ನವದೆಹಲಿ: ದೇಶದ ಅತ್ಯುನ್ನತ ನ್ಯಾಯಾಲಯವಾದ ಸುಪ್ರೀಂಕೋರ್ಟ್ ಸ್ಥಾಪನೆಯಾಗಿ 75ನೇ ವರ್ಷಾಚರಣೆಯ ಸಂಭ್ರಮದಲ್ಲಿದೆ. ಇದರ ಅಂಗವಾಗಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಇಂದು (ಭಾನುವಾರ) ಹೊಸ ಧ್ವಜ ಮತ್ತು ಲಾಂಛನವನ್ನು ಬಿಡುಗಡೆ ಮಾಡಿದರು. ಕೆಲ ದಿನಗಳ ಹಿಂದೆ ಪ್ರಧಾನಿ ನರೇಂದ್ರ ಮೋದಿ ಅವರು ಹೊಸ ನಾಣ್ಯ ಮತ್ತು ಅಂಚೆ ಚೀಟಿಗಳನ್ನು ಅನಾವರಣ ಮಾಡಿದ್ದರು.
ಇಲ್ಲಿನ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಫ್ಯಾಶನ್ ಟೆಕ್ನಾಲಜಿ (ಎನ್ಐಎಫ್ಟಿ) ಕಾಲೇಜಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಷ್ಟ್ರಪತಿ ಮುರ್ಮು ಅವರು ನ್ಯಾಯ ಮತ್ತು ಪ್ರಜಾಪ್ರಭುತ್ವವನ್ನು ಪ್ರತಿಬಿಂಬಿಸುವ ಹೊಸ ಧ್ವಜ ಮತ್ತು ಲಾಂಛನವನ್ನು ಅನಾವರಣ ಮಾಡಿದರು.
President Droupadi Murmu unveils the new flag and insignia of #SupremeCourt in Delhi.#SupremeCourtOfIndia pic.twitter.com/25kDTT3sw2
— All India Radio News (@airnewsalerts) September 1, 2024
ಹೊಸ ಧ್ವಜದಲ್ಲಿ ಏನಿದೆ: ರಾಷ್ಟ್ರಪತಿಗಳು ಬಿಡುಗಡೆ ಮಾಡಿರುವ ಹೊಸ ಧ್ವಜವು ವಿಶಿಷ್ಟ ಲಕ್ಷಣಗಳನ್ನು ಹೊಂದಿದೆ. ಧ್ವಜದಲ್ಲಿ ದೇಶದ ಸಂವಿಧಾನ, ಅಶೋಕ ಚಕ್ರ, ಸುಪ್ರೀಂಕೋರ್ಟ್ನ ಸಾಂಪ್ರದಾಯಿಕ ಕಟ್ಟಡವನ್ನು ರೂಪಿಸಲಾಗಿದೆ. ಕಡುನೀಲಿ ಬಣ್ಣದಿಂದ ಕೂಡಿರುವ ಧ್ವಜದಲ್ಲಿ ಯತೋ ಧರ್ಮಸ್ತತೋ ಜಯಃ ನ್ಯಾಯದ ಘೋಷವಾಕ್ಯವನ್ನು ಬರೆಯಲಾಗಿದೆ.
ಬಳಿಕ ಮಾತನಾಡಿದ ದ್ರೌಪದಿ ಮುರ್ಮು ಅವರು, ನಮ್ಮ ನ್ಯಾಯಾಂಗ ವ್ಯವಸ್ಥೆಯು ವಿಶ್ವದಲ್ಲೇ ಉತ್ತಮವಾಗಿದೆ. ಎಲ್ಲರಿಗೂ ನ್ಯಾಯ ಎಂಬುದು ನಮ್ಮ ಬದ್ಧತೆಯಾಗಿದೆ. ಆದಾಗ್ಯೂ ನ್ಯಾಯಾಂಗ ವ್ಯವಸ್ಥೆಯ ಮುಂದೆ ಅನೇಕ ಸವಾಲುಗಳಿವೆ. ಇವುಗಳನ್ನು ಮೀರಿ ನಮ್ಮ ನ್ಯಾಯದಾನ ವ್ಯವಸ್ಥೆ ಕೆಲಸ ಮಾಡಬೇಕಿದೆ ಎಂದು ಹೇಳಿದರು.
