ನವದೆಹಲಿ: ಮುಂದಿನ ವರ್ಷದ ಆರಂಭದಲ್ಲೇ ಎದುರಾಗಲಿರುವ ರಾಷ್ಟ್ರ ರಾಜಧಾನಿ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷ ಏಕಾಂಗಿಯಾಗಿ ಸ್ಪರ್ಧಿಸಲಿದೆ ಎಂದು ಎಎಪಿ ಸಂಚಾಲಕ ಅರವಿಂದ್ ಕೇಜ್ರಿವಾಲ್ ಸ್ಪಷ್ಟಪಡಿಸಿದ್ದಾರೆ. ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಳ್ಳುವ ಯಾವುದೇ ಪ್ರಸ್ತಾಪಗಳು ನಮ್ಮ ಮುಂದೆ ಇಲ್ಲ ಎಂದು ಅವರು ದೃಢಪಡಿಸಿದ್ದಾರೆ
ಕಾಂಗ್ರೆಸ್ ಮತ್ತು ಎಎಪಿ ನಡುವೆ ಮೈತ್ರಿ ಏರ್ಪಟ್ಟಿದೆ ಎಂಬ ಗಾಳಿ ಸುದ್ದಿಗೆ ಎಕ್ಸ್ ಮೂಲಕ ಅವರು ಸ್ಪಷ್ಟನೆ ನೀಡಿರುವ ಕೇಜ್ರಿವಾಲ್, ನಮ್ಮ ಪಕ್ಷ ಏಕಾಂಗಿಯಾಗಿ ಸ್ವಂತ ಬಲದ ಮೇಲೆ ಹೋರಾಟ ನಡೆಸಲಿದೆ. ಕಾಂಗ್ರೆಸ್ ಜೊತೆಗೆ ಯಾವುದೇ ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂದು ಅವರು ಹೇಳಿದ್ದಾರೆ.
ಕಳೆದ ಕೆಲವು ದಿನಗಳ ಹಿಂದೆ ದೆಹಲಿಯಲ್ಲಿ ಬಿಜೆಪಿ ವಿರುದ್ದ ಹೋರಾಡಲು ಕಾಂಗ್ರೆಸ್ ಮತ್ತು ಎಎಪಿ ಮೈತ್ರಿ ಮಾಡಿಕೊಳ್ಳಲಿವೆ. ಕಾಂಗ್ರೆಸ್- ಎಎಪಿ ಮೈತ್ರಿ ಒಪ್ಪಂದವೂ ಅಂತಿಮ ಹಂತದಲ್ಲಿ ಇದೆ ಎಂಬ ಸುದ್ದಿಗಳು ಹರದಾಡಿದ್ದವು. ಈ ಎಲ್ಲ ಊಹಾಪೋಹಗಳಿಗೆ ಅರವಿಂದ ಕೇಜ್ರಿವಾಲ್ ತೆರೆ ಎಳೆದಿದ್ದಾರೆ.
ಮೈತ್ರಿ ನಿರಾಕರಣೆ ಮೊದಲೇನೂ ಅಲ್ಲ: ಇಂಡಿಯಾ ಒಕ್ಕೂಟದ ಭಾಗವಾಗಿದ್ದರೂ ಕಾಂಗ್ರೆಸ್ ಜೊತೆ ಮೈತ್ರಿಗೆ ಎಎಪಿ ನಿರಾಕರಿಸಿರುವುದು ಇದು ಮೊದಲ ಬಾರಿಯೇನೂ ಅಲ್ಲ. ಈ ಮೊದಲು ಕೂಡ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ನಾವು ಕಾಂಗ್ರೆಸ್ ಸಖ್ಯ ಬೆಳೆಸುವುದಿಲ್ಲ ಎಂದಿದ್ದರು. ಕಾಂಗ್ರೆಸ್ ಕೂಡ ತಾವು ದೆಹಲಿಯಲ್ಲಿ ಏಕಾಂಗಿಯಾಗಿ ಕಣಕ್ಕೆ ಇಳಿಯುವುದಾಗಿ ಘೋಷಿಸಿತ್ತು. ದೆಹಲಿ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ದೇವೇಂದ್ರ ಯಾದವ್ ಮಾತನಾಡಿ, ನಮ್ಮ ಪಕ್ಷ 70 ವಿಧಾನಸಭಾ ಕ್ಷೇತ್ರದಲ್ಲಿ ಏಕಾಂಗಿಯಾಗಿ ಹೋರಾಟ ಮಾಡಲಿದೆ ಎಂದಿದ್ದರು.
