ನವದೆಹಲಿ: ಪರೀಕ್ಷೆಯಲ್ಲಿ ಅಕ್ರಮ ನಡೆದಿರುವ ಹಿನ್ನೆಲೆ ರದ್ದಾಗಿದ್ದ ಯುಜಿಸಿ- ನೆಟ್ ಜೂನ್ 2024 (ಯುಜಿಸಿ- ರಾಷ್ಟ್ರೀಯ ಅರ್ಹತಾ ಪರೀಕ್ಷೆ) ಪರೀಕ್ಷೆಗೆ ರಾಷ್ಟ್ರೀಯ ಪರೀಕ್ಷಾ ಮಂಡಳಿ (NTA) ಹೊಸ ದಿನಾಂಕವನ್ನು ಶುಕ್ರವಾರ ಘೋಷಣೆ ಮಾಡಿದೆ. ಹೊಸ ವೇಳಾಪಟ್ಟಿ ಪ್ರಕಾರ ಆಗಸ್ಟ್ 21 ರಿಂದ ಸೆಪ್ಟೆಂಬರ್ 4 ರ ನಡುವೆ ಪರೀಕ್ಷೆ ನಡೆಯಲಿದೆ.
ಉಳಿದಂತೆ ಜಾಯಿಂಟ್ ಸಿಎಸ್ಐಆರ್ ಯುಜಿಜಿಸಿ ನೆಟ್ (Joint CSIR UGC NET) ಹಾಗೂ ಎನ್ಸಿಇಟಿ (National Common Entrance Test) 2024 ಪರೀಕ್ಷೆಗಳಿಗೂ ಹೊಸ ದಿನಾಂಕಗಳು ಪ್ರಕಟವಾಗಿವೆ. ಜಾಯಿಂಟ್ ಸಿಎಸ್ಐಆರ್ ಯುಜಿಜಿಸಿ ನೆಟ್ ಪರೀಕ್ಷೆಯನ್ನು ಜುಲೈ 25ರಿಂದ ಜುಲೈ 27ರವರೆಗೆ ಹಾಗೂ ಎನ್ಸಿಇಟಿ ಪರೀಕ್ಷೆಯನ್ನು ಜುಲೈ 10 ರಂದು ನಡೆಸಲಾಗುವುದು.
NTA UGC NET and CSIR NET new exam dates announced (now in CBT mode). pic.twitter.com/OhocsG6vQJ
— Upsc Civil Services Exam (@UpscforAll) June 28, 2024
ಪರೀಕ್ಷೆಯಲ್ಲಿ ಅಕ್ರಮ ತಡೆಗಟ್ಟುವ ನಿಟ್ಟಿನಲ್ಲಿ ಮೂರೂ ಪರೀಕ್ಷೆಗಳು ಕಂಪ್ಯೂಟರ್ ಆಧಾರಿತವಾಗಿ ನಡೆಸಲು ತೀರ್ಮಾನಿಸಲಾಗಿದೆ. ಈ ಹಿಂದೆ ರದ್ದುಗೊಂಡು ಯುಜಿಸಿ ನೆಟ್ ಜೂನ್ 2024 ಪರೀಕ್ಷೆಯನ್ನು ಪೆನ್ ಪೇಪರ್ (ಓಎಮ್ಆರ್ ಶೀಟ್- ಆಫ್ಲೈನ್) ಮೋಡ್ನಲ್ಲಿ ನಡೆಸಲಾಗಿತ್ತು. ಈ ಬಾರಿ ಪರೀಕ್ಷೆ ಕಂಪ್ಯೂಟರ್ ಆಧಾರಿತ ಪರೀಕ್ಷೆ (CBT) ಮೋಡ್ನಲ್ಲಿ ನಡೆಯಲಿದೆ.
ಅಖಿಲ ಭಾರತ ಆಯುಷ್ ಸ್ನಾತಕೋತ್ತರ ಪ್ರವೇಶ ಪರೀಕ್ಷೆ (AIAPGET) 2024 ವೇಳಾಪಟ್ಟಿ ಪ್ರಕಾರ ಜುಲೈ 6 ರಂದು ನಡೆಯಲಿದೆ. ಹೆಚ್ಚಿನ ಮಾಹಿತಿಗಾಗಿ ಆಯಾ ಅಭ್ಯರ್ಥಿಗಳು NTAಯ ಅಧಿಕೃತ ವೆಬ್ಸೈಟ್ www.nta.ac ಗೆ ಭೇಟಿ ನೀಡಬಹುದು. ಎನ್‌ಟಿಎ ಪರೀಕ್ಷೆಗಳ ಕುರಿತು ಹೆಚ್ಚಿನ ಸ್ಪಷ್ಟೀಕರಣಕ್ಕಾಗಿ, ಅಭ್ಯರ್ಥಿಗಳು 011-40759000 ಅಥವಾ ಆಯಾ ಇ-ಮೇಲ್ ಮೂಲಕ ಸಂಪರ್ಕಿಸಬಹುದು.
