ನವದೆಹಲಿ: ಬಹುನಿರೀಕ್ಷಿತ ಲೋಕಸಭೆ ಚುನಾವಣೆಯ ದಿನಾಂಕ, ವೇಳಾಪಟ್ಟಿ ಪ್ರಕಟಗೊಂಡಿದೆ. ದೇಶದ 543 ಲೋಕಸಭೆ ಸ್ಥಾನಗಳಿಗೆ ಏಳು ಹಂತಗಳಲ್ಲಿ ಚುನಾವಣೆ ನಡೆದರೆ, ಕರ್ನಾಟಕದ 28 ಲೋಕಸಭಾ ಕ್ಷೇತ್ರಗಳಿಗೆ ಎರಡು ಹಂತದಲ್ಲಿ ಮತದಾನ ನಡೆಯಲಿದೆ.
28 ಕ್ಷೇತ್ರಗಳ ಪೈಕಿ 14 ಕ್ಷೇತ್ರಗಳಿಗೆ ಒಂದು ಹಂತದಲ್ಲಿ, ಇನ್ನುಳಿದ 14 ಕ್ಷೇತ್ರಗಳಿಗೆ ಇನ್ನೊಂದು ಹಂತದಲ್ಲಿ ಮತದಾನ ನಡೆಯಲಿದೆ. ಮೊದಲ ಹಂತದ ಚುನಾವಣೆ ಏಪ್ರಿಲ್ 26, ಶುಕ್ರವಾರದಂದು ನಡೆಯಲಿದ್ದು, ಎರಡನೇ ಹಂತದ ಚುನಾವಣೆ ಮೇ 7, ಮಂಗಳವಾರದಂದು ನಡೆಯಲಿದೆ. ಇಂದಿನಿಂದ ಚುನಾವಣಾ ಮಾದರಿ ನೀತಿ ಸಂಹಿತೆ ಕೂಡ ಜಾರಿ ಆಗಿದೆ ಎಂದು ಕೇಂದ್ರ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ನವದೆಹಲಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ್ದಾರೆ. ನೂತನ ಚುನಾವಣಾ ಆಯುಕ್ತರಾಗಿ ನೇಮಕಕೊಂಡ ಜ್ಞಾನೇಶ್ ಕುಮಾರ್ ಮತ್ತು ಸುಖ್‌ಬೀರ್ ಸಿಂಗ್ ಸಂಧು ಕೂಡ ಸುದ್ದಿಗೋಷ್ಠಿಯಲ್ಲಿದ್ದರು.
ಲೋಕಸಭೆ ಚುನಾವಣೆ ಸಂಬಂಧ ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿದ ಕರ್ನಾಟಕ ಮುಖ್ಯ ಚುನಾವಣಾಧಿಕಾರಿಗಳು, ನೀತಿ ಸಂಹಿತೆ, ಭದ್ರತೆ, ಬಂದೋಬಸ್ತ್, ತಯಾರಿ ಬಗ್ಗೆ ವಿವರಣೆ ನೀಡಿದರು. ಕರ್ನಾಟಕದಲ್ಲಿ 2 ಹಂತದಲ್ಲಿ ಲೋಕಸಭಾ ಚುನಾವಣೆ ನಡೆಯಲಿದೆ. ಕರ್ನಾಟಕದ 28 ಲೋಕಸಭಾ ಕ್ಷೇತ್ರಗಳ ಪೈಕಿ ಮೊದಲ ಹಂತದಲ್ಲಿ 14 ಕ್ಷೇತ್ರಗಳು, ಎರಡನೇ ಹಂತದಲ್ಲಿ 14 ಕ್ಷೇತ್ರಗಳಲ್ಲಿ ಚುನಾವಣೆ ನಡೆಯಲಿದೆ. ಮೊದಲ ಹಂತದಲ್ಲಿ ಏಪ್ರಿಲ್ 26 ರಂದು 14 ಕ್ಷೇತ್ರಗಳಿಗೆ, ಎರಡನೇ ಹಂತದಲ್ಲಿ ಮೇ 07 ರಂದು 14 ಕ್ಷೇತ್ರಗಳಿಗೆ ಮತದಾನ ನಡೆಯಲಿದೆ. ಫಲಿತಾಂಶ ಜೂನ್ 04 ರಂದು ಬರಲಿದೆ.
