ನವದೆಹಲಿ: ಬಿಜೆಬಿ ನೇತೃತ್ವದ ಕೇಂದ್ರ ಸರ್ಕಾರದ ಲ್ಯಾಟರಲ್ ಎಂಟ್ರಿ ಕ್ರಮದ ಕುರಿತು ವಿಪಕ್ಷ ನಾಯಕ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ. ಈ ಕ್ರಮದ ಮೂಲಕವಾಗಿ ದಲಿತರು, ಒಬಿಸಿ ಮತ್ತು ಆದಿವಾಸಿಗಳ ಮೇಲೆ ದಾಳಿ ನಡೆಸಲಾಗುತ್ತಿದೆ ಎಂದು ದೂರಿದ್ದಾರೆ.
'ಲ್ಯಾಟರಲ್ ಎಂಟ್ರಿ ಎಂಬುದು ದಲಿತರು, ಒಬಿಸಿ ಮತ್ತು ಆದಿವಾಸಿಗಳ ಮೇಲಿನ ದಾಳಿಯಾಗಿದೆ. ಬಿಜೆಪಿ ಸಂವಿಧಾನವನ್ನು ನಾಶ ಮಾಡುತ್ತಿದ್ದು, ಬಹುಜನರಿಂದ ಮೀಸಲಾತಿಯನ್ನು ಕಿತ್ತುಕೊಳ್ಳುತ್ತಿದೆ' ಎಂದು ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದಾರೆ.
ಹಕ್ಕು ಕಸಿಯುವ ಯತ್ನ: ಸರ್ಕಾರವು ಲ್ಯಾಟರಲ್ ಪ್ರವೇಶಾತಿ ಮೂಲಕವಾಗಿ ಸಾರ್ವಜನಿಕ ಸೇವಕರ ನೇಮಕಾತಿಗೆ ಸರ್ಕಾರ ಮುಂದಾಗಿರುವ ಬೆನ್ನಲ್ಲೇ ಅವರು ಈ ಪ್ರತಿಕ್ರಿಯೆ ತೋರಿದ್ದು, ಸರ್ಕಾರದ ಈ ನಡೆಯನ್ನು ದೇಶ ವಿರೋಧಿ ನಡೆ ಎಂದು ಟೀಕಿಸಿದ್ದಾರೆ. ಅಲ್ಲದೇ, ಇಂತಹ ಕ್ರಮದ ಮೂಲಕ ಪ.ಜಾ, ಪ.ಪಂ ಮತ್ತು ಒಬಿಸಿಗಳ ಮೀಸಲಾತಿ ಹಕ್ಕನ್ನು ಮುಕ್ತವಾಗಿ ಕಸಿದುಕೊಳ್ಳಲಾಗುತ್ತಿದೆ.
Lateral entry is an attack on Dalits, OBCs and Adivasis.
— Rahul Gandhi (@RahulGandhi) August 19, 2024
BJP’s distorted version of Ram Rajya seeks to destroy the Constitution and snatch reservations from Bahujans.
ಕೇಂದ್ರ ಲೋಕ ಸೇವಾ ಆಯೋಗದ ಬದಲಾಗಿ ರಾಷ್ಟ್ರೀಯ ಸ್ವಯಂ ಸೇವಕ್ ಸಂಘದ ಮೂಲಕ ಸಾರ್ವಜನಿಕ ಸೇವಾ ಅಧಿಕಾರಿಗಳ ನೇಮಕಾತಿ ನಡೆಸುತ್ತಿದೆ. ಈ ಮೂಲಕ ಸಂವಿಧಾನದ ಮೇಲೆ ಪ್ರಧಾನಿ ನರೇಂದ್ರ ಮೋದಿ ದಾಳಿ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ವಾಗ್ದಾಳಿಗೆ ಕಾರಣ: ಕೇಂದ್ರ ಸರ್ಕಾರದ ವಿವಿಧ ಸಚಿವಾಲಯದ ಉಪ ಕಾರ್ಯದರ್ಶಿ, ನಿರ್ದೇಶಕರು ಮತ್ತು ಜಂಟಿ ನಿರ್ದೇಶಕರಂತಹ ಪ್ರಮುಖ ಹುದ್ದೆಗೆ 45 ತಜ್ಞರನ್ನು ನೇಮಿಸುವ ಕ್ರಮದ ಹಿನ್ನಲೆ ರಾಹುಲ್ ಗಾಂಧಿ ಈ ದಾಳಿ ನಡೆಸಿದ್ದಾರೆ. ಸಾಮಾನ್ಯವಾಗಿ ಇಂತಹ ಅಧಿಕಾರಕ್ಕೆ ಅಖಿಲ ಭಾರತ ಸೇವೆಗಳಾದ ಐಎಎಸ್ (ಭಾರತೀಯ ಆಡಳಿತಾತ್ಮಕ ಸೇವೆ), ಐಪಿಎಸ್ (ಭಾರತೀಯ ಪೊಲೀಸ್ ಸೇವೆ ಮತ್ತು ಐಎಫ್ಒಎಸ್ (ಭಾರತೀಯ ಅರಣ್ಯ ಸೇವೆ)ಯಂತಹ ಗ್ರೂಪ್ ಎ ಅಧಿಕಾರಿಗಳನ್ನು ನೇಮಿಸಲಾಗುವುದು.
