ಕಾಶಿಪುರ (ಉತ್ತರಾಖಂಡ): ದೇಶದ ಮಹಿಳಾ ಮತದಾರರು ತಮ್ಮ ಕರ್ತವ್ಯದ ಬಗ್ಗೆ ಎಷ್ಟು ಜಾಗೃತರಾಗಿದ್ದಾರೆ ಎಂಬುದಕ್ಕೆ ಉತ್ತರಾಖಂಡದಲ್ಲಿ ಎರಡು ಘಟನೆ ಸಾಕ್ಷಿಯಾಗಿವೆ. ಅಲ್ಲಿ ಮದುವೆಯ ಸಂದರ್ಭದಲ್ಲೂ ಇಬ್ಬರು ವಧು ತಮ್ಮ ಅತ್ತೆಯ ಮನೆಗೆ ತೆರಳುವ ಮುನ್ನವೇ ಮತಗಟ್ಟೆಗೆ ಆಗಮಿಸಿ ಮತದಾನ ಮಾಡಿದರು.
ಲೋಕಸಭೆ ಚುನಾವಣೆ 2024ರ ಮೊದಲ ಹಂತದ ಮತದಾನ ನಡೆಯುತ್ತಿದೆ. ಉತ್ತರಾಖಂಡದ ಎಲ್ಲ ಐದು ಕ್ಷೇತ್ರಗಳಲ್ಲಿ ಬೆಳಗ್ಗೆಯಿಂದಲೇ ಮತದಾನ ನಡೆಯುತ್ತಿದೆ. ಮತಗಟ್ಟೆಗಳ ಹೊರಗೆ ಜನರು ಉದ್ದನೆಯ ಸರತಿ ಸಾಲಿನಲ್ಲಿ ನಿಂತಿದ್ದಾರೆ. ಪ್ರಜಾಪ್ರಭುತ್ವ ಹಬ್ಬದ ಈ ಆಚರಣೆಯಲ್ಲಿ ಎಲ್ಲರೂ ಉತ್ಸಾಹದಿಂದ ಪಾಲ್ಗೊಳ್ಳುತ್ತಿದ್ದಾರೆ. ಮದುವೆ ಕಾರ್ಯಕ್ರಮ ಬಳಿಕ, ಇಬ್ಬರು ವಧು ತಮ್ಮ ಅತ್ತೆಯ ಮನೆಗೆ ತೆರಳುವ ಮೊದಲು ಮತದಾನ ಮಾಡಿದ್ದಾರೆ.
ಕಾಶಿಪುರದ ಮೊಹಲ್ಲಾ ಕನುಂಗೋಯನ್ ನಿವಾಸಿ ರಾಜೀವ್ ಕುಮಾರ್ ಅವರ ಪುತ್ರಿ 23 ವರ್ಷದ ದೀಕ್ಷಾ ಡೆಹ್ರಾಡೂನ್ ನಿವಾಸಿ ಅನ್ಶುಲ್ ಅವರನ್ನು ವಿವಾಹವಾಗಿದ್ದಾರೆ. ನಿನ್ನೆ ಅನ್ಶುಲ್ ಮದುವೆ ಕಾರ್ಯಕ್ರಮಕ್ಕಾಗಿ ಕಾಶಿಪುರ ತಲುಪಿದ್ದರು. ಮದುವೆ ಸಮಾರಂಭದ ಎಲ್ಲಾ ವಿಧಿವಿಧಾನಗಳು ಏಪ್ರಿಲ್ 19 ರಂದು (ಶುಕ್ರವಾರ) ಬೆಳಗ್ಗೆ ಪೂರ್ಣಗೊಂಡಿತು. ವಧು ದೀಕ್ಷಾ ತಮ್ಮ ಅತ್ತೆಯ ಮನೆಗೆ ಹೋಗಬೇಕಾಗಿತ್ತು.
ಆದರೆ, ದೀಕ್ಷಾ ತನ್ನ ಪತಿ ಅಂಶುಲ್ ಮತ್ತು ಇತರ ಕುಟುಂಬ ಸದಸ್ಯರೊಂದಿಗೆ ಮತಗಟ್ಟೆಗೆ ತೆರಳಿ ಮತ ಚಲಾಯಿಸಿದರು. ಮತ ಚಲಾಯಿಸಿದ ನಂತರ ದೀಕ್ಷಾ ಅವರಿಗೆ ತವರು ಮನೆಯಿಂದ ಗಂಡನ ಮನೆಗೆ ಬೀಳ್ಕೊಡಲಾಯಿತು. ಈ ವೇಳೆ ಮಾತನಾಡಿದ ವರ ಅನ್ಶುಲ್ ಅವರು, ನಾನೂ ಕೂಡ ಡೆಹ್ರಾಡೂನ್ ಗೆ ಹೋಗಿ ಮೊದಲು ಮತ ಹಾಕುತ್ತೇನೆ ಎಂದು ಹೇಳಿದ್ದಾರೆ. ನವ ಜೋಡಿಯ ಈ ಕಾರ್ಯಕ್ಕೆ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ವೋಟ್ ಹಾಕಿದ ವಧು ಸೋನಾಲಿ: ಮತ್ತೊಂದೆಡೆ, ಗರ್ವಾಲ್ ಲೋಕಸಭಾ ಕ್ಷೇತ್ರದ ಕೋಟ್ ಡೆವಲಪ್‌ಮೆಂಟ್ ಬ್ಲಾಕ್‌ನಲ್ಲಿ, ವಧು ತನ್ನ ಅತ್ತೆಯ ಮನೆಗೆ ತೆರಳುವ ಮೊದಲು ಮತ ಚಲಾಯಿಸಿ ಪ್ರಜಾಪ್ರಭುತ್ವದ ಹಬ್ಬದಲ್ಲಿ ಭಾಗವಹಿಸಿದರು. ವಧು ಸೋನಾಲಿ ರಣಕೋಟ್‌ನ ಸರ್ಕಾರಿ ಆದರ್ಶ ಪ್ರಾಥಮಿಕ ಶಾಲೆಯಲ್ಲಿರುವ ಮತಗಟ್ಟೆಗೆ ಆಗಮಿಸಿ ಮತದಾನ ಮಾಡಿದರು.
ಉತ್ತರಾಖಂಡದಲ್ಲಿ ಸುಮಾರು 85 ಲಕ್ಷ ಮತದಾರರಿದ್ದು, ಇಂದು 55 ಅಭ್ಯರ್ಥಿಗಳ ಭವಿಷ್ಯವನ್ನು ನಿರ್ಧರಿಸಲಿದ್ದಾರೆ. ಇದರ ಫಲಿತಾಂಶ ಜೂನ್ 4 ರಂದು ಬರಲಿದೆ. ಕಳೆದ ಹಲವು ದಿನಗಳಿಂದ ಮತದಾರರಿಗೆ ಮತದಾನದ ಕುರಿತು ಜಾಗೃತಿ ಮೂಡಿಸುವ ಕಾರ್ಯದಲ್ಲಿ ಚುನಾವಣಾ ಆಯೋಗ ನಿರತವಾಗಿತ್ತು.
ಮತದಾನ ಮಾಡಿದ ನವ ದಂಪತಿ: ಜಮ್ಮು ಮತ್ತು ಕಾಶ್ಮೀರ್ದ ