ಜೈಪುರ: ರಾಜಸ್ಥಾನದಲ್ಲಿ 20 ವರ್ಷದ ಗರ್ಭಿಣಿಯೋರ್ವಳನ್ನು ವಿವಸ್ತ್ರಗೊಳಿಸಿ ಮೆರವಣಿಗೆ ಮಾಡಿದ ಪ್ರಕರಣದಲ್ಲಿ ಜಿಲ್ಲಾ ನ್ಯಾಯಾಲಯವು ಆಕೆಯ ಪತಿ ಸೇರಿದಂತೆ 14 ಮಂದಿಗೆ ಏಳು ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ. ಈ ಘಟನೆಯನ್ನು ಮಣಿಪುರದ ಘಟನೆಗೆ ಹೋಲಿಸಿದ ನ್ಯಾಯಾಲಯ ಇದೊಂದು ಅತ್ಯಂತ ಹೀನ ಕೃತ್ಯ ಎಂದು ಎಂದು ಹೇಳಿದೆ.
ಪ್ರತಾಪ್ ಗಢದ ಮುಖ್ಯ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ರಾಮಕನ್ಯಾ ಸೋನಿ ಅವರು ಪ್ರಕರಣದಲ್ಲಿ ಭಾಗಿಯಾಗಿರುವ ಮೂವರು ಮಹಿಳೆಯರಿಗೆ ಕೂಡ ಶನಿವಾರ ಐದು ವರ್ಷಗಳ ಜೈಲು ಶಿಕ್ಷೆ ವಿಧಿಸಿದ್ದಾರೆ ಎಂದು ಪ್ರಕರಣದ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಮನೀಶ್ ನಗರ್ ತಿಳಿಸಿದ್ದಾರೆ.
ದೇಶದಲ್ಲಿ ಮಹಿಳೆಯರನ್ನು ದೇವತೆಯರೆಂದು ಪೂಜಿಸಲಾಗುತ್ತದೆ ಮತ್ತು ಮಹಿಳೆಯರನ್ನು ಗೌರವಿಸುವುದನ್ನು ಪ್ರಾಚೀನ ಧರ್ಮಗ್ರಂಥಗಳಲ್ಲಿಯೂ ಉಲ್ಲೇಖಿಸಲಾಗಿದೆ ಎಂದು ಹೇಳಿದ ನ್ಯಾಯಾಧೀಶರು, 'ಕಲಿಯುಗ'ದಲ್ಲಿ (ಹಿಂದೂ ವಿಶ್ವ ಚಕ್ರದ ಕೆಟ್ಟ ಮತ್ತು ಅಂತಿಮ ಯುಗ) ಮಹಿಳೆಯರ ಮೇಲೆ ಹಿಂಸಾಚಾರ ಮತ್ತು ದೌರ್ಜನ್ಯಗಳು ಮುಂದುವರೆದಿವೆ ಎಂದರು.
"ಇದು ಆರೋಪಿಗಳು ಮಹಿಳೆಯ ಮೇಲೆ ಎಸಗಿದ ಗಂಭೀರ ಅಪರಾಧವಾಗಿದೆ. ಮಣಿಪುರದಲ್ಲಿಯೂ ಇದೇ ರೀತಿಯ ಘೋರ ಅಪರಾಧ ನಡೆದಿದೆ. ಇಂತಹ ಅಪರಾಧಗಳು ಮಹಿಳೆಯರಿಗೆ ಭಾವನಾತ್ಮಕ ನೋವನ್ನುಂಟುಮಾಡುತ್ತವೆ. ಮಹಿಳೆಯರ ವಿರುದ್ಧದ ಅಪರಾಧಗಳನ್ನು ನಿಗ್ರಹಿಸಲು ಕಠಿಣ ಕ್ರಮಗಳು ಅವಶ್ಯಕ, ಆಗ ಮಾತ್ರ ಅಪರಾಧಗಳು ಕಡಿಮೆಯಾಗುತ್ತವೆ" ಎಂದು ನ್ಯಾಯಾಧೀಶರು ಆದೇಶದಲ್ಲಿ ತಿಳಿಸಿದ್ದಾರೆ. ಕಳೆದ ವರ್ಷ ಸಂಘರ್ಷ ಪೀಡಿತ ಮಣಿಪುರದಲ್ಲಿ ಇಬ್ಬರು ಮಹಿಳೆಯರನ್ನು ಬೆತ್ತಲೆಯಾಗಿ ಮೆರವಣಿಗೆ ಮಾಡಿದ್ದನ್ನು ಅವರು ಉಲ್ಲೇಖಿಸಿದರು.
