ನವದೆಹಲಿ: ಈ ಬಾರಿಯ ಬಜೆಟ್ನಲ್ಲಿ ಮುದ್ರಾ ಯೋಜನೆಯ ಸಾಲದ ಮಿತಿಯನ್ನು ದುಪ್ಪಟ್ಟು ಮಾಡಿರುವುದಾಗಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ. ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮ (ಎಂಎಸ್ಎಂಇ) ವಲಯಗಳಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಅವರು ತಿಳಿಸಿದರು.
ಎಂಎಸ್ಎಂಇಗಳಿಗೆ ಯಂತ್ರೋಪಕರಣ ಮತ್ತು ಸಾಧನಗಳನ್ನು ಯಾವುದೇ ಗ್ಯಾರಂಟಿ ನೀಡದೇ ಟರ್ಮ್ ಲೋನ್ ಮೂಲಕ ಪಡೆಯುವ ಸೌಲಭ್ಯ ನೀಡಲಾಗುವುದು. ಈ ಹೊಸ ಯೋಜನೆಯಡಿ ಗ್ಯಾರಂಟಿ ನಿಧಿ 100 ಕೋಟಿ ರೂವರೆಗೆ ಖಾತರಿ ನೀಡುತ್ತದೆ ಎಂದರು.
100 ನಗರಗಳಲ್ಲಿ ಹೂಡಿಕೆಗೆ ಸಿದ್ಧವಾಗಿರುವ ಕೈಗಾರಿಕಾ ಪಾರ್ಕ್‌ಗಳನ್ನು ಉತ್ತೇಜಿಸಲಾಗುವುದು. ಉದ್ಯೋಗ ಸೃಷ್ಟಿಸುವ ಜೊತೆಗೆ ಯುವಜನತೆಯನ್ನು ಕೌಶಲ್ಯಯುತರನ್ನಾಗಿ ಮಾಡಬೇಕಿದೆ. ಒಟ್ಟಾರೆ 1 ಸಾವಿರ ಕೈಗಾರಿಕಾ ತರಬೇತಿ ಸಂಸ್ಥೆಗಳನ್ನು ಉನ್ನತೀಕರಿಸಲಾಗುವುದು ಎಂದು ಬಜೆಟ್ನಲ್ಲಿ ಪ್ರಸ್ತಾಪಿಸಿದ್ದಾರೆ.
ಬಿಹಾರ ಪ್ರವಾಸೋದ್ಯಮಕ್ಕೆ ಒತ್ತು: ಬಿಹಾರದ ಗಯಾದಲ್ಲಿರುವ ವಿಷ್ಣುಪಾದ ದೇಗುಲ ಮತ್ತು ಬುದ್ಧ ಗಯದಲ್ಲಿರುವ ಮಹಾಬೋಧಿ ದೇಗುಲಗಳು ಧಾರ್ಮಿಕ ಮಹತ್ವದ ಕ್ಷೇತ್ರಗಳಾಗಿವೆ. ಈ ನಿಟ್ಟಿನಲ್ಲಿ ವಿಷ್ಣುಪಾದ ದೇವಸ್ಥಾನದ ಕಾರಿಡಾರ್ ಮತ್ತು ಮಹಾಬೋಧಿ ದೇವಸ್ಥಾನದ ಕಾರಿಡಾರ್‌ನ ಸಮಗ್ರ ಅಭಿವೃದ್ಧಿಗೆ ಬೆಂಬಲ ನೀಡಲಾಗುವುದು ಎಂದು ತಿಳಿಸಿದರು.
ಕಾಶಿ ವಿಶ್ವನಾಥ ದೇವಸ್ಥಾನ ಕಾರಿಡಾರ್ ಅನ್ನು ವಿಶ್ವದರ್ಜೆಯ ಯಾತ್ರಿಕ ಮತ್ತು ಪ್ರವಾಸಿ ತಾಣವಾಗಿ ಮಾರ್ಪಡಿಸಲಾಗುವುದು. ರಾಜಗಿರ್ ಸ್ಥಳ ಹಿಂದೂ, ಬೌದ್ಧ ಮತ್ತು ಜೈನರಿಗೆ ಅಪಾರ ಧಾರ್ಮಿಕ ಮಹತ್ವ ಹೊಂದಿದೆ. 20ನೇ ತೀರ್ಥಂಕರ ಮುನಿಸುವ್ರತ ಬಸದಿ, ಸಪ್ತ ಋಷಿಗಳ ಪವಿತ್ರವಾದ ಬೆಚ್ಚಗಿನ ನೀರಿನ ಬ್ರಹ್ಮಕುಂಡವನ್ನು ಇಲ್ಲಿ ನಿರ್ಮಿಸಲಾಗುವುದು. ರಾಜಗಿರ್‌ನ ಸಮಗ್ರ ಅಭಿವೃದ್ಧಿ ಕ್ರಮ ನಡೆಸಲಾಗುವುದು. ಪ್ರಖ್ಯಾತ ನಳಂದ ವಿಶ್ವವಿದ್ಯಾಲಯವನ್ನು ಪುನರುಜ್ಜೀವನಗೊಳಿಸುವ ಜೊತೆಗೆ ಪ್ರವಾಸಿ ಕೇಂದ್ರವಾಗಿ ಅಭಿವೃದ್ಧಿಪಡಿಸಲಾಗುವುದು ಎಂದರು.
ಕ್ಯಾನ್ಸರ್ ಔಷಧಿಗೆ ಕಸ್ಟಮ್ಸ್ ಸುಂಕ ವಿನಾಯಿತಿ: ಮಾರಣಾಂತಿಕ ರೋಗ ಕ್ಯಾನ್ಸರ್‌ಗೆ ನೀಡಲಾಗುತ್ತಿರುವ ಚಿಕಿತ್ಸೆಯ ಮೂರು ಪ್ರಮುಖ ಔಷಧಿಗಳಿಗೆ ಕಸ್ಟಮ್ಸ್ ಸುಂಕ ವಿನಾಯಿತಿ ನೀಡಲಾಗುವುದು. ವೈದ್ಯಕೀಯ ಎಕ್ಸ್ -ರೇ ಯಂತ್ರಗಳಲ್ಲಿ ಬಳಸಲು ಬಿಸಿಡಿ, ಎಕ್ಸ್ ರೇ ಟ್ಯೂಬ್‌ಗಳು ಸೇರಿದಂತೆ 25 ನಿರ್ಣಾಯಕ ಖನಿಜಗಳಿಗೆ ಕಸ್ಟಮ್ಸ್ ಸುಂಕದಿಂದ ವಿನಾಯಿತಿ ನೀಡಲಾಗುವುದು ಎಂದು ತಿಳಿಸಿದರು.
ಇದನ್ನೂ ಓದಿ: ಮುಂದಿನ 5 ವರ್ಷ 2 ಲಕ್ಷ ಕೋಟಿ ಉದ್ಯೋಗ ಸೃಷ್ಟಿಗೆ ಕೇಂದ್ರ ಬಜೆಟ್ ಒತ್ತು