ನವದೆಹಲಿ/ಲಡಾಖ್: ಇಂದು ಕಾರ್ಗಿಲ್ ವಿಜಯ್ ದಿವಸ್. 25 ವರ್ಷಗಳ ಹಿಂದೆ ಶತ್ರುರಾಷ್ಟ್ರ ಪಾಕಿಸ್ತಾನ ಸೇನೆಯನ್ನು ಸದೆಬಡಿದು ಭಾರತದ ವಿಜಯ ಪತಾಕೆ ಹಾರಿಸಿದ ಹೆಮ್ಮೆಯ ಯೋಧರನ್ನು ನೆನೆಯುವ ದಿನ. ಈ ನಿಮಿತ್ತ ಕೆಚ್ಚೆದೆಯ ಸೈನಿಕರನ್ನು ರಾಷ್ಟ್ರಕ್ಕೆ ಅರ್ಪಿಸಿದ ಕುಟುಂಬಸ್ಥರು ಮತ್ತು ದೇಶದ ರಾಷ್ಟ್ರಪತಿ, ಪ್ರಧಾನಿ ಸೇರಿದಂತೆ ಅನೇಕರು ಗಣ್ಯರು ಹುತಾತ್ಮ ಯೋಧರ ತ್ಯಾಗ, ಬಲಿದಾನವನ್ನು ಸ್ಮರಿಸಿ ಗೌರವ ಸಲ್ಲಿಸಿದ್ದಾರೆ.
ಐತಿಹಾಸಿಕ ವಿಜಯಕ್ಕೆ 25 ವರ್ಷ: 1999ರಲ್ಲಿ ಜಮ್ಮು ಮತ್ತು ಕಾಶ್ಮೀರದ ಕಾರ್ಗಿಲ್ನಲ್ಲಿ ಭಾರತ ಮತ್ತು ಪಾಕಿಸ್ತಾನದ ನಡುವೆ ಭೀಕರ ಯುದ್ಧ ನಡೆದಿತ್ತು. ಈ ಯುದ್ಧದಲ್ಲಿ ವೈರಿ ದೇಶವನ್ನು ಭಾರತ ಬಗ್ಗುಬಡಿದಿತ್ತು. ತಾಯ್ನಾಡಿಗಾಗಿ 'ಆಪರೇಷನ್ ವಿಜಯ್' ಹೆಸರಲ್ಲಿ ನಡೆದ ಹೋರಾಟದಲ್ಲಿ 500ಕ್ಕೂ ಹೆಚ್ಚು ಯೋಧರು ತಮ್ಮ ಪ್ರಾಣತ್ಯಾಗ ಮಾಡಿದ್ದರು. ಇದೇ ದಿನವನ್ನು 'ಕಾರ್ಗಿಲ್ ವಿಜಯ್ ದಿವಸ್' ಆಗಿ ದೇಶಾದ್ಯಂತ ಆಚರಿಸಲಾಗುತ್ತಿದೆ.
कारगिल विजय दिवस हमारे सशस्त्र बलों के अदम्य साहस और असाधारण पराक्रम के प्रति कृतज्ञ राष्ट्र द्वारा सम्मान प्रकट करने का अवसर है। वर्ष 1999 में कारगिल की चोटियों पर भारत माँ की रक्षा करते हुए सर्वोच्च बलिदान देने वाले प्रत्येक सेनानी को मैं श्रद्धांजलि देती हूं और उनकी पावन…
— President of India (@rashtrapatibhvn) July 26, 2024
ಸೈನಿಕರ ಶೌರ್ಯ ದೇಶಕ್ಕೆ ಸ್ಫೂರ್ತಿ - ರಾಷ್ಟ್ರಪತಿ ಮುರ್ಮು: ''ಕಾರ್ಗಿಲ್ ವಿಜಯ್ ದಿವಸ್ ನಮ್ಮ ಸಶಸ್ತ್ರ ಪಡೆಗಳ ಧೈರ್ಯ ಮತ್ತು ಅಸಾಧಾರಣ ಶೌರ್ಯಕ್ಕೆ ಗೌರವ ಸಲ್ಲಿಸಲು ಕೃತಜ್ಞ ರಾಷ್ಟ್ರಕ್ಕೊಂದು ಸಂದರ್ಭ'' ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ತಿಳಿಸಿದ್ದಾರೆ. ''1999ರಲ್ಲಿ ಕಾರ್ಗಿಲ್ ಶಿಖರಗಳಲ್ಲಿ ಭಾರತಮಾತೆಯನ್ನು ರಕ್ಷಿಸುವಾಗ ಸರ್ವೋಚ್ಚ ತ್ಯಾಗ ಮಾಡಿದ ಪ್ರತಿಯೊಬ್ಬ ಸೈನಿಕನಿಗೂ ನಾನು ಗೌರವ ಸಲ್ಲಿಸುತ್ತೇನೆ. ಅವರ ತ್ಯಾಗ ಮತ್ತು ಶೌರ್ಯ ಎಲ್ಲ ದೇಶವಾಸಿಗಳಿಗೂ ಸ್ಫೂರ್ತಿ. ಜೈ ಹಿಂದ್ ಜೈ ಭಾರತ್'' ಎಂದು ಸಾಮಾಜಿಕ ಜಾಲತಾಣದ 'ಎಕ್ಸ್' ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.
