ಕೊಹಿಮಾ: ನಾಗಾಲ್ಯಾಂಡ್‌ನ ಚುಮೌಕೆಡಿಮಾ ಜಿಲ್ಲೆಯಲ್ಲಿ ಭಾರಿ ಮಳೆಯಿಂದಾಗಿ ಓರ್ವ ವ್ಯಕ್ತಿ ಸಾವನ್ನಪ್ಪಿದ್ದು, ಅನೇಕರು ನಾಪತ್ತೆಯಾಗಿದ್ದಾರೆ. ವರುಣಾರ್ಭಟದಿಂದ ಹಲವು ಮನೆಗಳು ಹಾನಿಗೊಂಡಿದ್ದು, ರಾಷ್ಟ್ರೀಯ ಹೆದ್ದಾರಿ-29 ಭಾಗಶಃ ಭಾಗ ಕೊಚ್ಚಿ ಹೋಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಜಿಲ್ಲೆಯ ಫೆರಿಮಾದಲ್ಲಿ ಮಂಗಳವಾರ ರಾತ್ರಿ ವಿಪರೀತ ಮಳೆ ಸುರಿದಿದ್ದು, ರಸ್ತೆ ಬದಿಯಲ್ಲಿದ್ದ ಮನೆಗಳು ಜಲಾವೃತಗೊಂಡಿವೆ. ಇಲ್ಲಿನ ಮನೆಗಳ ಸುತ್ತಲಿನ ಪ್ರದೇಶಗಳಲ್ಲಿ ಪ್ರವಾಹ ಪರಿಸ್ಥಿತಿ ಸೃಷ್ಟಿಯಾಗಿದೆ. ಚುಮೌಕೆಡಿಮಾ ಎಂಬಲ್ಲಿ ಜಿಲ್ಲಾಡಳಿತ ಪರಿಸ್ಥಿತಿಯ ಮೌಲ್ಯಮಾಪನ ಮಾಡುತ್ತಿದ್ದು, ನಾಪತ್ತೆಯಾದ ಜನರಿಗೆ ಶೋಧ ಕಾರ್ಯಾರಂಭಿಸಿದೆ.
ರಾಜ್ಯದಲ್ಲಿ ಮಳೆ ವಿಪತ್ತಿನ ರಕ್ಷಣಾ ಮತ್ತು ಪರಿಹಾರ ಕಾರ್ಯಗಳ ಕುರಿತು ಕೇಂದ್ರ ಸರ್ಕಾರದ ಜೊತೆ ಮಾತುಕತೆ ನಡೆಸಲಾಗಿದೆ ಎಂದು ಮುಖ್ಯಮಂತ್ರಿ ನಿಫಿಯು ರಿಯೊ ಸಾಮಾಜಿಕ ಜಾಲತಾಣ 'ಎಕ್ಸ್'ನಲ್ಲಿ ಮಾಹಿತಿ ನೀಡಿದ್ದಾರೆ.
ಈ ಕುರಿತು ಉಪಮುಖ್ಯಮಂತ್ರಿ ಟಿ.ಆರ್.ಜೆಲ್ಲಿಂಗ್ ಮಾತನಾಡಿ, "ಕಳೆದ ರಾತ್ರಿ ಫೆರಿಮಾ ಮತ್ತು ಪಗ್ಲಾ ಪಹಾರ್ ಬಳಿ ಮಳೆಯಿಂದ ಸಾಕಷ್ಟು ಹಾನಿಯಾಗಿದೆ. ಜನಜೀವನ ಮತ್ತು ಆಸ್ತಿಪಾಸ್ತಿ ನಷ್ಟವಾಗಿದೆ. ಮಳೆಯಿಂದಾಗಿ ನಾಪತ್ತೆಯಾದವರ ಹುಡುಕಾಟ ಮತ್ತು ರಕ್ಷಣಾ ಕಾರ್ಯಾಚರಣೆಗಳು ನಡೆಯುತ್ತಿವೆ ಅವರ ಸುರಕ್ಷತೆಗಾಗಿ ಪ್ರಾರ್ಥಿಸೋಣ" ಎಂದು ಮನವಿ ಮಾಡಿದ್ದಾರೆ.
ಇದನ್ನೂ ಓದಿ: ಉಗ್ರರ ಸದೆಬಡಿಯಲು ವಿಲೇಜ್ ಡಿಫೆನ್ಸ್ ಗಾರ್ಡ್ಸ್ ಕೈಗೆ ಸಿಕ್ತು ಅತ್ಯಾಧುನಿಕ ಆಯುಧ: ಏನದು ಗೊತ್ತಾ?