ವೈಶಾಲಿ (ಬಿಹಾರ): ಉಕ್ರೇನ್ ಮೇಲೆ ರಷ್ಯಾ ಕಳೆದ ಎರಡು ವರ್ಷಗಳಿಂದ ಯುದ್ಧ ನಡೆಸುತ್ತಿದೆ. ಇದರಲ್ಲಿ ಎರಡೂ ಕಡೆಯಿಂದ ಸಾವಿರಾರು ಸೈನಿಕರು ಸಾವಿಗೀಡಾಗಿದ್ದಾರೆ. ಈಚೆಗಷ್ಟೇ ರಷ್ಯಾ ಪ್ರವಾಸ ಕೈಗೊಂಡಿದ್ದ ಪ್ರಧಾನಿ ನರೇಂದ್ರ ಮೋದಿ, ಅಲ್ಲಿನ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರಿಗೆ ಯುದ್ಧ ನಿಲ್ಲಿಸಿ ಶಾಂತಿ ಮಾತುಕತೆಗೆ ಸಲಹೆ ನೀಡಿದ್ದರು.
ನಿತ್ಯವೂ ಉಕ್ರೇನ್ ಮೇಲೆ ಮುಗಿಬೀಳುತ್ತಿರುವ ರಷ್ಯಾ ಸೈನಿಕರಿಗೆ ಶಸ್ತ್ರಾಸ್ತ್ರಗಳ ಜೊತೆಗೆ ಉಡುಪು, ಶೂಗಳು ಅತಿಮುಖ್ಯ. ಚಳಿ, ಗಾಳಿ, ಮಳೆ ಎನ್ನದೇ ಹೋರಾಡುತ್ತಿರುವ ರಷ್ಯಾ ಯೋಧರಿಗೆ ಬಿಹಾರದ ಗಾಜಿಪುರ ಕಾರ್ಖಾನೆಯೊಂದು ವಿಶೇಷ ಶೂಗಳನ್ನು ತಯಾರಿಸಿ ರವಾನಿಸುತ್ತಿದೆ ಎಂದರೆ ನೀವು ನಂಬಲೇಬೇಕು.
ಹೌದು, ಮೇಡ್ ಇನ್ ಬಿಹಾರ್ ಹೆಸರಿನಲ್ಲಿ ರಷ್ಯಾದ ಸೈನಿಕರಿಗೆ ಬೂಟುಗಳನ್ನು ಒದಗಿಸುತ್ತಿದೆ. ಹಾಜಿಪುರ ಮೂಲದ ಕಾಂಪಿಟೆನ್ಸ್ ಎಕ್ಸ್‌ಪೋರ್ಟ್ಸ್ ಖಾಸಗಿ ಕಂಪನಿಯು ತಾನು ತಯಾರಿಸಿದ ಬೂಟುಗಳನ್ನು ರಷ್ಯಾಕ್ಕೆ ರಫ್ತು ಮಾಡುತ್ತಿದೆ. ಈ ಮೂಲಕ ಅಂತಾರಾಷ್ಟ್ರೀಯ ಮಟ್ಟದಲ್ಲಿ ವ್ಯಾಪಾರ ನಡೆಸುತ್ತಿದೆ. ಜೊತೆಗೆ ರಷ್ಯಾ ಮೂಲದ ಕಂಪನಿಗಳಿಗೆ ಸೇನಾ ಬೂಟುಗಳನ್ನು ಮತ್ತು ಯುರೋಪಿಯನ್ ಮಾರುಕಟ್ಟೆಗಳಿಗೆ ಡಿಸೈನರ್ ಶೂಗಳನ್ನೂ ರವಾನೆ ಮಾಡುತ್ತಿದೆ.
