ಅದಿಲಾಬಾದ್ (ತೆಲಂಗಾಣ): ಪಪ್ಪಾಯಿ ಮರದಲ್ಲಿ ಸಾಮಾನ್ಯವಾಗಿ ಒಂದೇ ಕೊಂಬೆ (ಟಿಸಿಲು) ಇರುತ್ತದೆ. ಈ ಮರದ ಕೊಂಬೆಯ ಸುತ್ತಲೂ ರಾಶಿ ರಾಶಿ ಹಣ್ಣುಗಳನ್ನು ಬಿಟ್ಟಿರುತ್ತದೆ. ಇದನ್ನು ಎಲ್ಲರೂ ಗಮನಿಸಿಯೂ ಇರುತ್ತಾರೆ. ಆದರೆ, ತೆಲಂಗಾಣದ ಆದಿಲಾಬಾದ್ ಜಿಲ್ಲೆಯ ಬಜರಹತ್ನೂರ್ ಮಂಡಲದ ನವನಂತಪುರ ಎಂಬ ಗ್ರಾಮದಲ್ಲಿರುವ ರೈತರೊಬ್ಬರ ಮನೆಯ ಮುಂದೆ ಪಪ್ಪಾಯಿ ಮರವೊಂದು 13 ಕೊಂಬೆಗಳನ್ನು ಬಿಟ್ಟಿದೆ. ಎಲ್ಲಾ ಕೊಂಬೆಗಳು ಪಪ್ಪಾಯಿಗಳ ಗೊಂಚಲುಗಳಿಂದ ಆವೃತಗೊಂಡಿವೆ. ವೈವಿಧ್ಯಮಯ ಮತ್ತು ಅಪರೂಪ ಈ ಸಸ್ಯವರ್ಗವನ್ನು ಕಂಡು ಜನ ಅಚ್ಚರಿ ವ್ಯಕ್ತಪಡಿಸುತ್ತಿದ್ದಾರೆ. ಸ್ವತಃ ಆ ರೈತ ಕೂಡ ಅಚ್ಚರಿ ಹೊರಹಾಕಿದ್ದಾರೆ.
''ಎರಡು ವರ್ಷಗಳ ಹಿಂದೆ ಮಹಾರಾಷ್ಟ್ರದಿಂದ ಪಪ್ಪಾಯಿ ಕಾಳನ್ನು ತಂದು ಬಿತ್ತನೆ ಮಾಡಲಾಗಿತ್ತು. ಬೆಳವಣಿಗೆಗೆ ಯಾವುದೇ ಔಷಧಿಯನ್ನು ಬಳಸಿಲ್ಲ. ಆದರೂ ಇಷ್ಟು ಸೊಗಸಾಗಿ ಮತ್ತು ವೈವಿಧ್ಯಮಯವಾಗಿ ಬೆಳೆದಿದೆ. 13 ಕೊಂಬೆಗಳನ್ನು ಬಿಟ್ಟಿದ್ದು ಸದ್ಯ ಈ ಮರದಲ್ಲಿ ಒಟ್ಟು 150ಕ್ಕೂ ಹೆಚ್ಚು ಹಣ್ಣುಗಳಿವೆ'' ಎನ್ನುತ್ತಾರೆ ರೈತ ಸಾಂಬಾಜಿ.
ಈ ಕುರಿತು ಜಿಲ್ಲಾ ತೋಟಗಾರಿಕೆ ಅಧಿಕಾರಿ ಶ್ರೀನಿವಾಸ ರೆಡ್ಡಿ ಅವರನ್ನು ಸಂಪರ್ಕಿಸಿದಾಗ, ''ಪಪ್ಪಾಯಿ ಮರದಲ್ಲಿ ಇಷ್ಟೊಂದು ಕೊಂಬೆ ಇರುವುದು ಅಪರೂಪ. ಫಲವತ್ತಾದ ಮಣ್ಣು ಹಾಗೂ ಸಮೀಪದ ಇತರ ಮರಗಳ ಎಲೆಗಳು ಮಣ್ಣಿನಲ್ಲಿ ಕೊಳೆತು ಗೊಬ್ಬರವಾಗಿ ಮಾರ್ಪಡುತ್ತಿರುವುದರಿಂದ ಮರ ಇಷ್ಟೊಂದು ಪ್ರಮಾಣದಲ್ಲಿ ಬೆಳೆದಿದೆ'' ಎಂದು ವಿವರಿಸಿದ್ದಾರೆ.
ಇದನ್ನೂ ಓದಿ: ನಿಮ್ಮ ದೇಹ ತೂಕ ಕಡಿಮೆ ಮಾಡಲು ಸಹಾಯ ಮಾಡುತ್ತವೆ ಈ ಸಿಹಿಯಾದ ಹಣ್ಣುಗಳು!
