ಪುಣೆ (ಮಹಾರಾಷ್ಟ್ರ) : ಪುಣೆ ಪೊಲೀಸರು ಸೋಮವಾರ ಭರ್ಜರಿ ಕಾರ್ಯಾಚರಣೆ ನಡೆಸಿದ್ದಾರೆ. ಅಕ್ರಮವಾಗಿ ಅಫೀಮು ಸಾಗಿಸುತ್ತಿದ್ದಾಗ ದಾಳಿ ನಡೆಸಿ 4 ಕೋಟಿ ಮೌಲ್ಯದ ಡ್ರಗ್ಸ್ ವಶಕ್ಕೆ ಪಡೆದಿದ್ದಾರೆ. ಮೂವರನ್ನು ಬಂಧಿಸಿದ್ದಾರೆ. ಇವರು ನೀಡಿದ ಮಾಹಿತಿಯ ಮೇರೆಗೆ ಮತ್ತೊಂದೆಡೆ ದಾಳಿ ನಡೆಸಿದ್ದು, ಅಲ್ಲಿ 52 ಕೆಜಿ ತೂಕದ, 100 ಕೋಟಿ ರೂಪಾಯಿ ಮೌಲ್ಯದ ಡ್ರಗ್ಸ್ ಉಪ್ಪಿನ ಪಾಕೆಟ್ಗಳಲ್ಲಿ ಪತ್ತೆಯಾಗಿದೆ.
ಡ್ರಗ್ಸ್ ಮಾರಾಟ ಪ್ರಕರಣದಲ್ಲಿ ವೈಭವ್ ಅಲಿಯಾಸ್ ಪಿಂತ್ಯ ಭರತ್ ಮಾನೆ, ಅಜಯ್ ಅಮರನಾಥ್ ಕೊರ್ಸಿಯಾ ಮತ್ತು ಹೈದರ್ ಶೇಖ್ ಎಂಬುವರನ್ನು ಪೊಲೀಸರು ಸೋಮವಾರ ಬಂಧಿಸಿದ್ದಾರೆ. ವಿಚಾರಣೆಯ ವೇಳೆ ಅನುಮಾನ ಬಂದು, ಬಂಧಿತ ಹೈದರ್ ಶೇಖ್ನನ್ನು ಆತ ತಂಗಿದ್ದ ವಿಶ್ರಾಂತವಾಡಿಗೆ ಕರೆದೊಯ್ದು ತಪಾಸಣೆ ನಡೆಸಲಾಗಿದೆ.
ಈ ವೇಳೆ, ಆತನ ಮನೆಯಲ್ಲಿ 500 ಗ್ರಾಂ ಅತಿ ದುಬಾರಿಯಾದ ಮೆಫಿಡ್ರೋನ್ (ಎಂಡಿ) ಪತ್ತೆಯಾಗಿದೆ. ಮತ್ತಷ್ಟು ಶೋಧ ನಡೆಸಿದಾಗ, ಆತನ ಗೋದಾಮಿನಲ್ಲಿ ಇಟ್ಟಿದ್ದ ಉಪ್ಪಿನ ಪಾಕೆಟ್ಗಳಲ್ಲಿ 52 ಕೆಜಿಯಷ್ಟು ಸಂಗ್ರಹಿಸಿಟ್ಟಿದ್ದ ಡ್ರಗ್ಸ್ ಅನ್ನು ಪೊಲೀಸರು ಹೆಕ್ಕಿ ತೆಗೆದಿದ್ದಾರೆ. ಇದು ಸುಮಾರು 100 ಕೋಟಿ ರೂಪಾಯಿ ಬೆಲೆ ಬಾಳುವ ಅಫೀಮಾಗಿದೆ ಎಂದು ಅಂದಾಜಿಸಲಾಗಿದೆ. ಅಲ್ಲದೇ, ಸಿಕ್ಕಿರುವ ಡ್ರಗ್ಸ್ ಮೆಫಿಡ್ರೋನ್ ಅಥವಾ ಬೇರೆ ವಸ್ತುವೇ ಎಂಬುದರ ಬಗ್ಗೆಯೂ ಅಪರಾಧ ವಿಭಾಗದ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.
