ನವದೆಹಲಿ: ಜಾಗತಿಕ ಅಭಿವೃದ್ಧಿ ಕಾರ್ಯಸೂಚಿ ಕುರಿತಾದ ಪ್ರಮುಖ ವಿಷಯಗಳಿಗೆ ಸಂಬಂಧಿಸಿದ ಸಂವಾದ ಮತ್ತು ಚರ್ಚೆಗೆ ಪ್ರಮುಖ ವೇದಿಕೆಯಾಗಿ ಬ್ರಿಕ್ಸ್ ಹೊರಹೊಮ್ಮಿದ್ದು, ಇದರೊಂದಿಗಿನ ಸಹಕಾರವನ್ನು ಭಾರತ ಗೌರವಿಸುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಬ್ರಿಕ್ಸ್ನ 16ನೇ ಶೃಂಗಸಭೆಯಲ್ಲಿ ಭಾಗಿಯಾಗುವುದಕ್ಕಾಗಿ ರಷ್ಯಾದ ಕಜಾನ್ ಪ್ರದೇಶಕ್ಕೆ ತೆರಳುವ ಮುನ್ನ ಅವರು ಈ ಕುರಿತು ಮಾತನಾಡಿದ್ದಾರೆ. ಕಳೆದ ವರ್ಷ ಬ್ರಿಕ್ಸ್ ಗೆ ಹೊಸ ಸದಸ್ಯರು ಸೇರುವ ಮೂಲಕ ಅದು ವಿಸ್ತರಣೆಯಾಗಿದೆ. ಇದು ಜಾಗತಿಕ ಒಳಿತು ಮತ್ತು ಒಳಗೊಳ್ಳುವಿಕೆಯ ಕಾರ್ಯಸೂಚಿ ಹೊಂದಿದೆ ಎಂದು ಅವರು ಇದೇ ವೇಳೆ ಬಣ್ಣಿಸಿದ್ದಾರೆ.
ರಷ್ಯಾ ಮತ್ತು ಉಕ್ರೇನ್ ನಡುವಿನ ಸಂಘರ್ಷದ ಪರಿಸ್ಥಿತಿಯಲ್ಲಿ ರಷ್ಯಾ ಈ ಶೃಂಗಸಭೆ ಆತಿಥ್ಯವಹಿಸಿದೆ. ಈ ಮೂಲಕ ಪಾಶ್ಚಿಮಾತ್ಯೇತರ ಶಕ್ತಿಗಳು ತಮ್ಮ ಪ್ರಭಾವ ಪ್ರದರ್ಶಿಸುವ ಪ್ರಯತ್ನವೆಂದು ಪರಿಗಣಿಸಲಾಗಿದೆ. ಈ ಶೃಂಗಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ರಷ್ಯಾ ಅಧ್ಯಕ್ಷ ವಾಡ್ಲಿಮಿರ್ ಪುಟಿನ್ ಮತ್ತು ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಸೇರಿದಂತೆ ಬ್ರಿಕ್ಸ್ ದೇಶಗಳ ನಾಯಕರ ಜೊತೆ ದ್ವಿಪಕ್ಷೀಯ ಸಭೆಗಳನ್ನು ನಡೆಸಲಿದ್ದಾರೆ.
ಕಳೆದ ವರ್ಷ ಜೋಹಾನ್ಸ್‌ಬರ್ಗ್‌ನಲ್ಲಿ ಶೃಂಗಸಭೆಯಲ್ಲಿ ಹಲವು ದೇಶಗಳ ಸೇರ್ಪಡೆಯೊಂದೊಗೆ ವಿಸ್ತರಿಸಿದ ಬಳಿಕ ನಡೆಯುತ್ತಿರುವ ಗುಂಪಿನ ಮೊದಲ ಸಭೆ ಇದಾಗಿದೆ.
