ನವದೆಹಲಿ: ಭಾರತದಲ್ಲಿ ಅಪರಾಧ ನ್ಯಾಯ ವ್ಯವಸ್ಥೆಯನ್ನು ಸಂಪೂರ್ಣವಾಗಿ ಮರುಪರಿಶೀಲಿಸಲು ಹೊಸದಾಗಿ ರಚಿಸಿರುವ ಕಾನೂನುಗಳಾದ ಭಾರತೀಯ ನ್ಯಾಯ ಸಂಹಿತಾ, ಭಾರತೀಯ ನಾಗರಿಕ ಸುರಕ್ಷಾ ಸಂಹಿತಾ ಮತ್ತು ಭಾರತೀಯ ಸಾಕ್ಷಿ ಕಾಯ್ದೆಗಳು ಜುಲೈ 1ರಿಂದ ಜಾರಿಗೆ ಬರಲಿವೆ. ಈ ಮೂರು ಹೊಸ ಕಾನೂನುಗಳಿಗೆ ಕಳೆದ ವರ್ಷದ ಡಿಸೆಂಬರ್ 21ರಂದು ಸಂಸತ್ತಿನ ಅನುಮೋದನೆ ದೊರೆತಿತ್ತು. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಡಿಸೆಂಬರ್ 25ರಂದು ಸಹಿ ಹಾಕಿದ್ದರು.
ಕೇಂದ್ರ ಗೃಹ ಸಚಿವಾಲಯದ ಅಧಿಸೂಚನೆ: ಜುಲೈ 1, 2024ರಿಂದ ಮೂರು ಹೊಸ ಕ್ರಿಮಿನಲ್ ಕಾನೂನುಗಳನ್ನು ಜಾರಿಗೆ ತರಲು ಕೇಂದ್ರ ಗೃಹ ಸಚಿವಾಲಯ ಅಧಿಸೂಚನೆ ಹೊರಡಿಸಿದೆ. ಫೆಬ್ರವರಿ 23ರಂದು ಹೊರಡಿಸಲಾದ ಈ ಅಧಿಸೂಚನೆಯಂತೆ, ಪ್ರಸ್ತುತ ಇರುವ ಬ್ರಿಟಿಷ್ ಯುಗದ ಹಳೆ ಕಾನೂನುಗಳಾದ ಭಾರತೀಯ ದಂಡ ಸಂಹಿತೆ, ಕ್ರಿಮಿನಲ್ ಪ್ರೊಸೀಜರ್ ಕೋಡ್ ಮತ್ತು 1872ರ ಭಾರತೀಯ ಸಾಕ್ಷಿ ಕಾಯಿದೆಗಳು ನಿಗದಿತ ದಿನಾಂಕದಿಂದ ಮುಕ್ತಾಯಗೊಳ್ಳುತ್ತವೆ.
ಉದ್ದೇಶವೇನು?: ಹೊಸ ಕಾನೂನುಗಳು ಅಪರಾಧ ನ್ಯಾಯ ವ್ಯವಸ್ಥೆಯನ್ನು ಸಂಪೂರ್ಣವಾಗಿ ಬದಲಾಯಿಸುತ್ತವೆ. ವಿವಿಧ ಅಪರಾಧಗಳನ್ನು ಹೊಸದಾಗಿ ವ್ಯಾಖ್ಯಾನಿಸುತ್ತವೆ ಮತ್ತು ಶಿಕ್ಷೆಗಳನ್ನು ನಿರ್ಧರಿಸುತ್ತವೆ.
