ಲಖನೌ (ಉತ್ತರ ಪ್ರದೇಶ): ದೇಶದಲ್ಲಿ ಅತಿದೊಡ್ಡ ಉತ್ತರ ಪ್ರದೇಶದಲ್ಲಿ ಆಡಳಿತಾರೂಢ ಬಿಜೆಪಿಗೆ ಈ ಬಾರಿ ದೊಡ್ಡ ಆಘಾತ ನೀಡಿದ್ದಾರೆ. 80 ಕ್ಷೇತ್ರಗಳ ಪೈಕಿ ಬಿಜೆಪಿ 35, ಎನ್‌ಡಿಎ ಮಿತ್ರ ಪಕ್ಷಗಳಾದ ಆರ್ಎಲ್ಡಿ 2 ಕಡೆ, ಅಪ್ನಾ ದಳ 1 ಕಡೆ ಮುನ್ನಡೆ ಸಾಧಿಸಿದೆ. ಮತ್ತೊಂದೆಡೆ, ಕಾಂಗ್ರೆಸ್ (7) ಹಾಗೂ ಸಮಾಜವಾದಿ ಪಕ್ಷ (35)ದ 'ಇಂಡಿಯಾ' ಮೈತ್ರಿಕೂಟವು ಒಟ್ಟಾರೆ 42 ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ.
ಉತ್ತರ ಪ್ರದೇಶದಲ್ಲಿ ಪ್ರಧಾನಿ ಮೋದಿ ಹೊರತುಪಡಿಸಿ 11 ಕೇಂದ್ರ ಸಚಿವರು ಕಣದಲ್ಲಿದ್ದಾರೆ. ಈ ಪೈಕಿ ಮೂವರು ಮಾತ್ರ ಮುನ್ನಡೆಯಲ್ಲಿದ್ದಾರೆ. ವಾರಾಣಸಿಯಲ್ಲಿ ಪ್ರಧಾನಿ ಮೋದಿ (1,44,359 ಅಂತರ), ಲಖನೌದಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ (44,845 ಅಂತರ), ಮಹಾರಾಜ್ ಗಂಜ್ ಕ್ಷೇತ್ರದಲ್ಲಿ ಪಂಕಜ್ ಚೌಧರಿ (78,353 ಅಂತರ), ಆಗ್ರಾದಲ್ಲಿ ಎಸ್.ಪಿ.ಸಿಂಗ್ ಬಾಘೆಲ್ (1,42,851 ಅಂತರ) ಮುನ್ನಡೆಯಲ್ಲಿದ್ದಾರೆ.
ಉಳಿದಂತೆ 8 ಜನ ಕೇಂದ್ರ ಸಚಿವರಿಗೆ ಮತದಾರರು ಶಾಕ್ ನೀಡಿದ್ದಾರೆ. ಅಮೇಥಿಯಲ್ಲಿ ಸ್ಮೃತಿ ಇರಾನಿ ಅವರು ಕಾಂಗ್ರೆಸ್‌ನ ಕೆ.ಎಲ್.ಶರ್ಮಾ ಅವರಿಗಿಂತ ಸುಮಾರು 1,04,809 ಮತಗಳಿಂದ ಹಿನ್ನಡೆ ಅನುಭವಿಸಿದ್ದಾರೆ. ಅದೇ ರೀತಿಯಾಗಿ ಫತೇಪುರ್ ಕ್ಷೇತ್ರದಲ್ಲಿ ಸಾಧ್ವಿ ನಿರಂಜನ್ ಜ್ಯೋತಿ, ಚಂದೌಲಿಯಲ್ಲಿ ಮಹೇಂದ್ರ ನಾಥ್ ಪಾಂಡೆ, ಮುಜಾಫರ್‌ನಗರದಲ್ಲಿ ಸಂಜೀವ್ ಕುಮಾರ್ ಬಲ್ಯಾನ್, ಮಿರ್ಜಾಪುರದಲ್ಲಿ ಅನುಪ್ರಿಯಾ ಪಟೇಲ್, ಜಲೌನ್‌ನಲ್ಲಿ ಭಾನು ಪ್ರತಾಪ್ ಸಿಂಗ್ ವರ್ಮಾ ಹಾಗೂ ಖೇರಿ ಕ್ಷೇತ್ರದಲ್ಲಿ ಅಜಯ್ ಮಿಶ್ರಾ ಭಾರಿ ಹಿನ್ನಡೆಯಲ್ಲಿದ್ದಾರೆ.