ಸಂತ್ರಸ್ತೆಯ ಪತಿ ಕನ್ಹಾ ಮೀನಾ ಅವರಲ್ಲದೆ, ಖೇಟಿಯಾ ಮೀನಾ, ಮೋತಿಯಾ ಅಲಿಯಾಸ್ ಮೋತಿಲಾಲ್ ಮೀನಾ, ಪುನಿಯಾ ಮೀನಾ, ಕೇಸ್ರಾ ಅಲಿಯಾಸ್ ಕೇಸರಿ ಮೀನಾ, ಸೂರಜ್ ಮೀನಾ, ಪಿಂಟು ಮೀನಾ, ನಾಥುಲಾಲ್ ಮೀನಾ, ಮನರಾಮ್ ಅಲಿಯಾಸ್ ವೇನಿಯಾ ಮೀನಾ, ನೇತಿಯಾ ಮೀನಾ, ರೂಪಾ ಮೀನಾ, ಗೌತಮ್ ಮೀನಾ, ರಾಮ್ ಲಾಲ್ ಮೀನಾ, ರಮೇಶ್ ಮೀನಾ ಅವರಿಗೆ ನ್ಯಾಯಾಲಯ ಏಳು ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ. ಇಂದ್ರಾ ಮೀನಾ, ಮಿರ್ಕಿ ಮೀನಾ ಮತ್ತು ಜುಮ್ಲಿ ಮೀನಾ ಎಂಬ ಮೂವರು ಮಹಿಳೆಯರಿಗೆ ಐದು ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ.
ಕಳೆದ ವರ್ಷದ ಸೆಪ್ಟೆಂಬರ್ 1ರಂದು ಮಹಿಳೆಯನ್ನು ವಿವಸ್ತ್ರಗೊಳಿಸಿ ನಂತರ ಬೆತ್ತಲೆಯಾಗಿ ಮೆರವಣಿಗೆ ಮಾಡುವ ವೀಡಿಯೊ ವೈರಲ್ ಆಗಿತ್ತು. ಪ್ರತಾಪ್ ಗಢದ ಧರಿಯವಾಡ್ ಪಟ್ಟಣದ ನಿಚ್ಲಕೋಟಾ ಗ್ರಾಮದಲ್ಲಿ ಆಗಸ್ಟ್ 31ರಂದು ಈ ಘಟನೆ ನಡೆದಿತ್ತು. ಸಂತ್ರಸ್ತೆಯು ಸಂಬಂಧ ಹೊಂದಿದ್ದ ವ್ಯಕ್ತಿಯ ಮನೆಯಲ್ಲಿರುವುದು ಪತ್ತೆಯಾಗಿತ್ತು ಎಂದು ಆರೋಪಿಸಿದ್ದ ಆರೋಪಿಗಳು ಆಕೆಯನ್ನು ವಿವಸ್ತ್ರಗೊಳಿಸಿ ಮೆರವಣಿಗೆ ಮಾಡಿದ್ದರು.
ಏಳು ತಿಂಗಳ ಗರ್ಭಿಣಿಯಾಗಿದ್ದ ಮಹಿಳೆಯನ್ನು ನಂತರ ಆಕೆಯ ತಂದೆಯ ಮನೆಗೆ ಸೇರಿಸಲಾಗಿತ್ತು. ನಂತರ ಆಕೆ ತನ್ನ ತಾಯಿಯೊಂದಿಗೆ ಬಂದು ಪತಿ ಸೇರಿದಂತೆ ಆರೋಪಿಗಳ ವಿರುದ್ಧ ಪೊಲೀಸರ ಬಳಿ ದೂರು ದಾಖಲಿಸಿದ್ದಳು. ಇದರ ನಂತರ ಎಫ್ಐಆರ್ ದಾಖಲಾಗಿ ತನಿಖೆ ನಡೆದಿತ್ತು. ಆಗ ಮುಖ್ಯಮಂತ್ರಿಯಾಗಿದ್ದ ಅಶೋಕ್ ಗೆಹ್ಲೋಟ್ ಮಹಿಳೆಯನ್ನು ಭೇಟಿಯಾಗಿ 10 ಲಕ್ಷ ರೂ.ಗಳ ಪರಿಹಾರ ಮತ್ತು ಮಹಿಳೆಗೆ ಸರ್ಕಾರಿ ಉದ್ಯೋಗವನ್ನು ಘೋಷಿಸಿದ್ದರು. ಪ್ರಕರಣದ ತನಿಖೆಗಾಗಿ ರಾಜ್ಯದ ಪೊಲೀಸ್ ಇಲಾಖೆಯುಐದು ಸದಸ್ಯರ ವಿಶೇಷ ತನಿಖಾ ತಂಡವನ್ನು (ಎಸ್ಐಟಿ) ರಚಿಸಿತ್ತು.
ಇದನ್ನೂ ಓದಿ: ಬೆಳಗಾವಿ ಮಹಿಳೆ ವಿವಸ್ತ್ರ ಪ್ರಕರಣ: ಮೌನ ವಹಿಸಿದ್ದ ಗ್ರಾಮಸ್ಥರಿಗೆ ಸಾಮೂಹಿಕ ಜವಾಬ್ದಾರಿ ನಿಗದಿಪಡಿಸಲು ಹೈಕೋರ್ಟ್ ಸಲಹೆ