''ಈ ದಿನದಂದು 1999ರ ಯುದ್ಧದಲ್ಲಿ ವೀರಾವೇಶದಿಂದ ಹೋರಾಡಿದ ವೀರ ಸೈನಿಕರ ಅದಮ್ಯ ಮನೋಭಾವ ಮತ್ತು ಧೈರ್ಯವನ್ನು ನಾವು ನೆನಪಿಸಿಕೊಳ್ಳುತ್ತೇವೆ. ಅವರ ಅಚಲ ಬದ್ಧತೆ, ಶೌರ್ಯ ಮತ್ತು ದೇಶಪ್ರೇಮವು ನಮ್ಮ ದೇಶವು ಸುರಕ್ಷಿತವಾಗಿ ಮತ್ತು ಸುಭದ್ರವಾಗಿ ಉಳಿಯುವಂತೆ ಮಾಡಿದೆ. ಯೋಧರ ಸೇವೆ ಮತ್ತು ತ್ಯಾಗವು ಪ್ರತಿಯೊಬ್ಬ ಭಾರತೀಯ ಮತ್ತು ನಮ್ಮ ಮುಂದಿನ ಪೀಳಿಗೆಗೆ ಸ್ಫೂರ್ತಿ ನೀಡುವುದನ್ನು ಮುಂದುವರಿಸುತ್ತದೆ'' ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಪೋಸ್ಟ್ ಮಾಡಿದ್ದಾರೆ.
Today, on 25th anniversary of #KargilVijayDiwas, we remember the indomitable spirit and courage of the brave soldiers who fought valiantly in 1999 war. Their unwavering commitment, valour and patriotism ensured that our country remained safe and secure. Their service and…
— Rajnath Singh (@rajnathsingh) July 26, 2024
ಚೀಫ್ ಆಫ್ ಡಿಫೆನ್ಸ್ ಸ್ಟಾಫ್ ಜನರಲ್ ಅನಿಲ್ ಚೌಹಾಣ್ ಮತ್ತು ಸಶಸ್ತ್ರ ಪಡೆಗಳು ಕೂಡ ಕಾರ್ಗಿಲ್ ಯುದ್ಧದ ಕೆಚ್ಚೆದೆಯ ಯೋಧರ ಅತ್ಯುನ್ನತ ತ್ಯಾಗವನ್ನು ಸ್ಮರಿಸಿದ್ದಾರೆ. ''ನಾವು ಕಾರ್ಗಿಲ್ ವೀರರಿಂದ ಸ್ಫೂರ್ತಿ ಪಡೆಯುತ್ತೇವೆ. ನಮ್ಮ ರಾಷ್ಟ್ರವನ್ನು ಧೈರ್ಯ, ಗೌರವ ಮತ್ತು ತ್ಯಾಗದಿಂದ ರಕ್ಷಿಸುವ ಮೂಲಕ ನಾವು ಅವರ ಪರಂಪರೆಯನ್ನು ಗೌರವಿಸುವುದನ್ನು ಮುಂದುವರಿಸುತ್ತೇವೆ'' ಎಂದು ಚೀಫ್ ಆಫ್ ಡಿಫೆನ್ಸ್ ಸ್ಟಾಫ್ ಪ್ರಧಾನ ಕಚೇರಿ ತಿಳಿಸಿದೆ.
ದ್ರಾಸ್ ಸ್ಮಾರಕದಲ್ಲಿ ಯೋಧರ ಕುಟುಂಬಸ್ಥರು: ಕಾರ್ಗಿಲ್ ವಿಜಯ್ ದಿವಸ್ ನಿಮಿತ್ತ ಕಣಿವೆ ನಾಡು ಲಡಾಖ್ನ ದ್ರಾಸ್‌ನಲ್ಲಿರುವ ಕಾರ್ಗಿಲ್ ಯುದ್ಧ ಸ್ಮಾರಕ ಸ್ಥಳ ಸೇರಿದಂತೆ ದೇಶಾದ್ಯಂತ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ದ್ರಾಸ್ ಸ್ಮಾರಕದಲ್ಲಿ ಸೈನಿಕರ ಕುಟುಂಬಸ್ಥರು, ಕಾರ್ಗಿಲ್ ಯುದ್ಧದಲ್ಲಿ ಹುತಾತ್ಮರಾದ ಯೋಧರಿಗೆ ಶ್ರದ್ಧಾಂಜಲಿ ಸಲ್ಲಿಸಿದರು. ತಮ್ಮ ಅಪ್ರತಿಮ ಮನೆ ಸದಸ್ಯರ ಶೌರ್ಯ ಮತ್ತು ಸಮರ್ಪಣೆಯನ್ನೂ ಸ್ಮರಿಸಿದರು.
