ಪಾಟ್ನಾ(ಬಿಹಾರ್): ಹಲವು ಚುನಾವಣೆಗಳ ಗೆಲುವಿಗೆ ತಂತ್ರಗಾರಿಕೆ ಹೆಣೆದು 'ಚುನಾವಣಾ ಪರಿಣತ' ಎಂದೇ ಗುರುತಿಸಿಕೊಂಡಿದ್ದ ಪ್ರಶಾಂತ್ ಕಿಶೋರ್ ಅವರ ಜನ ಸುರಾಜ್ ಪಕ್ಷದಲ್ಲಿ ಮುಸುಕಿನ ಗುದ್ದಾಟ ಶುರುವಾಗಿದೆ. ಪಕ್ಷದ ಇಬ್ಬರು ಪ್ರಮುಖ ನಾಯಕರು ಪ್ರಮುಖ ಹುದ್ದೆಗಳಿಂದ ಕೆಳಗಿಳಿದಿದ್ದಾರೆ.
ಮಾಜಿ ಕೇಂದ್ರ ಸಚಿವ ದೇವೇಂದ್ರ ಪ್ರಸಾದ್ ಯಾದವ್ ಮತ್ತು ಮಾಜಿ ಸಂಸದ ಎಂ.ಹಸನ್ ಅವರು 125 ಸದಸ್ಯರ ರಾಜ್ಯ ಕೋರ್ ಕಮಿಟಿಯಿಂದ ಹೊರ ಬಂದಿದ್ದಾರೆ. ಅನಿವಾರ್ಯ ಕಾರಣಗಳಿಂದ ಹುದ್ದೆ ತೊರೆಯುತ್ತಿರುವುದಾಗಿ ಇಬ್ಬರೂ ತಿಳಿಸಿದ್ದು, ವಿವರವಾದ ಮಾಹಿತಿ ನೀಡಲು ನಿರಾಕರಿಸಿದ್ದಾರೆ.
ದೇವೇಂದ್ರ ಪ್ರಸಾದ್ ಯಾದವ್ ಪ್ರತಿಕ್ರಿಯಿಸಿ, ನಾನು ಸ್ವಯಂ ಇಚ್ಛೆಯಿಂದ ರಾಜ್ಯ ಕೋರ್ ಕಮಿಟಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸುತ್ತಿದ್ದೇನೆ ಎಂದು ತಿಳಿಸಿದ್ದಾರೆ. ಹಸನ್ ಕೂಡ ಇದೇ ಕಾರಣ ನೀಡಿದ್ದು, ನಮ್ಮ ರಾಜೀನಾಮೆ ಪತ್ರವನ್ನು ಸ್ವೀಕರಿಸಬೇಕು ಎಂದಿದ್ದಾರೆ. ಅಲ್ಲದೇ, ತಕ್ಷಣಕ್ಕೆ ಪಕ್ಷ ತೊರೆಯುವ ಯಾವುದೇ ಯೋಚನೆಯಿಲ್ಲ ಎಂದೂ ಹೇಳಿದ್ದಾರೆ.
ಹಸನ್ ಮತ್ತು ಯಾದವ್ ಅವರ ಪಕ್ಷ ಸೇರ್ಪಡೆಯಿಂದ ಪ್ರಶಾಂತ್ ಕಿಶೋರ್ ಮುಸ್ಲಿಂ ಮತ್ತು ಯಾದವ್ ಮತಗಳನ್ನು ಪಡೆಯುವ ಗುರಿ ಹೊಂದಿದ್ದರು. ಆದರೆ, ಇದೀಗ ಅವರ ರಾಜೀನಾಮೆ ಪಕ್ಷಕ್ಕೆ ಹಿನ್ನಡೆಯಾಗಲಿದೆ ಎಂಬ ಮಾತುಗಳು ಕೇಳಿ ಬಂದಿವೆ.
ಇತ್ತೀಚಿಗೆ ನಡೆದ ಬಿಹಾರ ಉಪ ಚುನಾವಣೆಯಲ್ಲೂ ನಾಲ್ಕು ಕ್ಷೇತ್ರಗಳಲ್ಲಿ ಸೋಲು ಕಾಣುವ ಮೂಲಕ ಪ್ರಶಾಂತ್ ಕಿಶೋರ್ ಪಕ್ಷ ತೀವ್ರ ಹಿನ್ನಡೆ ಕಂಡಿತ್ತು. ರಾಮಗಢ, ತರಾರಿ ಮತ್ತು ಬೆಲಗಂಜ್ ಕ್ಷೇತ್ರದಲ್ಲಿ ಪಕ್ಷ ಹೀನಾಯ ಸೋಲುಂಡಿತ್ತು. ಇಮ್ಮಗಂಜ್ನಲ್ಲಿ ಪಕ್ಷ ಠೇವಣಿ ಉಳಿಸಿಕೊಂಡಿತ್ತು.(ಐಎಎನ್ಎಸ್)
ಇದನ್ನೂ ಓದಿ: ಲೋಕಸಭೆಯಲ್ಲಿ 'ಒಂದು ದೇಶ, ಒಂದು ಚುನಾವಣೆ' ವಿಧೇಯಕ ಮಂಡಿಸಿದ ಕೇಂದ್ರ ಸರ್ಕಾರ