ನ್ಯಾಯದಾನ ವ್ಯವಸ್ಥೆಯಲ್ಲಿರುವ ಸವಾಲುಗಳನ್ನು ಎದುರಿಸಲು ಎಲ್ಲರೂ ಒಟ್ಟಾಗಿ ಸಂಘಟಿತ ಪ್ರಯತ್ನ ಮಾಡಬೇಕಿದೆ. ಉದಾಹರಣೆಗೆ, ಸಾಕ್ಷಿಗಳು ಮತ್ತು ಸಾಕ್ಷಿಗಳಿಗೆ ಸಂಬಂಧಿಸಿದ ಸಮಸ್ಯೆಗಳನ್ನು ನ್ಯಾಯಾಂಗ, ಸರ್ಕಾರ ಮತ್ತು ಪೊಲೀಸರು ಜಂಟಿಯಾಗಿ ಸೇರಿಕೊಂಡು ಪರಿಹಾರ ಕಂಡುಕೊಳ್ಳಬೇಕು ಎಂದು ಸಲಹೆ ನೀಡಿದರು.
ವಿಶೇಷ ಅಂಚೆ ಚೀಟಿ, ನಾಣ್ಯ ಬಿಡುಗಡೆ: ಭಾರತದ ಸರ್ವೋಚ್ಛ ನ್ಯಾಯಾಲಯದ 75ನೇ ವರ್ಷಾಚರಣೆ ಹಿನ್ನೆಲೆ ಈಚೆಗೆ ದೆಹಲಿಯ ಭಾರತ ಮಂಟಪದಲ್ಲಿ ನಡೆದ ಜಿಲ್ಲಾ ನ್ಯಾಯಾಂಗದ ರಾಷ್ಟ್ರೀಯ ಸಮ್ಮೇಳನದಲ್ಲಿ ವಿಶೇಷ ನಾಣ್ಯ ಮತ್ತು ಅಂಚೆ ಚೀಟಿಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ಬಿಡುಗಡೆ ಮಾಡಿದ್ದರು.
ಈ ವೇಳೆ ಮಾತನಾಡಿದ್ದ ಅವರು, ಕಳೆದ 10 ವರ್ಷಗಳಿಂದ ನ್ಯಾಯಾಲಯದ ಸೌಕರ್ಯಗಳ ಅಭಿವೃದ್ಧಿಗೆ ಕೇಂದ್ರ ಸರ್ಕಾರವು 8 ಸಾವಿರ ಕೋಟಿ ರೂಪಾಯಿ ವ್ಯಯಿಸಿದೆ. ನ್ಯಾಯದ ವಿಳಂಬವನ್ನು ತೊಡೆದುಹಾಕಲು ಕಳೆದೊಂದು ದಶಕದಿಂದ ಅನೇಕ ಮಟ್ಟದಲ್ಲಿ ಕಾರ್ಯ ನಿರ್ವಹಣೆ ಮಾಡಲಾಗಿದೆ ಎಂದಿದ್ದರು.
ಸರ್ವೋಚ್ಛ ನ್ಯಾಯಾಲಯದ 75ನೇ ವರ್ಷದ ಪಯಣದಲ್ಲಿ ಸಂವಿಧಾನಿಕ ಮೌಲ್ಯ ಮತ್ತು ಭಾರತ ಪ್ರಬುದ್ಧ ಪ್ರಜಾಪ್ರಭುತ್ವದಿಂದ ಹೊರಹೊಮ್ಮಿದೆ. ಜನರು ಎಂದಿಗೂ ಭಾರತದ ನ್ಯಾಯಾಂಗ ಮತ್ತು ಸುಪ್ರೀಂ ಕೋರ್ಟ್ ಅನ್ನು ಅಪನಂಬಿಕೆ ಹೊಂದಿಲ್ಲ. ಇದೇ ಕಾರಣಕ್ಕೆ ಸುಪ್ರೀಂ ಕೋರ್ಟ್ ತನ್ನ 75ನೇ ವರ್ಷಾಚರಣೆ ಸಂದರ್ಭದಲ್ಲಿ ಪ್ರಜಾಪ್ರಭುತ್ವದ ತಾಯಿಯಾದ ಭಾರತದ ವೈಭವವನ್ನು ಹೆಚ್ಚಿಸಿದೆ ಎಂದು ಹೇಳಿದ್ದರು.