ಪರಮವೀರ ಚಕ್ರ ಪ್ರಶಸ್ತಿ ಪುರಸ್ಕೃತ, ನಿವೃತ್ತ ಸುಬೇದಾರ್ ಮೇಜರ್ (ಗೌರವ ಕ್ಯಾಪ್ಟನ್) ಯೋಗೇಂದ್ರ ಸಿಂಗ್ ಯಾದವ್ ಮಾತನಾಡಿ, ''ಇಂದು ದೇಶದ ಜನತೆ ದೇಶಕ್ಕಾಗಿ ಪ್ರಾಣ ತೆತ್ತ ಸೈನಿಕರ ಬಗ್ಗೆ ಹೆಮ್ಮೆಪಡುತ್ತಿದ್ದಾರೆ. ನಾವು ದ್ರಾಸ್‌ನಲ್ಲಿರುವ ಸ್ಮಾರಕದಲ್ಲಿ ಆ ವೀರ ಯೋಧರಿಗೆ ನಮನ ಸಲ್ಲಿಸಲು ಸೇರಿದ್ದೇವೆ'' ಎಂದು ಹೇಳಿದರು.
#WATCH | Ladakh: Visuals from Kargil War Memorial in Drass.
— ANI (@ANI) July 26, 2024
Prime Minister Narendra Modi will visit here today to pay tribute to the heroes of the Kargil War on the occasion of 25th #KargilVijayDiwas2024. pic.twitter.com/mF589y4nAh
1997ರಲ್ಲಿ ಭಾರತೀಯ ಸೇನೆಯಲ್ಲಿದ್ದ ಸುಬೇದಾರ್ ಮೇಜರ್ ಆರ್.ಟಿ.ರೈಸ್ ಅಹಮದ್ ಮಾತನಾಡಿ, ''25ನೇ ಕಾರ್ಗಿಲ್ ವಿಜಯ್ ದಿವಸ್ ಸಂದರ್ಭದಲ್ಲಿ ನಾವು ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ ನಮ್ಮ ಎಲ್ಲ ಸೈನಿಕರನ್ನು ಸ್ಮರಿಸುತ್ತೇವೆ. ಕಳೆದ ಮೂರು ವರ್ಷಗಳಿಂದ ನಾವು ನಮ್ಮ ವೀರ ಸೈನಿಕರಿಗೆ ಗೌರವ ಸಲ್ಲಿಸಲು ಇಲ್ಲಿಗೆ ಬರುತ್ತಿದ್ದೇವೆ. ನಮ್ಮ ಸೇನೆಯು ಹೆಚ್ಚು ಸದೃಢ ಮತ್ತು ಬಲಿಷ್ಠವಾಗಿದೆ. ಇಂದು ಪ್ರಧಾನಿ ಮೋದಿ ಇಲ್ಲಿಗೆ ಭೇಟಿ ನೀಡುತ್ತಿರುವುದು ಸಶಸ್ತ್ರ ಪಡೆಗಳ ನೈತಿಕ ಸ್ಥೈರ್ಯವನ್ನು ಹೆಚ್ಚಿಸಲಿದೆ'' ಎಂದು ತಿಳಿಸಿದರು.
ಭಾರತೀಯ ನೌಕಾಪಡೆಯ ಹಿರಿಯ ಅಧಿಕಾರಿ ಅನಂತ್ ಜೋಶಿ ಮಾತನಾಡಿ, ''ಕಾರ್ಗಿಲ್ ವಿಜಯ್ ದಿವಸ್‌ನ 25ನೇ ವಾರ್ಷಿಕೋತ್ಸವ ನಮಗೆ ಅತ್ಯಂತ ಮಹತ್ವದ್ದಾಗಿದೆ. ಈ ಯುದ್ಧದಲ್ಲಿ 527 ಜನರು ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ್ದರು. ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದವರು ಎಲ್ಲ ಯುವಕರೇ. ಇಂದಿನ ಪೀಳಿಗೆಯವರು ಸಹ ಇದನ್ನೆಲ್ಲ ತಿಳಿದುಕೊಂಡು ಕಲಿಯಬೇಕು'' ಎಂದು ಸಲಹೆ ನೀಡಿದರು.
ಇದನ್ನೂ ಓದಿ: ವಿಜಯ್ ದಿವಸ್ ಸ್ಮರಣಾರ್ಥ ಪ್ರಧಾನಿ ಮೋದಿ ಕಾರ್ಗಿಲ್ಗೆ ಭೇಟಿ: ಕಾಶ್ಮೀರದಲ್ಲಿ ಭಾರಿ ಬಿಗಿ ಭದ್ರತೆ