ಮೇನಕಾ ಗಾಂಧಿಗೂ ಹಿನ್ನಡೆ: ಇದೇ ವೇಳೆ, ಸುಲ್ತಾನ್‌ಪುರ ಕ್ಷೇತ್ರದಲ್ಲಿ ಬಿಜೆಪಿಯ ಹಿರಿಯ ನಾಯಕಿ ಮೇನಕಾ ಗಾಂಧಿ ಅವರೂ ಹಿನ್ನೆಡೆ ಅನುಭವಿಸಿದ್ದಾರೆ. ಅಯೋಧ್ಯೆ ಜಿಲ್ಲೆಯ ಫೈಜಾಬಾದ್ ಕ್ಷೇತ್ರದಲ್ಲಿ ಬಿಜೆಪಿಯ ಲಲ್ಲು ಸಿಂಗ್ ಸಹ ಹಿನ್ನಡೆ ಕಂಡಿದ್ದಾರೆ. ಮತ್ತೊಂದೆಡೆ, ಮೀರತ್‌ನಲ್ಲಿ ನಟ ಅರುಣ್ ಗೋವಿಲ್ ಹಿನ್ನಡೆ ಸಾಧಿಸಿದ್ದಾರೆ.
ಮಥುರಾ ಕ್ಷೇತ್ರದಲ್ಲಿ ಬಿಜೆಪಿ ಹಾಲಿ ಸಂಸದೆ, ಖ್ಯಾತ ನಟಿ ಹೇಮಾ ಮಾಲಿನಿ ಮುನ್ನಡೆಯಲ್ಲಿದ್ದಾರೆ. ಭಾರತೀಯ ಕುಸ್ತಿ ಒಕ್ಕೂಟದ ಮಾಜಿ ಮುಖ್ಯಸ್ಥ, ಹಾಲಿ ಸಂಸದ ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರ ಪುತ್ರ ಕರಣ್ ಭೂಷಣ್ ಸಿಂಗ್ ಕೈಸರ್ ಗಂಜ್ ಕ್ಷೇತ್ರದಲ್ಲಿ ಮುನ್ನಡೆ ಸಾಧಿಸಿದ್ದಾರೆ. ಸಂತ ಕಬೀರ್ ನಗರದಲ್ಲಿ ಎನ್‌ಡಿಎ ಮೈತ್ರಿಕೂಟದ ನಿಶಾದ್ ಪಕ್ಷದ ಮುಖ್ಯಸ್ಥ ಸಂಜಯ್ ನಿಶಾದ್ ಅವರ ಪುತ್ರ ಪ್ರವೀಣ್ ನಿಶಾದ್ (ಬಿಜೆಪಿ ಅಭ್ಯರ್ಥಿ), ಘೋಸಿ ಕ್ಷೇತ್ರದಲ್ಲಿ ಸುಹೇಲ್‌ದೇವ್ ಭಾರತೀಯ ಸಮಾಜ ಪಕ್ಷದ ಮುಖ್ಯಸ್ಥ ಓಂ ಪ್ರಕಾಶ್ ರಾಜ್‌ಭರ್ ಸಹ ಹಿನ್ನಡೆ ಅನುಭವಿಸುತ್ತಿದ್ದಾರೆ.
ಇದನ್ನೂ ಓದಿ: ರಾಯ್ ಬರೇಲಿ: ತಾಯಿ ಸೋನಿಯಾ ಗೆಲುವಿನ ಅಂತರವನ್ನೂ ಮೀರಿ ಮುನ್ನಡೆದ ರಾಹುಲ್