ಮುಂಬೈ (ಮಹಾರಾಷ್ಟ್ರ): ಸೋಮವಾರ ರಾತ್ರಿ ನಗರದಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಮುಂಬೈನ ನಾಗರಿಕ ಸಾರಿಗೆ ಸಂಸ್ಥೆ ಬೆಸ್ಟ್‌ನ ಬಸ್ವೊಂದು ಪಾದಚಾರಿಗಳಿಗೆ ಮತ್ತು ವಾಹನಗಳಿಗೆ ಡಿಕ್ಕಿ ಹೊಡೆದಿದೆ. ಪರಿಣಾಮ ನಾಲ್ವರು ಸಾವನ್ನಪ್ಪಿದ್ದು, ಸುಮಾರು 25ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಈ ಬಗ್ಗೆ ಪೊಲೀಸರು ಮತ್ತು ಮುನ್ಸಿಪಲ್ ಕಾರ್ಪೊರೇಷನ್ ಅಧಿಕಾರಿಗಳು ಅಧಿಕೃತ ಮಾಹಿತಿ ನೀಡಿದ್ದಾರೆ.
BEST Bus Accident: ಕುರ್ಲಾದ ಬೃಹನ್‌ಮುಂಬೈ ಮುನಿಸಿಪಲ್ ಕಾರ್ಪೊರೇಷನ್ (ಬಿಎಂಸಿ) ಎಲ್ ವಾರ್ಡ್ ಬಳಿ ಬ್ರೇಕ್ ವೈಫಲ್ಯದಿಂದ ಈ ಅಪಘಾತ ಸಂಭವಿಸಿದೆ ಎಂದು ಶಂಕೆ ವ್ಯಕ್ತಪಡಿಸಿದ ಪೊಲೀಸರು ಬಸ್ ಚಾಲಕನನ್ನು ಬಂಧಿಸಿದ್ದಾರೆ. ಅಧಿಕಾರಿಗಳ ಪ್ರಕಾರ, ಮಾರ್ಗ ಸಂಖ್ಯೆ 332 ರ ಬೃಹನ್ಮುಂಬೈ ಎಲೆಕ್ಟ್ರಿಕ್ ಸಪ್ಲೈ ಅಂಡ್ ಟ್ರಾನ್ಸ್‌ಪೋರ್ಟ್ (ಬೆಸ್ಟ್) ಸಂಸ್ಥೆಯ ಬಸ್ ಚಾಲಕ ವಾಹನದ ಮೇಲೆ ನಿಯಂತ್ರಣ ಕಳೆದುಕೊಂಡು ಪಾದಚಾರಿಗಳಿಗೆ ಮತ್ತು ಕೆಲವು ವಾಹನಗಳಿಗೆ ಡಿಕ್ಕಿ ಹೊಡೆದಿದ್ದಾನೆ. ಬೆಸ್ಟ್ ಸಂಸ್ಥೆಯ ಬಸ್ ಪಾದಚಾರಿಗಳು ಮತ್ತು ವಾಹನಗಳಿಗೆ ಡಿಕ್ಕಿ ಹೊಡೆದ ನಂತರ ಬುದ್ಧ ಕಾಲೋನಿಯ ರೆಸಿಡೆನ್ಶಿಯಲ್ ಸೊಸೈಟಿಗೆ ಪ್ರವೇಶಿಸಿ ನಿಂತಿದೆ ಎಂದು ಅಧಿಕಾರಿ ತಿಳಿಸಿದರು.