ಬ್ರಿಕ್ಸ್ನೊಂದಿಗೆ ನಿಕಟ ಬಾಂಧವ್ಯ: ಶೃಂಗಸಭೆಯಲ್ಲಿ ಭಾಗಿಯಾಗುವುದಕ್ಕೆ ತೆರಳುವ ಮುನ್ನ ಎಕ್ಸ್ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿ, ಜಾಗತಿಕ ಅಭಿವೃದ್ಧಿ ಕಾರ್ಯಸೂಚಿ, ಸುಧಾರಿತ ಬಹುಪಕ್ಷೀಯತೆ, ಹವಾಮಾನ ಬದಲಾವಣೆ, ಆರ್ಥಿಕ ಸಹಕಾರ, ಸಾಂಸ್ಕೃತಿಕ ಮತ್ತು ಜನರನ್ನು ಸಂಪರ್ಕಿಸಲು ಉತ್ತೇಜಿಸುವ ವಿಷಯಗಳ ಕುರಿತು ಸಂವಾದ ಮತ್ತು ಚರ್ಚೆಗೆ ಪ್ರಮುಖ ವೇದಿಕೆಯಾಗಿ ಹೊರಹೊಮ್ಮಿರುವ ಬ್ರಿಕ್ಸ್‌ನೊಳಗಿನ ನಿಕಟ ಸಹಕಾರವನ್ನು ಭಾರತ ಗೌರವಿಸುತ್ತದೆ ಎಂದು ತಿಳಿಸಿದ್ದಾರೆ.
ಪ್ರಧಾನಿ ಕಜಾನ್ ಭೇಟಿಯು ಭಾರತ ಮತ್ತು ರಷ್ಯಾ ನಡುವಿನ ವಿಶೇಷ ಮತ್ತು ಮಾನ್ಯತಾ ಕಾರ್ಯತಂತ್ರದ ಪಾಲುದಾರಿಕೆಯನ್ನು ಬಲಪಡಿಸುತ್ತದೆ ಎಂದು ಮೋದಿ ತಿಳಿಸಿದ್ದಾರೆ. ಕಳೆದ ಜುಲೈನಲ್ಲಿ ಮಾಸ್ಕೋಗೆ ಭೇಟಿ ನೀಡಿದ್ದ ಪ್ರಧಾನಿ ಮೋದಿ ಅಲ್ಲಿ ಪುಟಿನ್ ಜೊತೆ ಸಂವಾದ ನಡೆಸಿದ್ದರು.
ಶೃಂಗಸಭೆಯಲ್ಲಿ ವಿಶಾಲ ಶ್ರೇಣಿಯ ವಿಚಾರಗಳ ಕುರಿತು ವಿಸ್ತೃತ ಚರ್ಚೆಯನ್ನು ಎದುರು ನೋಡುತ್ತಿರುವುದಾಗಿ ಪ್ರಧಾನಿ ಮೋದಿ ತಿಳಿಸಿದ್ದಾರೆ.
ಬ್ರಿಕ್ಸ್ ಎಂಬುದು ಭಾರತ, ಚೀನಾ, ರಷ್ಯಾ ಮತ್ತು ದಕ್ಷಿಣ ಅಫ್ರಿಕಾ ದೇಶಗಳ ಒಳಗೊಂಡ ಗುಂಪಾಗಿದೆ. ಕಳೆದ ವರ್ಷ ಇದಕ್ಕೆ ಈಜಿಪ್ಟ್, ಇಥಿಯೋಪಿಯಾ, ಇರಾನ್ ಮತ್ತು ಯುಎಇ ಸೇರ್ಪಡೆಯಾಗಿದೆ. (ಪಿಟಿಐ)
ಇದನ್ನೂ ಓದಿ: ಖಾನ್ ಮೇಲಿನ ಬಿಷ್ಣೋಯಿ ವೈಷಮ್ಯ ಕೊನೆಗೊಳಿಸಲು 5 ಕೋಟಿ ನೀಡುವಂತೆ ಬೆದರಿಕೆ ಹಾಕಿದ್ದ ವ್ಯಕ್ತಿಯಿಂದ ಕ್ಷಮೆಯಾಚನೆ!