ನವದೆಹಲಿ: ಆಕ್ಷೇಪಾರ್ಹ ಫತ್ವಾ ಸಂಬಂಧ ಉತ್ತರ ಪ್ರದೇಶದ ಖ್ಯಾತ ಇಸ್ಲಾಮಿಕ್ ಶಿಕ್ಷಣ ಸಂಸ್ಥೆಯಾದ ದಾರುಲ್ ಉಲೂಮ್ ದಿಯೋಬಂದ್ ವಿರುದ್ಧ ಎಫ್‌ಐಆರ್ ದಾಖಲಿಸಿ ಕಾನೂನು ಕ್ರಮ ಕೈಗೊಳ್ಳುವಂತೆ ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗವು (ಎನ್‌ಸಿಪಿಸಿಆರ್) ಉತ್ತರ ಪ್ರದೇಶ ಸರ್ಕಾರಕ್ಕೆ ನಿರ್ದೇಶನ ನೀಡಿದೆ.
ಆಯೋಗದ ಅಧ್ಯಕ್ಷ ಪ್ರಿಯಾಂಕ್ ಕಾನೂಂಗೊ ಅವರು ಸಹರಾನ್‌ಪುರ ಜಿಲ್ಲೆಯ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಎಸ್‌ಪಿ)ಗೆ ಪತ್ರ ಬರೆದಿದ್ದು, ದಾರುಲ್ ಉಲೂಮ್ ದಿಯೋಬಂದ್ನ ವೆಬ್‌ಸೈಟ್‌ನಲ್ಲಿ ಪ್ರಕಟವಾದ ಫತ್ವಾ ಕುರಿತು ಕಳವಳ ವ್ಯಕ್ತಪಡಿಸಿದ್ದಾರೆ. ಈ ಫತ್ವಾವು 'ಘಜ್ವಾ-ಎ-ಹಿಂದ್' ಪರಿಕಲ್ಪನೆಯನ್ನು ಚರ್ಚಿಸುತ್ತದೆ. ಭಾರತದ ಆಕ್ರಮಣದ ಸಂದರ್ಭದಲ್ಲಿ ಹುತಾತ್ಮತೆ "ಭಾರತದ ಆಕ್ರಮಣದ ಸಂದರ್ಭದಲ್ಲಿ ಹುತಾತ್ಮತೆಯನ್ನು ವೈಭವೀಕರಿಸುತ್ತದೆ. ಈ ಫತ್ವಾವು ಮಕ್ಕಳನ್ನು ಸ್ವಂತ ದೇಶದ ವಿರುದ್ಧ ದ್ವೇಷಕ್ಕೆ ಒಡ್ಡುತ್ತದೆ. ಅಂತಿಮವಾಗಿ ಅವರಿಗೆ ಅನಗತ್ಯ ಮಾನಸಿಕ ಅಥವಾ ದೈಹಿಕ ನೋವನ್ನು ಉಂಟುಮಾಡುತ್ತದೆ ಎಂದು ಕಾನೂಂಗೊ ತಮ್ಮ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಇದು ಬಾಲ ನ್ಯಾಯ ಕಾಯ್ದೆ -2015ರ ಸೆಕ್ಷನ್ 75ರ ಉಲ್ಲಂಘನೆ ಬಗ್ಗೆ ಒತ್ತಿ ಹೇಳಿರುವ ಎನ್‌ಸಿಪಿಸಿಆರ್ ಅಧ್ಯಕ್ಷ, ಈ ವಿಷಯವನ್ನು 2005ರ ಸಿಆರ್ಪಿಸಿ ಕಾಯ್ದೆಯ ಸೆಕ್ಷನ್ 13 (1)ರಡಿ ಆಯೋಗವು ಕೈಗೆತ್ತಿಕೊಂಡಿದೆ ಎಂದು ತಿಳಿಸಿದ್ದಾರೆ. ಅಲ್ಲದೇ, ಈ ಪ್ರಕರಣಕ್ಕೆ ಕನ್ಹಯ್ಯ ಕುಮಾರ್ ಮತ್ತು ದೆಹಲಿಯ ಎನ್‌ಸಿಟಿಯ ನಡುವಿನ ಪ್ರಕರಣ ಸೇರಿದಂತೆ ಕಾನೂನಿನ ಪೂರ್ವನಿದರ್ಶನಗಳನ್ನೂ ಉಲ್ಲೇಖಿಸಿದ್ದಾರೆ. ಫತ್ವಾ ವಿಷಯವು ರಾಷ್ಟ್ರದ ವಿರುದ್ಧ ದ್ವೇಷವನ್ನು ಪ್ರಚೋದಿಸುವ ಅಪರಾಧ ಎಂದು ಅರ್ಥೈಸಬಹುದಾಗಿದೆ ಎಂದೂ ಕಾನೂಂಗೊ ಹೇಳಿದ್ದಾರೆ.