ರಾಷ್ಟ್ರೀಯ ಪರೀಕ್ಷಾ ಸಂಸ್ಥೆ ಜೂನ್ 18ರಂದು ನಡೆಸಿದ ಯುಜಿಸಿ ನೆಟ್ 2024 ಪರೀಕ್ಷೆಯಲ್ಲಿ ಅಕ್ರಮ ನಡೆದಿದೆ ಎಂಬ ಕಾರಣಕ್ಕಾಗಿ ಪರೀಕ್ಷೆ ನಡೆದ ಮರುದಿನ ಅಂದರೆ ಜೂನ್ 19ರಂದು, ಕೇಂದ್ರ ಶಿಕ್ಷಣ ಸಚಿವಾಲಯ ಪರೀಕ್ಷೆಯನ್ನು ರದ್ದುಗೊಳಿಸಿತ್ತು. ನ್ಯಾಷನಲ್ ಸೈಬರ್ ಕ್ರೈಮ್ ಥ್ರೆಟ್ ಅನಾಲಿಟಿಕ್ಸ್ ಯುನಿಟ್ ಆಫ್ ಇಂಡಿಯಾ ಸೈಬರ್ ಕ್ರೈಮ್ ಕೋ ಆರ್ಡಿನೇಷನ್ ಸೆಂಟರ್ನಿಂದ ಯುಜಿಸಿಗೆ ಪರೀಕ್ಷೆಯಲ್ಲಿ ಅಕ್ರಮ ನಡೆದಿರುವ ಬಗ್ಗೆ ಮಾಹಿತಿ ಬಂದ ಹಿನ್ನೆಲೆ ಪರೀಕ್ಷೆಯನ್ನು ರದ್ದುಗೊಳಿಸಲಾಗಿತ್ತು. ಯುಜಿಸಿ ನೆಟ್ ಪರೀಕ್ಷೆಯನ್ನು ರದ್ದುಗೊಳಿಸಿದ್ದರೆ, ಉಳಿದ ಕೆಲವು ಪರೀಕ್ಷೆಗಳನ್ನು ಮುಂದೂಡಲಾಗಿತ್ತು.
ಜೂನ್ 18ರಂದು ದೇಶದ 317 ನಗರಗಳ 1205 ಪರೀಕ್ಷಾ ಕೇಂದ್ರಗಳಲ್ಲಿ ಯುಜಿಸಿ ನೆಟ್ ಪರೀಕ್ಷೆ ನಡೆಸಲಾಗಿತ್ತು. ಪರೀಕ್ಷೆಯಲ್ಲಿ 11 ಲಕ್ಷಕ್ಕೂ ಹೆಚ್ಚು ಅಭ್ಯರ್ಥಿಗಳು ಭಾಗವಹಿಸಿದ್ದರು. ಪರೀಕ್ಷೆ ರದ್ದತಿಗೆ ಶಿಕ್ಷಣ ಸಚಿವಾಲಯವು "ಪರೀಕ್ಷಾ ಪ್ರಕ್ರಿಯೆಯ ಅತ್ಯುನ್ನತ ಮಟ್ಟದ ಪಾರದರ್ಶಕತೆ ಮತ್ತು ಪಾವಿತ್ರ್ಯತೆಯನ್ನು ಖಚಿತಪಡಿಸಿಕೊಳ್ಳಲು, ಭಾರತ ಸರ್ಕಾರದ ಶಿಕ್ಷಣ ಸಚಿವಾಲಯವು UGC-NET ಜೂನ್ 2024 ರ ಪರೀಕ್ಷೆಯನ್ನು ರದ್ದುಗೊಳಿಸಲು ನಿರ್ಧರಿಸಿದೆ." ಎಂದು ನೋಟಿಸ್ನಲ್ಲಿ ಉಲ್ಲೇಖಿಸಿತ್ತು.
ಇದನ್ನೂ ಓದಿ: ಯುಜಿಸಿ ನೆಟ್ ಪ್ರಶ್ನೆ ಪತ್ರಿಕೆ ಸೋರಿಕೆ: ತನಿಖೆಗೆ ತೆರಳಿದ್ದ ಸಿಬಿಐ ತಂಡದ ಮೇಲೆಯೇ ಜನರ ದಾಳಿ - CBI team attacked in Bihar