2024ರ ಲೋಕಸಭಾ ಚುನಾವಣೆಯಲ್ಲಿ ಪಂಜಾಬ್ನಲ್ಲಿ ಕಾಂಗ್ರೆಸ್ ಮೈತ್ರಿಯನ್ನು ಕೇಜ್ರಿವಾಲ್ ನಿರಾಕರಿಸಿ, 13 ಕ್ಷೇತ್ರದಲ್ಲಿ ಸ್ವಯಂ ಬಲದ ಮೇಲೆ ಸ್ಪರ್ಧಿಸಿತು. ಹರಿಯಾಣದ ವಿಧಾನಸಭೆ ಚುನಾವಣೆಯಲ್ಲೂ ಈ ಎರಡು ಪಕ್ಷಗಳು ಸೀಟು ಹಂಚಿಕೆ ಒಪ್ಪಂದದಲ್ಲಿ ವಿಫಲಗೊಂಡು ಸ್ವತಂತ್ರವಾಗಿ ಸ್ಪರ್ಧಿಸಿದವು.
ಭರ್ಜರಿ ಸಿದ್ಧತೆಯಲ್ಲಿ ಎಎಪಿ: ಮುಂದಿನ ವರ್ಷದ ಆರಂಭದಲ್ಲೇ ಎದುರಾಗಲಿರುವ ವಿಧಾನಸಭಾ ಚುನಾವಣೆಗೆ ಎಎಪಿ ಈಗಾಗಲೇ ಸಜ್ಜಾಗಿದ್ದು, ಅಭ್ಯರ್ಥಿಗಳ ಎರಡನೇ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಈ ನಡುವೆ ಮತ ಪ್ರಚಾರ, ಆಶ್ವಾಸನೆ ನೀಡುವ ಮೂಲಕ ದೆಹಲಿ ಮತದಾರರ ಸೆಳೆಯುವ ಯತ್ನ ನಡೆಸಿದೆ.
ಮಂಗಳವಾರ ನಗರದ ಆಟೋರಿಕ್ಷಾ ಚಾಲಕರಿಗೆ ಐದು ಗ್ಯಾರಂಟಿ ಯೋಜನೆಗಳನ್ನು ಘೋಷಿಸಿದೆ. 10 ಲಕ್ಷ ಜೀವ ವಿಮಾ ಯೋಜನೆ, ಮಗಳ ಮದುವೆಗೆ 1 ಲಕ್ಷ ನೆರವು, ಹೋಳಿ ಮತ್ತು ದೀಪಾವಳಿಯಂದು ವರ್ಷಕ್ಕೆ ಎರಡು ಬಾರಿ 2,500 ರೂ ಸಮವಸ್ತ್ರ ಭತ್ಯೆ ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧರಾಗಲು ಆಟೋ ಚಾಲಕರ ಮಕ್ಕಳಿಗೆ ಉಚಿತ ತರಬೇತಿ ನೀಡುವುದಾಗಿ ಗ್ಯಾರಂಟಿಯಲ್ಲಿ ಆಶ್ವಾಸನೆ ನೀಡಲಾಗಿದೆ.
ಇದನ್ನೂ ಓದಿ: ದೆಹಲಿ ಚುನಾವಣೆ ಗೆಲ್ಲಲು ಆಪ್ ಕಸರತ್ತು: ಆಟೋ ಚಾಲಕರಿಗೆ ₹10 ಲಕ್ಷ ವಿಮೆ, ಪುತ್ರಿಯ ವಿವಾಹಕ್ಕೆ ₹1 ಲಕ್ಷ ಘೋಷಣೆ