ಪಾಟ್ನಾ (ಬಿಹಾರ): ಇಂದು ಸಹೋದರ-ಸಹೋದರಿಯರ ಬಾಂಧವ್ಯದ ಸಂಕೇತ ರಕ್ಷಾ ಬಂಧನ ಹಬ್ಬದ ಸಂಭ್ರಮ. ರಕ್ಷಾ ಬಂಧನ ಆಚರಣೆಗೆ ಸಹೋದರಿಯವರು ಸಜ್ಜುಗೊಂಡಿದ್ದು, ಸಾಮಾನ್ಯ ರಾಖಿಗಳ ಜೊತೆಗೆ ಬೆಳ್ಳಿ, ಚಿನ್ನ ಹಾಗೂ ವಜ್ರದ ರಾಖಿಗಳೂ ಹೆಚ್ಚಾಗಿ ಮಾರಾಟವಾಗುತ್ತಿವೆ.
ಸಾಮಾನ್ಯವಾಗಿ ಸಹೋದರಿಯರು ತಮ್ಮ ಸಹೋದರರ ಕೈಗೆ ರೇಷ್ಮೆ ದಾರಗಳಿಂದ ಸಿದ್ಧಗೊಂಡ ರಾಖಿಗಳನ್ನು ಕಟ್ಟುವ ಮೂಲಕ ಅವರ ಸಮೃದ್ಧಿಗಾಗಿ ಪ್ರಾರ್ಥಿಸುತ್ತಾರೆ. ಪ್ರತಿಯಾಗಿ, ಸಹೋದರರು ತಮ್ಮ ಸಹೋದರಿಯರಿಗೆ ಆಶೀರ್ವಾದ ಹಾಗೂ ರಕ್ಷಣೆಯ ಭರವಸೆ ನೀಡುತ್ತಾರೆ. ಆದರೆ, ಕಾಲ ಬದಲಾದಂತೆ ರಾಖಿಯ ವೈವಿಧ್ಯವೂ ಬದಲಾಗಿದೆ. ಈಗ ಡಿಸೈನರ್ ರಾಖಿಗಳ ಟ್ರೆಂಡ್ ಹೆಚ್ಚಾಗಿದೆ. ರೇಷ್ಮೆ ದಾರದ ರಾಖಿಯ ಬದಲು ಸಹೋದರಿಯರು ಚಿನ್ನ ಮತ್ತು ಬೆಳ್ಳಿಯ ಆಭರಣಗಳಿಂದ ತಯಾರಿಸಿದ ರಾಖಿಯನ್ನು ಕಟ್ಟುತ್ತಿದ್ದಾರೆ.
ಹೌದು, ಬಿಹಾರದ ರಾಜಧಾನಿ ಪಾಟ್ನಾದಲ್ಲಿ ಆಭರಣ ವ್ಯಾಪಾರಿಗಳು ಫುಲ್ ಬ್ಯುಸಿಯಾಗಿದ್ದಾರೆ. ಇಲ್ಲಿ ರಾಖಿ 750 ರೂ.ಗಳಿಂದ ಆರಂಭವಾಗಿ 3.50 ಲಕ್ಷ ರೂ. ಬೆಲೆಯ ರಾಖಿಗಳೂ ಕೂಡ ಮಾರಾಟವಾಗಿವೆ. ಅದರಲ್ಲೂ ಕೆಲ ಯುವತಿಯರು ವಿಶೇಷ ಆರ್ಡರ್ ಮಾಡಿ ರಾಖಿಯ ಮೇಲೆ ವಜ್ರವನ್ನು ಹಾಕಿಸಿಕೊಂಡಿದ್ದಾರೆ.
ಜ್ಯುವೆಲ್ಲರಿ ಶೋರೂಂಗಳಲ್ಲಿ ಬೆಳ್ಳಿ, ಚಿನ್ನ ಮತ್ತು ಪ್ಲಾಟಿನಂ ರಾಖಿಗಳೂ ಹೆಚ್ಚಿನ ಬೇಡಿಕೆ ಇದೆ. ಇದಲ್ಲದೆ, ಈ ಆಭರಣಗಳಿಂದ ಮಾಡಿದ ರಾಖಿಗಳಿಗೆ ವಿಶೇಷವಾಗಿ ಸಿದ್ಧಪಡಿಸಲಾದ ವಜ್ರಗಳನ್ನು ಕೂಡಿಸಲಾಗುತ್ತದೆ. ರಾಖಿ 750 ರೂ.ಗಳಿಂದ ಆರಂಭವಾಗಿ 3.50 ಲಕ್ಷ ರೂ.ವರೆಗೂ ಅನೇಕರು ವಿಶೇಷ ಆರ್ಡರ್ ಮಾಡಿಕೊಂಡಿದ್ದಾರೆ. ಸಾಕಷ್ಟು ಆರ್ಡರ್‌ಗಳು ಬಂದಿದ್ದು, ವ್ಯಾಪಾರ ಜೋರಾಗಿದೆ ಎನ್ನುತ್ತಾರೆ ಜ್ಯುವೆಲ್ಲರಿ ಮಾಲೀಕ ಶೇಖರ್ ಕೇಸರಿ.