ಪ್ರತಿಕೂಲ ಪರಿಣಾಮಗಳಿಗೆ ಜಿಲ್ಲಾಡಳಿತ ಹೊಣೆ - ಎನ್‌ಸಿಪಿಸಿಆರ್ ಎಚ್ಚರಿಕೆ: ಇದಲ್ಲದೆ, 2022ರ ಜನವರಿ ಮತ್ತು 2023ರ ಜುಲೈಯಲ್ಲಿ ಜಿಲ್ಲಾಡಳಿತದೊಂದಿಗೆ ಇದೇ ರೀತಿಯ ವಿಷಯಯನ್ನು ಪರಿಹರಿಸಲು ಆಯೋಗ ತೆಗೆದುಕೊಂಡು ಪ್ರಯತ್ನಗಳನ್ನೂ ಈ ಪತ್ರದಲ್ಲಿ ಉಲ್ಲೇಖಿಸಲಾಗಿದೆ. ಈ ಪ್ರಯತ್ನಗಳ ಹೊರತಾಗಿಯೂ ಇದುವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಅಂತಹ ವಿಷಯದಿಂದ ಉಂಟಾಗುವ ಯಾವುದೇ ಪ್ರತಿಕೂಲ ಪರಿಣಾಮಗಳಿಗೆ ಜಿಲ್ಲಾಡಳಿತವನ್ನೇ ಹೊಣೆಗಾರರನ್ನಾಗಿ ಮಾಡಬೇಕಾಗುತ್ತದೆ ಎಂದು ಎನ್‌ಸಿಪಿಸಿಆರ್ ಅಧ್ಯಕ್ಷರು ಎಚ್ಚರಿಸಿದ್ದಾರೆ.
ಈಗಿನ ಪ್ರಕರಣದಲ್ಲಿ ಭಾರತೀಯ ದಂಡ ಸಂಹಿತೆ ಮತ್ತು ಬಾಲಾಪರಾಧಿ ಕಾಯ್ದೆ-2015 ರ ಅಡಿಯಲ್ಲಿ ದಾರುಲ್ ಉಲೂಮ್ ದಿಯೋಬಂದ್ ವಿರುದ್ಧ ಕಾನೂನು ಕ್ರಮಗಳನ್ನು ಪ್ರಾರಂಭಿಸಲು ಸೂಚಿಸಲಾಗಿದ್ದು, ಈ ಕುರಿತು ಕ್ರಮ ಕೈಗೊಂಡಿರುವ ವರದಿಯನ್ನು ಮೂರು ದಿನಗಳೊಳಗೆ ಸಲ್ಲಿಸುವಂತೆ ತಿಳಿಸಿದ್ದಾರೆ.
ಇದನ್ನೂ ಓದಿ: ಮದುವೆ ಸಮಾರಂಭದಲ್ಲಿ ಗುಂಡಿನ ಸದ್ದು: ಸಂಬಂಧಿಯನ್ನ ಶೂಟ್ ಮಾಡಿ ಕೊಂದ ಪುರಸಭಾ ಅಧ್ಯಕ್ಷರ ಸಹೋದರ