ಆಂಧ್ರ ಪ್ರದೇಶದ ಪಶ್ಚಿಮ ಗೋದಾವರಿ ಜಿಲ್ಲೆಯ ಪೆರವಲಿ ಮಂಡಲದ ಖಂಡವಳ್ಳಿ ಮತ್ತು ಅನ್ನಾವರಪ್ಪಡು ನಡುವಿನ ರಾಷ್ಟ್ರೀಯ ಹೆದ್ದಾರಿಯ ಪಕ್ಕದಲ್ಲಿ ಇಂತಹದ್ದೇ ಮರವೊಂದು ಬೆಳೆದು ಅಚ್ಚರಿಗೆ ಕಾರಣವಾಗಿತ್ತು. ಸುಮಾರು 15 ಟಿಸಿಲುಗಳನ್ನು ಬಿಟ್ಟಿದ್ದ ಆ ಮರದಲ್ಲಿ ಸಾಕಷ್ಟು ಪ್ರಮಾಣದಲ್ಲಿ ಹಣ್ಣುಗಳನ್ನು ಬಿಟ್ಟಿತ್ತು. ಗ್ರಾಮದ ರೈತರೊಬ್ಬರ ಕೃಷಿ ಭೂಮಿಯ ಗಡಿಯಲ್ಲಿ ಈ ಮರ ಬೆಳೆದಿತ್ತು. ಅದಕ್ಕೂ ಯಾವುದೇ ಗೊಬ್ಬರವನ್ನು ಹಾಕಿರಲಿಲ್ಲ ಎಂಬುದು ಅಚ್ಚರಿಯ ಸಂಗತಿ.
ಪಪ್ಪಾಯಿ ಮರವನ್ನು ಅಲ್ಪಾವಧಿಯ ಮರವೆಂದೂ ಸಹ ಕರೆಯುತ್ತಾರೆ. ಇದಕ್ಕೆ ಹಲವು ಹೆಸರು ಉಂಟು. ಕನ್ನಡ ಮತ್ತು ಇಂಗ್ಲೀಷ್ನಲ್ಲಿ ಪಪ್ಪಾಯಿ ಎಂದು ಕರೆದರೆ, ಹಿಂದಿ ಮತ್ತು ಬಂಗಾಳಿ ಭಾಷೆಯಲ್ಲಿ ಇದನ್ನು ಪಪ್ಪಾಯಿ ಅಥವಾ ಪಪಿಟಾ ಎಂದು ಕರೆಯುತ್ತಾರೆ. ತಮಿಳು ಮಾತನಾಡುವ ಜನರು ಇದನ್ನು ಪಪ್ಪಲಿ ಎಂದರೆ, ಮಲಯಾಳಂ ಭಾಷೆಯಲ್ಲಿ ಓಮಕ್ಕ ಎಂದು ಕರೆಯುತ್ತಾರೆ. ಬಹಳ ಬೇಗವಾಗಿ ಬೆಳೆಯುವ ಮರ ಇದಾಗಿದ್ದು, ತಳಿಗೆ ತಕ್ಕಂತೆ ಹಣ್ಣುಗಳನ್ನು ನೀಡುತ್ತದೆ. ಕೆಲವು ಮರಗಳು ಒಂದೇ ವರ್ಷದಲ್ಲಿ ಹಣ್ಣುಗಳನ್ನು ನೀಡುತ್ತದೆ.
ಆರೋಗ್ಯ ದೃಷ್ಟಿಯಿಂದಲೂ ಪಪ್ಪಾಯಿ ಒಳ್ಳೆಯದು ಎಂಬ ಮಾತು ಕೂಡ ಇದೆ. ಅನೇಕ ದಶಕಗಳಿಂದ ಪಪ್ಪಾಯಿಯನ್ನು ದೇಹದ ತೂಕ ಇಳಿಸಿಕೊಳ್ಳಲು ಬಳಸಲಾಗುತ್ತಿದೆ. ಈ ಹಣ್ಣು ಪಾಪೈನ್ ಅಂಶವನ್ನು ಒಳಗೊಂಡಿರುತ್ತದೆ. ಇದು ಚಯಾಪಚಯ ಕ್ರಿಯೆಯನ್ನು ಹೆಚ್ಚಿಸುತ್ತದೆ. ಜೊತೆಗೆ ದೇಹವು ಹೆಚ್ಚು ಕೊಬ್ಬನ್ನು ಹಿಡಿದಿಟ್ಟುಕೊಳ್ಳದಂತೆ ಮಾಡುತ್ತದೆ. ತೂಕ ಇಳಿಕೆಗೂ ಸಹಾಯ ಮಾಡುತ್ತದೆ. ಇದು ಉಬ್ಬರ ಮತ್ತು ಮಲಬದ್ಧತೆಯನ್ನು ಕಡಿಮೆ ಮಾಡಲು ಸಹಕಾರಿಯಾಗಿದೆ.
ಇದನ್ನೂ ಓದಿ: ಅಚ್ಚರಿ..! ಒಂದೇ ಪಪ್ಪಾಯಿ ಮರ, 15 ಟಿಸಿಲು, 200 ಹಣ್ಣುಗಳು!!