ಟ್ರಕ್ ಚಾಲಕರಿಗೆ ಭರವಸೆ ನೀಡಿದಂತೆ ವಾಹನ ಚಾಲಕನ ಕಡೆಯಿಂದ ಹಿಟ್ ಆ್ಯಂಡ್ ರನ್ ಪ್ರಕರಣಗಳಿಗೆ ಸಂಬಂಧಿಸಿದ ನಿಬಂಧನೆಯನ್ನು ಜಾರಿಗೊಳಿಸದಿರಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಅಖಿಲ ಭಾರತ ಮೋಟಾರ್ ಟ್ರಾನ್ಸ್‌ಪೋರ್ಟ್ ಕಾಂಗ್ರೆಸ್‌ನೊಂದಿಗೆ ಸಮಾಲೋಚಿಸಿದ ನಂತರವೇ ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 106 (2) ಅನ್ವಯಿಸುವ ನಿರ್ಧಾರವನ್ನು ತೆಗೆದುಕೊಳ್ಳಲಾಗುವುದು ಎಂದು ಕೇಂದ್ರ ಗೃಹ ಕಾರ್ಯದರ್ಶಿ ಅಜಯ್ ಭಲ್ಲಾ ಹೇಳಿದ್ದಾರೆ.
ಪ್ರಮುಖ ಬದಲಾವಣೆಗಳು:
- ಭಾರತೀಯ ನ್ಯಾಯಾಂಗ ಸಂಹಿತೆಯು ಯಾವ ಕೃತ್ಯವು ಅಪರಾಧ ಮತ್ತು ಅದಕ್ಕೆ ಯಾವ ಶಿಕ್ಷೆ ಎಂದು ನಿರ್ಧರಿಸುತ್ತದೆ. ಐಪಿಸಿಯಲ್ಲಿ (IPC) 511 ಸೆಕ್ಷನ್‌ಗಳಿದ್ದರೆ, ಹೊಸ ಭಾರತೀಯ ನ್ಯಾಯ ಸಂಹಿತೆ 358 ಸೆಕ್ಷನ್‌ಗಳಿವೆ. 21 ಹೊಸ ಅಪರಾಧಗಳನ್ನು ಹೊಸ ಕಾನೂನಿನಲ್ಲಿ ಸೇರಿಸಲಾಗಿದೆ.
- ಸಿಆರ್‌ಪಿಸಿಯಲ್ಲಿ (CrPC) 484 ವಿಭಾಗಗಳಿದ್ದರೆ, ಭಾರತೀಯ ನಾಗರಿಕ ರಕ್ಷಣಾ ಸಂಹಿತೆ (BNSS) 531 ವಿಭಾಗಗಳಿವೆ. ಹೊಸ ಕಾನೂನಿನಲ್ಲಿ, ಸಿಆರ್‌ಪಿಸಿಯ 177 ಸೆಕ್ಷನ್‌ಗಳನ್ನು ಬದಲಾಯಿಸಲಾಗಿದೆ ಮತ್ತು 9 ಹೊಸ ಸೆಕ್ಷನ್‌ಗಳನ್ನು ಸೇರಿಸಲಾಗಿದೆ.
- ಹೊಸ ಕಾನೂನನ್ನು ಪರಿಚಯಿಸುವುದರೊಂದಿಗೆ, 14 ಸೆಕ್ಷನ್‌ಗಳನ್ನು ರದ್ದುಗೊಳಿಸಲಾಗಿದೆ. ಬಂಧನ, ತನಿಖೆ ಮತ್ತು ಕಾನೂನು ಕ್ರಮ ಇತ್ಯಾದಿಗಳನ್ನು ಸಿಆರ್‌ಪಿಸಿಯಲ್ಲಿ ಮಾಡಲಾಗುತ್ತದೆ.
