ಮಲಪ್ಪುರಂ(ಕೇರಳ): ಟಿಕೆಟ್ ಇಲ್ಲದೆ ಕಾಯ್ದಿರಿಸಿದ ಬೋಗಿಯಲ್ಲಿ ಪ್ರಯಾಣಿಸುತ್ತಿದ್ದನ್ನು ಪ್ರಶ್ನಿಸಿದ್ದಕ್ಕಾಗಿ, ಪ್ರಯಾಣಿಕನೊಬ್ಬ ಟ್ರಾವೆಲ್ ಟಿಕೆಟ್ ಎಕ್ಸಾಮಿನರ್ನ(ಟಿಟಿಇ) ಮೂಗಿನ ಮೇಲೆ ಹಲ್ಲೆ ಮಾಡಿರುವ ಘಟನೆ ಮಲಪ್ಪುರಂನಲ್ಲಿ ನಡೆದಿದೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ. ರಾಜಸ್ಥಾನ ಮೂಲದ ಟಿಟಿಇ ವಿಕ್ರಮ್ ಕುಮಾರ್ ಮೀನಾ ಅವರು ಭಾನುವಾರ ರಾತ್ರಿ ತಿರುವನಂತಪುರಂ-ಮಂಗಳೂರು ಮಾವೇಲಿ ಎಕ್ಸ್‌ಪ್ರೆಸ್ ರೈಲಿನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾಗ ಪ್ರಯಾಣಿಕನಿಂದ ಹಲ್ಲೆಗೊಳಗಾಗಿದ್ದಾರೆ.
ಆರೋಪಿಯು ಕಾಯ್ದಿರಿಸಿದ ಟಿಕೆಟ್ ಇಲ್ಲದೆ ಪ್ರಯಾಣಿಸುತ್ತಿದ್ದನು. ಟಿಕೆಟ್ ಇಲ್ಲದೆ ಪ್ರಯಾಣಿಸುವುದನ್ನು ಪ್ರಶ್ನಿಸಿದ್ದಕ್ಕಾಗಿ ಮತ್ತು ಸಾಮಾನ್ಯ ಕಂಪಾರ್ಟ್‌ಮೆಂಟ್‌ಗೆ ತೆರಳುವಂತೆ ಕೇಳಿದ್ದಕ್ಕಾಗಿ ಟಿಟಿಇ ಮೇಲೆ ಹಲ್ಲೆ ನಡೆಸಿದ್ದಾನೆ. ಟಿಟಿಇ ಇಲ್ಲಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಪ್ರಯಾಣಿಕನ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾರೆ. ನಂತರ ಕೂಡಲೇ ಆರೋಪಿಯನ್ನು ವಶಕ್ಕೆ ಪಡೆಯಲಾಗಿದೆ. ಆರೋಪಿಯನ್ನು ಕನ್ಯಾಕುಮಾರಿ ಮೂಲದ ಸ್ಟಾಲಿನ್ ಬೋಸ್ ಎಂದು ಗುರುತಿಸಲಾಗಿದೆ. ಈತನ ವಿರುದ್ಧ ಐಪಿಸಿಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಕೋಝಿಕ್ಕೋಡ್ ರೈಲ್ವೆ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ರಾಜ್ಯದ ತ್ರಿಶೂರ್ ಜಿಲ್ಲೆಯಲ್ಲಿ ಕುಡಿದ ಮತ್ತಿನಲ್ಲಿ ಪ್ರಯಾಣಿಕನೊಬ್ಬ ಟಿಟಿಇಯನ್ನು ಚಲಿಸುತ್ತಿದ್ದ ರೈಲಿನಿಂದ ಹೊರಗೆ ತಳ್ಳಿದ ಘಟನೆ ಕಳೆದ ವಾರವಷ್ಟೇ ನಡೆದಿತ್ತು.