ರಾಜ್ಯದಲ್ಲಿ ಮೊದಲ ಹಂತದ ಮತದಾನ ಏಪ್ರಿಲ್ 26 ರಂದು ನಡೆಯಲಿದ್ದು, ಚುನಾವಣೆಗೆ ಅಧಿಸೂಚನೆ ಮಾ.28ಕ್ಕೆ ಹೊರಡಿಸಲಾಗುವುದು. ನಾಮಪತ್ರ ಸಲ್ಲಿಕೆಗೆ ಕೊನೆ ದಿನ ಏ.4 ಇರಲಿದೆ. ನಾಮಪತ್ರ ಹಿಂಪಡೆಯುವ ಕೊನೆ ದಿನ ಏ.8 ಇರಲಿದೆ. ಇನ್ನು, ಎರಡನೇ ಹಂತದ ಚುನಾವಣಾ ಪ್ರಕ್ರಿಯೆಗೆ ಅಧಿಸೂಚನೆ ಏಪ್ರಿಲ್ 12 ರಂದು ಪ್ರಕಟವಾಗಲಿದ್ದು, ನಾಮಪತ್ರ ಸಲ್ಲಿಕೆಗೆ ಏಪ್ರಿಲ್ 19 ಕೊನೆಯ ದಿನವಾಗಿರುತ್ತದೆ. ಏಪ್ರಿಲ್ 20 ರಂದು ನಾಮಪತ್ರ ಪರಿಶೀಲನೆ ನಡೆದರೆ, ನಾಮಪತ್ರ ವಾಪಸ್ ತೆಗೆದುಕೊಳ್ಳಲು ಏಪ್ರಿಲ್ 22 ಕೊನೆಯ ದಿನವಾಗಿರುತ್ತದೆ ಎಂದು ಅವರು ಮಾಹಿತಿ ನೀಡಿದ್ದಾರೆ.
26 ವಿಧಾನಸಭಾ ಕ್ಷೇತ್ರಗಳ ಪೈಕಿ ಕರ್ನಾಟಕದ ಒಂದು ಕ್ಷೇತ್ರಕ್ಕೆ ಉಪ ಚುನಾವಣೆ ನಡೆಯಲಿದೆ. ಸುರಪುರ ಶಾಸಕ ರಾಜಾ ವೆಂಕಟಪ್ಪ ನಾಯಕ್ ಅಕಾಲಿಕ ನಿಧನ ಹಿನ್ನೆಲೆ ತೆರವಾದ ಕ್ಷೇತ್ರಕ್ಕೆ ಎರಡನೇ ಹಂತದಲ್ಲಿ ಉಪ ಚುನಾವಣೆ ನಡೆಯಲಿದೆ. ಮೇ 7ರಂದು ಮತದಾನ ನಡೆಯಲಿದ್ದು, ಜೂನ್ 4ರಂದು ಇದರ ಫಲಿತಾಂಶ ಪ್ರಕಟವಾಗಲಿದೆ.
ಮೊದಲ ಹಂತದ ಕ್ಷೇತ್ರಗಳು - ಮತದಾನ - ಏಪ್ರಿಲ್ 26
- ಉಡುಪಿ ಚಿಕ್ಕಮಗಳೂರು
- ಹಾಸನ
- ದಕ್ಷಿಣ ಕನ್ನಡ
- ಚಿತ್ರದುರ್ಗ
- ತುಮಕೂರು
- ಮಂಡ್ಯ
- ಮೈಸೂರು
- ಚಾಮರಾಜನಗರ
- ಬೆಂಗಳೂರು ಗ್ರಾಮಾಂತರ
- ಬೆಂಗಳೂರು ಉತ್ತರ
- ಬೆಂಗಳೂರು ಕೇಂದ್ರ
- ಬೆಂಗಳೂರು ದಕ್ಷಿಣ
- ಚಿಕ್ಕಬಳ್ಳಾಪುರ
- ಕೋಲಾರ
2ನೇ ಹಂತದ ಲೋಕಸಭಾ ಕ್ಷೇತ್ರಗಳು - ಮತದಾನ - ಮೇ -7
- ಚಿಕ್ಕೋಡಿ
- ಬೆಳಗಾವಿ
- ಬಾಗಲಕೋಟೆ
- ವಿಜಯಪುರ
- ಕಲಬುರಗಿ
- ರಾಯಚೂರು
- ಬೀದರ್
- ಕೊಪ್ಪಳ
- ಬಳ್ಳಾರಿ
- ಹಾವೇರಿ
- ಧಾರವಾಡ
- ಉತ್ತರ ಕನ್ನಡ
- ದಾವಣಗೆರೆ
- ಶಿವಮೊಗ್ಗ
ಇದನ್ನೂ ಓದಿ: ಲೋಕ ಸಮರಕ್ಕೆ ಕರ್ನಾಟಕದಲ್ಲಿ 2 ಹಂತ: ನಿಮ್ಮ ಕ್ಷೇತ್ರದಲ್ಲಿ ಯಾವಾಗ ಮತದಾನ ನೋಡಿ