- ಭಾರತೀಯ ಸಾಕ್ಷ್ಯ ಕಾಯ್ದೆಯಡಿ 170 ಸೆಕ್ಷನ್‌ಗಳಿವೆ. ಪ್ರಕರಣದ ಸಾಕ್ಷ್ಯವನ್ನು ಹೇಗೆ ಸಾಬೀತುಪಡಿಸಲಾಗುತ್ತದೆ, ಹೇಳಿಕೆಗಳನ್ನು ಹೇಗೆ ದಾಖಲಿಸಲಾಗುತ್ತದೆ ಎಂಬುದನ್ನು ಈಗ ಭಾರತೀಯ ಸಾಕ್ಷ್ಯ ಕಾಯ್ದೆಯಡಿ 170 ಸೆಕ್ಷನ್‌ಗಳಡಿ ತಿಳಿಸಲಾಗಿದೆ. ಹೊಸ ಕಾನೂನನ್ನು ಜಾರಿಗೆ ತರುವಾಗ 24 ಸೆಕ್ಷನ್‌ಗಳಲ್ಲಿ ಬದಲಾವಣೆ ಮಾಡಲಾಗಿದ್ದು, ಎವಿಡೆನ್ಸ್ ಆ್ಯಕ್ಟ್‌ಗೆ 2 ಹೊಸ ಸೆಕ್ಷನ್‌ಗಳನ್ನು ಕೂಡ ಸೇರಿಸಲಾಗಿದೆ. ಹೊಸ ಕಾನೂನಿನಲ್ಲಿ ಆರು ಹಳೆಯ ಸೆಕ್ಷನ್‌ಗಳನ್ನು ರದ್ದುಪಡಿಸಲಾಗಿದೆ.
- ಭಯೋತ್ಪಾದನೆ, ಸಾಮೂಹಿಕ ಹತ್ಯೆ ಮತ್ತು ರಾಷ್ಟ್ರೀಯ ಭದ್ರತೆಗೆ ಧಕ್ಕೆ ತರುವ ಅಪರಾಧಗಳಂತಹ ಅಪರಾಧಗಳಿಗೆ ಶಿಕ್ಷೆಯನ್ನು ಹೆಚ್ಚು ಕಠಿಣಗೊಳಿಸಲಾಗಿದೆ. ಹೊಸ ಕಾನೂನು 23 ಅಪರಾಧಗಳಲ್ಲಿ ಕಡ್ಡಾಯವಾಗಿ ಕನಿಷ್ಠ ಶಿಕ್ಷೆಯ ನಿಬಂಧನೆಗಳು ಒಳಗೊಂಡಿವೆ. 6 ರೀತಿಯ ಅಪರಾಧಗಳಲ್ಲಿ ಸಮುದಾಯ ಸೇವೆಯ ಶಿಕ್ಷೆಗೂ ಅವಕಾಶವಿದೆ. ಪ್ರಕರಣಗಳ ಇತ್ಯರ್ಥಕ್ಕೆ ಹೊಸ ಕಾನೂನಿನಲ್ಲಿ ಕಾಲಮಿತಿ ಇರುತ್ತದೆ. ವಿಧಿ ವಿಜ್ಞಾನದ ಬಳಕೆಗೂ ಅವಕಾಶವಿರುತ್ತದೆ.
- ದೇಶದ್ರೋಹವನ್ನು ಇನ್ನು ಮುಂದೆ ಅಪರಾಧ ಎಂದು ಪರಿಗಣಿಸಲಾಗುವುದಿಲ್ಲ. ಹೊಸ ಕಾನೂನಿನ ಸೆಕ್ಷನ್ 150ರ ಅಡಿಯಲ್ಲಿ ಹೊಸ ಅಪರಾಧವನ್ನು ಸೇರಿಸಲಾಗಿದೆ. ಇದರಡಿ ಭಾರತದಿಂದ ಬೇರ್ಪಡುವುದು, ಪ್ರತ್ಯೇಕತಾವಾದಿ ಭಾವನೆಗಳನ್ನು ಹೊಂದಿರುವುದು ಅಥವಾ ಭಾರತದ ಏಕತೆ ಮತ್ತು ಸಾರ್ವಭೌಮತೆಗೆ ಧಕ್ಕೆ ತರುವುದು ಅಪರಾಧ ಎಂದು ವಿವರಿಸಲಾಗಿದೆ. ಇದು ದೇಶದ್ರೋಹದ ಅಪರಾಧವಾಗುತ್ತದೆ.