ಬಸ್ ಕುರ್ಲಾ ರೈಲು ನಿಲ್ದಾಣದಿಂದ ಅಂಧೇರಿಗೆ ಹೋಗುತ್ತಿದ್ದಾಗ ಅಪಘಾತ ಸಂಭವಿಸಿದೆ. ಅಪಘಾತದಲ್ಲಿ ನಾಲ್ವರು ಸಾವನ್ನಪ್ಪಿದ್ದು, 25ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು. ಕೂಡಲೇ ಗಾಯಾಳುಗಳನ್ನು ಹತ್ತಿರದ ಭಾಭಾ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಗಾಯಗೊಂಡವರಲ್ಲಿ ಕೆಲವರ ಸ್ಥಿತಿ ಚಿಂತಾಜನಕವಾಗಿದೆ. ಅಪಘಾತದಲ್ಲಿ ಹಲವು ವಾಹನಗಳು ಜಖಂಗೊಂಡಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ರತ್ಯಕ್ಷದರ್ಶಿ ಝೀಶನ್ ಅನ್ಸಾರಿ ಪ್ರಕಾರ, ನಾನು ನನ್ನ ಸ್ನೇಹಿತರೊಂದಿಗೆ ರಾಯಲ್ ಸ್ವೀಟ್ಸ್ ಅಂಗಡಿಯ ಮುಂದೆ ನಿಂತಿದ್ದಾಗ ಬಸ್ ವೇಗವಾಗಿ ಚಲಿಸುತ್ತಿರುವುದು ನೋಡಿದೆ. ಬಳಿಕ ಬಸ್ ಏಕಾಏಕಿ ಅನೇಕ ವಾಹನಗಳು ಮತ್ತು ಪಾದಚಾರಿಗಳ ಮೇಲೆ ಹರಿದು ಬುದ್ಧ ಕಾಲೋನಿಯೊಳಗೆ ಪ್ರವೇಶಿಸಿತು. ಕೂಡಲೇ ನಾವು ಧಾವಿಸಿ ರಕ್ಷಣಾ ಕಾರ್ಯಾಚರಣೆ ಕೈಗೊಂಡೆವು. ಅನೇಕ ಜನರು ರಕ್ತದ ಮಡುವಿನಲ್ಲಿ ಬಿದ್ದಿದ್ದರು. ಜನಸಮೂಹವು ಸ್ಥಳದಲ್ಲಿ ಜಮಾಯಿಸಿ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲು ಪ್ರಾರಂಭಿಸಿತು ಎಂದು ಹೇಳಿದರು.
ಈ ಬಸ್ 12 ಮೀಟರ್ ಉದ್ದದ ಎಲೆಕ್ಟ್ರಿಕ್ ವಾಹನವಾಗಿದ್ದು, ಹೈದರಾಬಾದ್ ಮೂಲದ ಒಲೆಕ್ಟ್ರಾ ಗ್ರೀನ್‌ಟೆಕ್ ತಯಾರಿಸಿದೆ ಮತ್ತು ಇದನ್ನು ವೆಟ್ ಲೀಸ್‌ನಲ್ಲಿ ಬೆಸ್ಟ್ ಸಂಸ್ಥೆ ಖರೀದಿಸಿದೆ. ಇಂತಹ ಬಸ್‌ಗಳಿಗೆ ಚಾಲಕರನ್ನು ಖಾಸಗಿ ನಿರ್ವಾಹಕರು ಸರಬರಾಜು ಮಾಡುತ್ತಾರೆ ಎಂದು ಇನ್ನೊಬ್ಬ ಅಧಿಕಾರಿ ತಿಳಿಸಿದ್ದಾರೆ. ಇನ್ನು ಈ ಬಸ್ ಕೇವಲ ಮೂರು ತಿಂಗಳ ಹಳೆಯದು. ಇದನ್ನು ಈ ವರ್ಷ ಆಗಸ್ಟ್ 20 ರಂದು EVEY ಟ್ರಾನ್ಸ್ ಎಂಬ ಕಂಪನಿಯ ಹೆಸರಿನಲ್ಲಿ ನೋಂದಾಯಿಸಲಾಗಿದೆ ಎಂದು Tardeo ಪ್ರಾದೇಶಿಕ ಸಾರಿಗೆ ಕಚೇರಿ (RTO) ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಓದಿ: ವಯನಾಡ್ ದುರಂತದಲ್ಲಿ ಇಡೀ ಕುಟುಂಬ, ಅಪಘಾತದಲ್ಲಿ ಭಾವಿ ಪತಿಯನ್ನೂ ಕಳೆದುಕೊಂಡ ಯುವತಿಗೆ ಸಿಕ್ತು ಸರ್ಕಾರಿ ಉದ್ಯೋಗ