ಚಿನ್ನ, ಬೆಳ್ಳಿ ವಿನ್ಯಾಸದಲ್ಲಿ ರಾಖಿ: ಆಭರಣ ರಾಖಿಗೆ ಬೇಡಿಕೆ ಹೆಚ್ಚಿರುವುದರಿಂದ ಬಡ ಹಾಗೂ ಮಧ್ಯಮ ವರ್ಗದ ಕುಟುಂಬದ ಮಹಿಳೆಯರೂ ಸುಲಭವಾಗಿ ಖರೀದಿಸಲೆಂದು ಚಿನ್ನ, ಬೆಳ್ಳಿ ವಿನ್ಯಾಸದ ರಾಖಿ ಸಿದ್ಧಪಡಿಸಲಾಗಿದೆ. ರೇಷ್ಮೆ ದಾರವನ್ನು ರಾಖಿಯಾಗಿ ಕಟ್ಟುವ ಹಳೆಯ ಸಂಪ್ರದಾಯವಿದೆ. ಹೆಚ್ಚಿನ ಜನರು ರೇಷ್ಮೆ ದಾರದಲ್ಲಿ ತಯಾರಿಸಲಾದ ರಾಖಿಗಳನ್ನೇ ಬಯಸುತ್ತಾರೆ. ರಾಖಿಯ ಮಧ್ಯದಲ್ಲಿ ಚಿನ್ನ, ಬೆಳ್ಳಿ ವಿನ್ಯಾಸಗಳು ಮತ್ತು ಹೂವುಗಳನ್ನು ಹೊಂದಿಸಲಾಗಿದೆ. ಅನೇಕ ರಾಖಿಗಳನ್ನು ಸಂಪೂರ್ಣವಾಗಿ ಚಿನ್ನ ಮತ್ತು ಬೆಳ್ಳಿಯಿಂದಲೇ ತಯಾರಿಸಲಾಗಿದೆ ಎಂದು ಮಾಲೀಕರು ತಿಳಿಸಿದರು.
ಶುಭ ಮುಹೂರ್ತ ಯಾವಾಗ?: ಶ್ರಾವಣ ಪೂರ್ಣಿಮೆಯ ದಿನವಾದ ಆಗಸ್ಟ್ 19ರ ಸೋಮವಾರದಂದು ರಕ್ಷಾಬಂಧನ ಹಬ್ಬವನ್ನು ಆಚರಿಸಲಾಗುತ್ತಿದೆ. ಈ ಬಾರಿ ರಕ್ಷಾಬಂಧನದ ದಿನ ಭದ್ರಾ ನಕ್ಷತ್ರದ ನೆರಳು ಇದೆ. ಭದ್ರಾ ನಕ್ಷತ್ರವು ದಿನದ 1:25 ಗಂಟೆಯವರೆಗೆ ಇರಲಿದೆ. ಹೀಗಾಗಿ, ರಾಖಿ ಕಟ್ಟಲು ಶುಭ ಮುಹೂರ್ತವು ಮಧ್ಯಾಹ್ನ 1:30ರಿಂದ ಪ್ರಾರಂಭವಾಗುತ್ತದೆ ಮತ್ತು ತಡರಾತ್ರಿಯವರೆಗೆ ರಾಖಿ ಕಟ್ಟಬಹುದಾಗಿದೆ.
ಇದನ್ನೂ ಓದಿ: ದೇಶದ ಗಡಿಯಲ್ಲಿ ರಕ್ಷಾ ಬಂಧನ ಸಂಭ್ರಮ: ಸೈನಿಕರಿಗೆ ರಾಖಿ ಕಟ್ಟಿದ ಕಣಿವೆ ರಾಜ್ಯದ ಸಹೋದರಿಯರು - Raksha Bandhan 2024