ನವದೆಹಲಿ: ಕೇಂದ್ರದಲ್ಲಿ ಸತತ 3ನೇ ಅವಧಿಗೆ ಸರ್ಕಾರ ರಚನೆಗೆ ಹಕ್ಕು ಮಂಡಿಸುವ ಮುನ್ನ ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಬಿಜೆಪಿಯ ವರಿಷ್ಠ ನಾಯಕರಾದ ಎಲ್.ಕೆ.ಅಡ್ವಾಣಿ ಮತ್ತು ಮುರಳಿ ಮನೋಹರ್ ಜೋಷಿ ಅವರನ್ನು ಭೇಟಿ ಮಾಡಿದ್ದಾರೆ.
ಇತ್ತೀಚೆಗೆ ಮುಗಿದ ಲೋಕಸಭೆ ಚುನಾವಣಾ ಫಲಿತಾಂಶದಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಸರಳ ಬಹುಮತ ಪಡೆದಿದೆ. ಬಿಜೆಪಿ 240 ಸ್ಥಾನಗಳನ್ನು ಪಡೆದರೆ, ಒಟ್ಟಾರೆ ಎನ್‌ಡಿಎ ಮಿತ್ರಪಕ್ಷಗಳು 293 ಸ್ಥಾನಗಳನ್ನು ಗೆದ್ದಿವೆ.
ಇಂದು ಬೆಳಗ್ಗೆ ಹಳೆ ಸಂಸತ್ ಭವನದಲ್ಲಿ ಎನ್‌ಡಿಎ ನಾಯಕರು ಹಾಗೂ ಸಂಸದರ ಸಭೆ ನಡೆಯಿತು. ಈ ಸಭೆಯಲ್ಲಿ ಎನ್‌ಡಿಎ ಸಂಸದೀಯ ಪಕ್ಷದ ನಾಯಕರಾಗಿ, ಬಿಜೆಪಿ ಸಂಸದೀಯ ಪಕ್ಷದ ನಾಯಕರಾಗಿ ಮತ್ತು ಲೋಕಸಭೆಯಲ್ಲಿ ಬಿಜೆಪಿ ನಾಯಕರಾಗಿ ಮೋದಿ ಅವರನ್ನು ಆಯ್ಕೆ ಮಾಡಲಾಯಿತು.
ಇದರ ಬಳಿಕ ಮೋದಿ ಅವರು ಅಡ್ವಾಣಿ, ಜೋಶಿ ಹಾಗು ಮಾಜಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರ ನಿವಾಸಕ್ಕೆ ಭೇಟಿ ನೀಡಿದರು. ಇಂದು ರಾಷ್ಟ್ರಪತಿ ಭವನಕ್ಕೆ ತೆರಳಿ ಸರ್ಕಾರ ರಚಿಸುವ ಹಕ್ಕು ಮಂಡಿಸಲು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಮೋದಿ ಭೇಟಿ ಮಾಡುವ ನಿರೀಕ್ಷೆ ಇದೆ.
ಮೋದಿ ಮೂರನೇ ಬಾರಿಗೆ ಪ್ರಧಾನಿಯಾಗಿ ಜೂನ್ 9ರಂದು ಸಂಜೆ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಸಮಾರಂಭಕ್ಕೆ ನೆರೆ ರಾಷ್ಟ್ರಗಳಾದ ಬಾಂಗ್ಲಾದೇಶ, ಶ್ರೀಲಂಕಾ, ಭೂತಾನ್, ನೇಪಾಳ ಮತ್ತು ಮಾರಿಷಸ್ನ ನಾಯಕರಿಗೆ ಆಹ್ವಾನ ನೀಡಲಾಗಿದೆ.
ಇದನ್ನೂ ಓದಿ: ಎನ್‌ಡಿಎ ನಾಯಕರಾಗಿ ಮೋದಿ ಸರ್ವಾನುಮತದಿಂದ ಆಯ್ಕೆ: ಜೂನ್ 9ರಂದು 3ನೇ ಅವಧಿಗೆ ಪ್ರಧಾನಿಯಾಗಿ ಪ್ರಮಾಣ ಸ್ವೀಕಾರ