ವಿದೇಶಿಗನ ಕೈವಾಡ: ಇನ್ನು ವಿಚಾರಣೆಯ ವೇಳೆ ಆರೋಪಿ ಹೈದರ್ ಡ್ರಗ್ಸ್ನ ಮೂಲದ ಬಗ್ಗೆ ಬಾಯ್ಬಿಟ್ಟಿದ್ದು, ಇದನ್ನು ವಿದೇಶಿ ವ್ಯಕ್ತಿಯೊಬ್ಬ ಮಾರಾಟ ಮಾಡಲು ನೀಡಿದ್ದಾನೆ ಎಂದಿದ್ದಾನೆ. ಸ್ಥಳದಲ್ಲಿ 52 ಕೆಜಿ ಮೆಫಿಡ್ರೋನ್ ಮಾದಕ ದ್ರವ್ಯ, ಸೆಂಕ್ ಬ್ಯಾಂಗ್, ಎರಡು ಮೊಬೈಲ್ ಅನ್ನು ಜಪ್ತಿ ಮಾಡಲಾಗಿದೆ. ಪ್ರಕರಣದಲ್ಲಿ ವಿದೇಶಿ ಮೂಲವನ್ನು ಪತ್ತೆಗಾಗಿ ಅಪರಾಧ ವಿಭಾಗದ ತಂಡವನ್ನು ರಚಿಸಿ, ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
₹36 ಕೋಟಿ ಮೌಲ್ಯದ ಡ್ರಗ್ಸ್ ನಾಶ: ಕರ್ನಾಟಕದ ದಾಬಸ್ಪೇಟೆಯಲ್ಲಿ 36 ಕೋಟಿ ಮೌಲ್ಯದ 3885 ಕೆಜಿ ತೂಕದ ಮಾದಕ ವಸ್ತುವನ್ನು ಬೆಂಕಿ ಹಚ್ಚಿ ಸುಡಲಾಯಿತು. ಗೃಹ ಸಚಿವ ಡಾ. ಜಿ.ಪರಮೇಶ್ವರ್ ಅವರು ಮಾದಕ ವಸ್ತುಗಳನ್ನು ಬೆಂಕಿಗೆ ಹಾಕಿದ್ದರು. ಈ ಡ್ರಗ್ಸ್ ಅನ್ನು ಪೊಲೀಸರು 6 ಜಿಲ್ಲೆಗಳಲ್ಲಿ ಕಾರ್ಯಾಚರಣೆ ನಡೆಸಿ ವಿವಿಧೆಡೆ ಜಪ್ತಿ ಮಾಡಿದ್ದರು.
ಮಾದಕ ವಸ್ತುಗಳ ಮಾರಾಟ ಮತ್ತು ದುರ್ಬಳಕೆಯನ್ನು ಹತೋಟಿಯಲ್ಲಿಡಲು ಪೊಲೀಸ್ ಇಲಾಖೆಯಿಂದ ಎಲ್ಲ ರೀತಿಯ ಕಾನೂನು ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಕಳೆದ 3 ವರ್ಷಗಳಿಗೆ ಹೋಲಿಸಿದರೆ 2023ರಲ್ಲಿ NDPS ಕಾಯ್ದೆಯಡಿ ಅತ್ಯಂತ ಹೆಚ್ಚು ಪ್ರಕರಣಗಳನ್ನು ದಾಖಲಿಸಲಾಗಿದೆ. ಡ್ರಗ್ಸ್ ಪ್ರಕರಣಗಳಲ್ಲಿ ಒಟ್ಟು 7,403 ಜನ ಆರೋಪಿಗಳನ್ನು ಹಾಗೂ 106 ವಿದೇಶಿಯರನ್ನು ಬಂಧಿಸಿ ಒಟ್ಟು ರೂ.128.98 ಕೋಟಿ ಮೌಲ್ಯದ ಡ್ರಗ್ಸ್ ವಶಪಡಿಸಿಕೊಳ್ಳಲಾಗಿದೆ ಎಂದು ಗೃಹಸಚಿವ ಪರಮೇಶ್ವರ್ ತಿಳಿಸಿದರು.
ಇದನ್ನೂ ಓದಿ: ಅಸ್ಸೋಂನಲ್ಲಿ ₹ 100 ಕೋಟಿಗೂ ಹೆಚ್ಚು ಅಧಿಕ ಮೌಲ್ಯದ ಡ್ರಗ್ಸ್ ಜಪ್ತಿ