ಕೇಂದ್ರ ಸರ್ಕಾರದ ವಿವಿಧ ಸಚಿವಾಲಯ ಪ್ರಮುಖ ಹುದ್ದೆಗಳಿಗೆ ಲ್ಯಾಟರಲ್ ಪ್ರವೇಶಾತಿ ಮೂಲಕ ನೇಮಕಾತಿ ನಡೆಸುವ ಮೂಲಕ ಎಸ್ಸಿ, ಎಸ್ಟಿ ಮತ್ತು ಒಬಿಸಿ ವರ್ಗದ ಮೀಸಲಾತಿಯನ್ನು ಮುಕ್ತವಾಗಿ ಕಸಿಯಲಾಗುತ್ತಿದೆ ಎಂದು ರಾಹುಲ್ ಗಾಂಧಿ ಹಿಂದಿಯಲ್ಲಿ ಪೋಸ್ಟ್ ಮಾಡುವ ಮೂಲಕ ಕೇಂದ್ರದ ನಡೆ ವಿರುದ್ಧ ಕಿಡಿಕಾರಿದ್ದಾರೆ.
ಅಧಿಕಾರದಿಂದ ಮತ್ತಷ್ಟು ದೂರ: ನಾನು ಯಾವಾಗಲೂ ಹೇಳುವಂತೆ ಹಿಂದುಳಿದ ವರ್ಗದವರು ಉನ್ನತ ಅಧಿಕಾರ ಸೇರಿದಂತೆ ದೇಶದ ಎಲ್ಲಾ ಉನ್ನತ ಹುದ್ದೆಗಳನ್ನು ಪ್ರತಿನಿಧಿಸುತ್ತಿಲ್ಲ. ಇದನ್ನು ಸುಧಾರಣೆ ಮಾಡುವ ಬದಲಾಗಿ, ಲ್ಯಾಟರಲ್ ಪ್ರವೇಶಾತಿ ಮೂಲಕ ಇಂತಹ ಉನ್ನತ ಹುದ್ದೆಗಳನ್ನು ಅವರಿಂದ ಮತ್ತಷ್ಟು ದೂರ ತಳ್ಳುತ್ತಿದ್ದಾರೆ. ಇದು ಯುಪಿಎಸ್ಸಿಗೆ ತಯಾರಾಗುತ್ತಿರುವ ಪ್ರತಿಭಾವಂತರ ಹಕ್ಕನ್ನು ಕಸಿಯಲಾಗುತ್ತಿದೆ. ಹಿಂದುಳಿದ ವರ್ಗದ ಮೀಸಲಾತಿ ಸೇರಿದಂತೆ ಸಾಮಾಜಿಕ ನ್ಯಾಯದ ವಿಷಯದ ಮೇಲಿನ ದಾಳಿ ಇದಾಗಿದೆ ಎಂದು ಟೀಕಿಸಿದ್ದಾರೆ.
ಇಂಡಿಯಾ ಬ್ಲಾಕ್ ಇಂತಹ ದೇಶ ವಿರೋಧಿ ಹೆಜ್ಜೆಯನ್ನು ಬಲವಾಗಿ ಖಂಡಿಸುತ್ತದೆ. ಇದು ಸಾಮಾಜಿಕ ನ್ಯಾಯ ಮತ್ತು ಆಡಳಿತಾತ್ಮಕ ವ್ಯವಸ್ಥೆ ಎರಡನ್ನು ಹಾನಿ ಮಾಡುತ್ತದೆ. ಐಎಎಸ್ ಖಾಸಗೀಕರಣ ಮಾಡುವ ಮೂಲಕ ಮೀಸಲಾತಿಯನ್ನು ಕೊನೆಗೊಳಿಸುವುದು ಮೋದಿಯ ಗ್ಯಾರಂಟಿಯಾಗಿದೆ ಎಂದಿದ್ದಾರೆ.
ಯುಪಿಎಸ್ಸಿ 45 ಹುದ್ದೆಗಳಿಗೆ ಅದರಲ್ಲಿ 10 ಜಂಟಿ ನಿರ್ದೇಶಕರು, 35 ನಿರ್ದೇಶಕರು ಅಥವಾ ಉಪ ಕಾರ್ಯದರ್ಶಿ ಹುದ್ದೆಗಳಿಗೆ ಗುತ್ತಿಗೆ ಆಧಾರದ ಮೇಲೆ ಲ್ಯಾಟರಲ್ ಪ್ರವೇಶಾತಿ ನಡೆಸಲಾಗುವುದು ಎಂದು ಜಾಹೀರಾತು ನೀಡಿತ್ತು.
ಇದನ್ನೂ ಓದಿ: ಇಂಡಿಯಾ ಒಕ್ಕೂಟದ ಓಲೈಕೆ ರಾಜಕಾರಣದಿಂದ ಸಿಎಎ ಅಡಿಯಲ್ಲಿ ಪೌರತ್ವ ಕೋರುವವರಿಗೆ ಲಭಿಸದ ನ್ಯಾಯ: ಅಮಿತ್ ಶಾ