ಲಖನೌ (ಉತ್ತರ ಪ್ರದೇಶ): ಉತ್ತರ ಪ್ರದೇಶದ ವಾರಣಾಸಿಯ ಪ್ರಸಿದ್ಧ ಕಾಶಿ ವಿಶ್ವನಾಥ ದೇವಸ್ಥಾನದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪೊಲೀಸರಿಗೆ ಬಿಜೆಪಿ ಸರ್ಕಾರ ಹೊಸ ಸಮವಸ್ತ್ರ ಪ್ರಕಟಿಸಿದೆ. ಇನ್ಮುಂದೆ ಖಾಕಿ ಸಮವಸ್ತ್ರ ಬದಲು ಸಾಂಪ್ರದಾಯಿಕ ಉಡುಗೆಯಲ್ಲೇ ಪೊಲೀಸರು ಕರ್ತವ್ಯ ನಿರ್ವಹಿಸಲು ಸೂಚಿಸಲಾಗಿದೆ. ಈ ಸಂಬಂಧ ವಾರಣಾಸಿ ಪೊಲೀಸ್ ಆಯುಕ್ತ ಮೋಹಿತ್ ಅಗರ್ವಾಲ್ ಆದೇಶ ಹೊರಡಿಸಿದ್ದಾರೆ.
ಈ ಆದೇಶದ ಬೆನ್ನಲ್ಲೇ ದೇವಸ್ಥಾನದ ಆವರಣದಲ್ಲಿ ಕರ್ತವ್ಯ ನಿರತ ಪೊಲೀಸರು ಧೋತಿ-ಕುರ್ತಾ ಮತ್ತು ಕೊರಳಲ್ಲಿ ರುದ್ರಾಕ್ಷಿ ಮಣಿಗಳನ್ನು ಹಾಕಿಕೊಂಡು ಅರ್ಚಕರ ವೇಷಭೂಷಣದಲ್ಲಿ ಕಾಣಿಸಿಕೊಂಡಿದ್ದಾರೆ. ಈ ನಿರ್ಧಾರ ಚರ್ಚೆಗೆ ಕಾರಣವಾಗಿದೆ. ಮಾಜಿ ಮುಖ್ಯಮಂತ್ರಿ ಹಾಗೂ ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಪೊಲೀಸರಿಗೆ ಅರ್ಚಕರಂತೆ ವಸ್ತ್ರ ಸಂಹಿತೆ ಇರಬೇಕು ಎಂದು ಯಾವ ಪೊಲೀಸ್ ಕೈಪಿಡಿ ಹೇಳುತ್ತದೆ?. ಈ ಆದೇಶ ನೀಡಿದವರನ್ನು ಕೂಡಲೇ ಅಮಾನತು ಮಾಡಬೇಕೆಂದು ಅಖಿಲೇಶ್ ಯಾದವ್ ಒತ್ತಾಯಿಸಿದ್ದಾರೆ. ಅಲ್ಲದೇ, ನಾಳೆ ಯಾರಾದರೂ ಇದರ ಲಾಭ ಪಡೆದು ವಂಚನೆ ಮಾಡಿದರೆ ಹೇಗೆ?, ಜನರನ್ನು ಶೋಷಣೆ ಮಾಡಿದರೆ ಹೇಗೆ?, ಉತ್ತರ ಪ್ರದೇಶ ಸರ್ಕಾರ ಏನು ಉತ್ತರ ನೀಡುತ್ತದೆ? ಎಂದೂ ಅವರು ಪ್ರಶ್ನಿಸಿದ್ದಾರೆ. ಅಲ್ಲದೇ, ಸಾಮಾಜಿಕ ಜಾಲತಾಣಗಳಲ್ಲಿ ಈ ಬಗ್ಗೆ ಚರ್ಚೆ ಶುರುವಾಗಿದೆ. ಕೆಲ ನೆಟ್ಟಿಗರು ಯೋಗಿ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.
ಮತ್ತೊಂದೆಡೆ, ಆಯುಕ್ತ ಮೋಹಿತ್ ಅಗರ್ವಾಲ್ ಈ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದಾರೆ. ಇತರ ಸ್ಥಳಗಳಿಗೆ ಹೋಲಿಸಿದರೆ ದೇಗುಲಗಳಲ್ಲಿನ ಕರ್ತವ್ಯಗಳು ವಿಭಿನ್ನ. ಇಲ್ಲಿ ಜನಸಂದಣಿಯಿಂದ ಕಾನೂನು ಮತ್ತು ಸುವ್ಯವಸ್ಥೆಗೆ ಧಕ್ಕೆಯಾಗುವುದಿಲ್ಲ. ಆದರೆ, ಕೆಲವೊಮ್ಮೆ ಭಕ್ತರಿಗೆ ದರ್ಶನ ನೀಡಲು ಪೊಲೀಸರು ನಡೆದುಕೊಳ್ಳುವ ರೀತಿ ಜನರಿಗೆ ನೋವು ಉಂಟು ಮಾಡುತ್ತದೆ. ಅರ್ಚಕರಂತೆ ಕಂಡರೆ ಭಕ್ತರಿಗೆ ಧನಾತ್ಮಕವಾಗಿ ಯೋಚಿಸುವ ಅವಕಾಶ ದೊರೆಯುತ್ತದೆ. ಹೀಗಾಗಿ ಡ್ರೆಸ್ ಕೋಡ್ ಬದಲಾಯಿಸಿದ್ದೇವೆ ಎಂದು ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.
ಇದನ್ನೂ ಓದಿ: ಕಾಶಿ ವಿಶ್ವನಾಥ ಕಾರಿಡಾರ್‌ನಲ್ಲಿ ಪ್ರವಾಸೋದ್ಯಮ ಚೇತರಿಕೆ: ₹643 ಕೋಟಿ ಜಿಎಸ್ಟಿ ಕಲೆಕ್ಷನ್!