- ಹೊಸ ಕಾನೂನುಗಳ ಅಡಿಯಲ್ಲಿ, ಸಾಮೂಹಿಕ ಹತ್ಯೆ ಅಂದರೆ, 5 ಅಥವಾ ಅದಕ್ಕಿಂತ ಹೆಚ್ಚು ಜನರ ಗುಂಪು ಒಟ್ಟಾಗಿ ಜಾತಿ ಅಥವಾ ಸಮುದಾಯ ಇತ್ಯಾದಿಗಳ ಆಧಾರದ ಮೇಲೆ ಕೊಲೆ ಮಾಡಿದಾಗ, ಗುಂಪಿನ ಪ್ರತಿಯೊಬ್ಬ ಸದಸ್ಯನಿಗೂ ಜೀವಾವಧಿ ಶಿಕ್ಷೆಯನ್ನು ನೀಡಲಾಗುತ್ತದೆ.
- ಹೊಸ ಕಾನೂನಿನ ಪ್ರಕಾರ, ಅಪ್ರಾಪ್ತ ವಯಸ್ಕರ ಮೇಲೆ ಅತ್ಯಾಚಾರ ಎಸಗುವ ತಪ್ಪಿತಸ್ಥರಿಗೆ ಈಗ ಮರಣದಂಡನೆ ವಿಧಿಸಬಹುದು. ಸಾಮೂಹಿಕ ಅತ್ಯಾಚಾರ ಪ್ರಕರಣಗಳಲ್ಲಿ 20 ವರ್ಷಗಳ ಜೈಲು ಶಿಕ್ಷೆ ಅಥವಾ ಜೀವಾವಧಿ ಶಿಕ್ಷೆಯ ಅವಕಾಶವಿದೆ. ಇದಲ್ಲದೇ ಅಪ್ರಾಪ್ತ ಬಾಲಕಿಯ ಮೇಲಿನ ಸಾಮೂಹಿಕ ಅತ್ಯಾಚಾರವನ್ನು ಹೊಸ ಅಪರಾಧದ ವರ್ಗದಲ್ಲಿರಿಸಲಾಗಿದೆ.
- ಹೊಸ ಕಾನೂನಿನಲ್ಲಿ, ಈ ಹಿಂದೆ ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯಿದೆಯಂತಹ ವಿಶೇಷ ಕಾನೂನುಗಳ ಭಾಗವಾಗಿದ್ದ ಭಯೋತ್ಪಾದಕ ಕೃತ್ಯಗಳನ್ನು ಈಗ ಭಾರತೀಯ ನ್ಯಾಯಾಂಗ ಸಂಹಿತೆಯಲ್ಲಿ ಸೇರಿಸಲಾಗಿದೆ. ಹೊಸ ಕಾನೂನಿನ ಅಡಿಯಲ್ಲಿ, ದೇಶಕ್ಕೆ ಹಾನಿಯನ್ನುಂಟುಮಾಡಲು ಡೈನಮೈಟ್ ಅಥವಾ ವಿಷಕಾರಿ ಅನಿಲದಂತಹ ಅಪಾಯಕಾರಿ ವಸ್ತುಗಳನ್ನು ಬಳಸುವ ಯಾವುದೇ ವ್ಯಕ್ತಿಯನ್ನು ಭಯೋತ್ಪಾದಕ ಎಂದು ಪರಿಗಣಿಸಲಾಗುತ್ತದೆ.
- ಜೇಬುಗಳ್ಳತನದಂತಹ ಸಣ್ಣ ಅಪರಾಧಗಳನ್ನು ಹತ್ತಿಕ್ಕಲು ಹೊಸ ಕಾನೂನುಗಳಲ್ಲಿ ಅವಕಾಶ ಕಲ್ಪಿಸಲಾಗಿದೆ.
ಇದನ್ನೂ ಓದಿ: ನಿಯಮಗಳ ತಿರುಚಿ ಕಲ್ಲಿದ್ದಲು ಹರಾಜು ನಡೆಸಿದ ಕೇಂದ್ರ ಸರ್ಕಾರ: ಸಿಎಜಿ ವರದಿ ಉಲ್ಲೇಖಿಸಿ ಕಾಂಗ್ರೆಸ್ ಆರೋಪ