ಬರೇಲಿ (ಉತ್ತರ ಪ್ರದೇಶ): ಯೋಧನೊಬ್ಬ ಸಹ ಕಾನ್ಸ್ಟೇಬಲ್ಗೆ ರೈಫಲ್ನಿಂದ ಗುಂಡು ಹಾರಿಸಿ ಕೊಲೆ ಮಾಡಿರುವ ಘಟನೆ ಉತ್ತರಪ್ರದೇಶದ ಬರೇಲಿಯ ಕ್ಯಾಂಟ್ ಪೊಲೀಸ್ ಠಾಣೆ ವ್ಯಾಪ್ತಿಯ ಸೇನಾ ಶಿಬಿರದಲ್ಲಿ ಶುಕ್ರವಾರ ನಡೆದಿದೆ. ಯೋಧ ಹಾಗೂ ಕಾನ್ಸ್ಟೇಬಲ್ ನಡುವೆ ಕೆಲವು ವಿಚಾರಕ್ಕೆ ವಾಗ್ವಾದ ನಡೆದಿದ್ದು, ಗಲಾಟೆ ತಾರಕಕ್ಕೇರಿ ಯೋಧ ಗೇಟ್ ಬಳಿ ನಿಂತಿದ್ದ ಕಾವಲುಗಾರನ ಸರ್ವಿಸ್ ರೈಫಲ್ ಕಿತ್ತುಕೊಂಡು ಗುಂಡು ಹಾರಿಸಿದ್ದಾನೆ. 40 ವರ್ಷದ ಕಮಲ್ ಜೋಶಿ ಕೊಲೆಯಾದ ಕಾನ್ಸ್ಟೇಬಲ್ ಎಂದು ತಿಳಿದು ಬಂದಿದೆ.
ಬರೇಲಿಯ ಕ್ಯಾಂಟ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿರುವ ಸೇನೆಯ 606 ಇಎಂಇ ಬೆಟಾಲಿಯನ್ನಲ್ಲಿ ಕಾನ್ಸ್ಟೇಬಲ್ ಆಗಿ ಅಸ್ಸಾಂನ ನಿವಾಸಿಯಾಗಿದ್ದ ಕಮಲ್ ಜೋಶಿ ನೇಮಕಗೊಂಡಿದ್ದರು. ರಜೆಯಲ್ಲಿ ಮನೆಗೆ ತೆರಳಿದ್ದ ಅವರು ಶುಕ್ರವಾರ ಬೆಟಾಲಿಯನ್ಗೆ ವಾಪಸ್ ಆಗಿದ್ದರು. ಈ ಸಂದರ್ಭದಲ್ಲಿ ಬೆಟಾಲಿಯನ್ನಲ್ಲಿದ್ದ ಯೋಧ ರಾಜೇಶ್ ರತ್ನ ಹಾಗೂ ಇವರ ಮಧ್ಯೆ ಯಾವುದೋ ವಿಷಯಕ್ಕೆ ಸಣ್ಣದಾಗಿ ಜಗಳ ಪ್ರಾರಂಭವಾಗಿದೆ. ಮಾತಿಗೆ ಮಾತು ಬೆಳೆದು, ಜಗಳ ತಾರಕಕ್ಕೇರಿದೆ. ಈ ವೇಳೆ ಯೋಧ ರಾಜೇಶ್ ಅಲ್ಲೇ ಗೇಟ್ ಬಳಿ ನಿಂತಿದ್ದ ಕಾವಲುಗಾರನ ರೈಪಲ್ ತೆಗೆದುಕೊಂಡು ಕಮಲ್ ಜೋಶಿಗೆ ಗುಂಡು ಹಾರಿಸಿದ್ದಾನೆ. ಇದರಿಂದಾಗಿ ಕಮಲ್ ಜೋಶಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಘಟನೆ ಬಗ್ಗೆ ಮಾಹಿತಿ ಪಡೆದ ತಕ್ಷಣ ಕ್ಯಾಂಟ್ ಪೊಲೀಸ್ ಠಾಣೆ ಸಿಒ ಥರ್ಡ್ ಅನಿತಾ ಚೌಹಾಣ್, ಸಿಒ ಸಿಟಿ ಸಂದೀಪ್ ಸಿಂಗ್, ಎಸ್ಪಿ ಸಿಟಿ ರಾಹುಲ್ ಭಾಟಿ ಸ್ಥಳಕ್ಕೆ ಧಾವಿಸಿ ಬಂದಿದ್ದಾರೆ. ಕಮಲ್ ಜೋಶಿ ಅವರ ಮೃತದೇಹವನ್ನು ವಶಕ್ಕೆ ಪಡೆದ ಅಧಿಕಾರಿಗಳು ಮರಣೋತ್ತರ ಪರೀಕ್ಷೆಗೆ ರವಾನೆ ಮಾಡಿದ್ದಾರೆ. ಘಟನೆ ಬಗ್ಗೆ ಮಾಹಿತಿ ಪಡೆದುಕೊಂಡ ಅಧಿಕಾರಿಗಳು ಘಟನೆಗೆ ಕಾರಣವಾಗಿದ್ದ ಆರೋಪಿ ಸೈನಿಕ ರಾಜೇಶ್ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ಗುಂಡಿಕ್ಕಿದ್ದು ಏಕೆ ಎಂದು ಪ್ರಶ್ನೆ ಮಾಡಲಾಗುತ್ತಿದೆ.
"ಕಾನ್ಸ್ಟೇಬಲ್ ಮೇಲೆ ಗುಂಡಿಕ್ಕಿ ಕೊಂದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂದಿರುವ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಳ್ಳಲಾಗುವುದು. ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ವಿಚಾರಣೆ ಬಳಿಕವಷ್ಟೇ ಘಟನೆಗೆ ಸ್ಪಷ್ಟ ಕಾರಣ ತಿಳಿದು ಬರಲಿದೆ " ಎಂದು ಸಿಒ ಸಿಟಿ ಸಂದೀಪ್ ಸಿಂಗ್ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಚಾಮರಾಜನಗರದಲ್ಲಿ ಪ್ರತ್ಯೇಕ ಕೊಲೆ: ಮೈದುನನ್ನು ಕೊಂದ ಬಾವ - ಅಳಿಯನ ಹತ್ಯೆ ಮಾಡಿದ ಮಾವ!