಕ್ಯಾಂಪಿನಲ್ಲಿರುವ ಸಂತನ್ ಅವರು, ತಮ್ಮ ಹುಟ್ಟೂರಾದ ಶ್ರೀಲಂಕಾಕ್ಕೆ ತೆರಳಲು ಅವಕಾಶ ನೀಡುವಂತೆ ಪ್ರಧಾನಿ ನರೇಂದ್ರ ಮೋದಿ, ಶ್ರೀಲಂಕಾ ಅಧ್ಯಕ್ಷ ರನಿಲ್ ವಿಕ್ರಮಸಿಂಘೆ, ಶ್ರೀಲಂಕಾ ಉಪ ಕಾನ್ಸುಲ್, ವಿದೇಶಾಂಗ ಸಚಿವರು ಸೇರಿದಂತೆ ಮತ್ತಿತರರಿಗೆ ಪತ್ರ ಬರೆದಿದ್ದರು. ಕಳೆದ 32 ವರ್ಷಗಳಿಂದ ನನ್ನ ತಾಯಿಯನ್ನು ನೋಡಿಲ್ಲ, ಅವರ ವೃದ್ಧಾಪ್ಯದಲ್ಲಿ ಅವರ ಜೊತೆ ಬಾಳಬೇಕಿದೆ. ಮಗನಾಗಿ ನನ್ನ ತಾಯಿಗೆ ಸಹಾಯ ಮಾಡಲು ಬಯಸುತ್ತೇನೆ ಎಂದು ಮನವಿ ಪತ್ರದಲ್ಲಿ ತಿಳಿಸಿದ್ದರು.
ಮದ್ರಾಸ್ ಹೈಕೋರ್ಟ್ನಲ್ಲಿ ಬಾಕಿಯಿತ್ತು ಅರ್ಜಿ ವಿಚಾರಣೆ: ಶ್ರೀಲಂಕಾಕ್ಕೆ ಹಸ್ತಾಂತರಿಸುವಂತೆ ಕೋರಿ ಅವರು ಮದ್ರಾಸ್ ಹೈಕೋರ್ಟ್ನಲ್ಲಿ ಸಲ್ಲಿಸಿರುವ ಅರ್ಜಿ ವಿಚಾರಣೆ ಬಾಕಿ ಇತ್ತು. ಈ ವೇಳೆ ಸಂತನ್ ಅವರು, ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವ ತಮ್ಮನ್ನು ಚೆನ್ನೈನ ರಾಜೀವ್ ಗಾಂಧಿ ಸರ್ಕಾರಿ ಜನರಲ್ ಆಸ್ಪತ್ರೆಗೆ ದಾಖಲಿಸಲು ಕೂಡಲೇ ಕ್ರಮ ಕೈಗೊಳ್ಳುವಂತೆ ಕೋರಿ ಮದ್ರಾಸ್ ಹೈಕೋರ್ಟ್ನಲ್ಲಿ ಪ್ರಕರಣವನ್ನು ಮುಂದುವರಿಸಿದ್ದರು. ಶ್ರೀಲಂಕಾದಿಂದ ಅನುಮೋದನೆ ಪಡೆದ ನಂತರ ಸಂತನ್ ಅವರನ್ನು ಗಡಿ ಪಾರು ಮಾಡುವ ಕಾರ್ಯವಿಧಾನಗಳನ್ನು ಜಾರಿಗೊಳಿಸಲಾಗುವುದು ಎಂದು ತಿಳಿಸಲಾಗಿತ್ತು.
ಇದೇ ವೇಳೆ ಅನಾರೋಗ್ಯದ ಕಾರಣ ಚೆನ್ನೈನ ರಾಜೀವ್ ಗಾಂಧಿ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸಂತನ್ ಸ್ಥಿತಿ ಹದಗೆಟ್ಟಿತ್ತು. ಅವರ ಆರೋಗ್ಯದ ಮೇಲೆ ತೀವ್ರ ನಿಗಾ ವಹಿಸಲಾಗಿತ್ತು. ಆದ್ರೆ, ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಗುಜರಾತ್: ಒಂದು ಸಾವಿರ ಕೋಟಿ ರೂ. ಮೌಲ್ಯದ ಮಾದಕ ವಸ್ತುವಿದ್ದ ಇರಾನ್ ದೋಣಿ ವಶಕ್ಕೆ