ಹಾಜಿಪುರದಲ್ಲಿದೆ ಶೂ ತಯಾರಿಕಾ ಕಂಪನಿ: ಈ ಬಗ್ಗೆ ಮಾಹಿತಿ ಹಂಚಿಕೊಂಡ ಕಂಪನಿಯ ಜನರಲ್ ಮ್ಯಾನೇಜರ್ ಶಿಬ್ ಕುಮಾರ್ ರಾಯ್, "2018 ರಿಂದ ಹಾಜಿಪುರದಲ್ಲಿ ಬೂಟು ತಯಾರಿ ಮಾಡುತ್ತಿದ್ದೇವೆ. ರಷ್ಯಾ ಯೋಧರು ಬಳಸುತ್ತಿರುವ ಸೇನಾ ಬೂಟುಗಳು ನಮ್ಮಲ್ಲಿಯೇ ತಯಾರಾಗಿವೆ. ರಷ್ಯಾದ ಜೊತೆಗೆ, ಯುರೋಪ್‌ನ ರಾಷ್ಟ್ರಗಳಿಗೂ ರಫ್ತು ಮಾಡಲಾಗುತ್ತಿದೆ ಎಂದರು.
ರಷ್ಯಾದ ಸೈನ್ಯಕ್ಕೆ ಒದಗಿಸಲಾಗುತ್ತಿರುವ ಸುರಕ್ಷತಾ ಶೂಗಳು ಹಗುರ ಮತ್ತು ಉತ್ಕೃಷ್ಟವಾಗಿವೆ. ಯಾವುದೇ ಪ್ರದೇಶದಲ್ಲಿ ನಡೆದರೂ ಜಾರದಂತಿವೆ. ವಿಶೇಷ ಲಕ್ಷಣಗಳುಳ್ಳ ಈ ಶೂಗಳು, ಮೈನಸ್ 40 ಡಿಗ್ರಿ ಸೆಲ್ಸಿಯಸ್ ಹವಾಮಾನ ಪರಿಸ್ಥಿತಿಯನ್ನೂ ತಡೆದುಕೊಳ್ಳುತ್ತದೆ. ಹೀಗಾಗಿ ಹೆಚ್ಚಿನ ಬೇಡಿಕೆ ಇದೆ ಎಂದು ತಿಳಿಸಿದರು.
ಶತಕೋಟಿ ಮೌಲ್ಯದ ವ್ಯವಹಾರ: ಕಳೆದ ವರ್ಷ 100 ಕೋಟಿ ಮೌಲ್ಯದ 1.5 ಮಿಲಿಯನ್ ಶೂಗಳನ್ನು ರಫ್ತು ಮಾಡಲಾಗಿದೆ. ಮುಂದಿನ ವರ್ಷ ಇದನ್ನು ಡಬಲ್ ಮಾಡುವ ಗುರಿ ಇದೆ. ಹಾಜಿಪುರದಲ್ಲಿ ತಯಾರಿಸಲಾದ ಐಷಾರಾಮಿ ಡಿಸೈನರ್ ಅಥವಾ ಫ್ಯಾಷನ್ ಬೂಟುಗಳನ್ನು ಯುರೋಪಿಯನ್ ಮಾರುಕಟ್ಟೆಗಳಿಗೆ ರಫ್ತು ಮಾಡಲಾಗಿದೆ. ಇಟಲಿ, ಫ್ರಾನ್ಸ್, ಸ್ಪೇನ್ ಮತ್ತು ಇಂಗ್ಲೆಂಡ್ಗೂ ರವಾನಿಸಲಾಗಿದೆ. ಬೆಲ್ಜಿಯಂ ಕಂಪನಿಯೊಂದಿಗೆ ಮಾತುಕತೆ ನಡೆಯುತ್ತಿದೆ ಎಂದು ಕಂಪನಿಯ ಫ್ಯಾಷನ್ ಡೆವಲಪರ್ ಅಂಡ್ ಮಾರ್ಕೆಟ್ ಚೀಫ್ ಮಜರ್ ಪಲ್ಲುಮಿಯಾ ಹೇಳಿದರು.
ಇದನ್ನೂ ಓದಿ: ಬಿಹಾರ ಮುಸ್ಲಿಂ ಸಮುದಾಯದಲ್ಲಿ 'ಜನ ಸುರಾಜ್' ಬಲವಾಗಿ ಬೇರೂರುತ್ತಿದೆ: ಪ್ರಶಾಂತ್ ಕಿಶೋರ್ - Jan Suraaj campaign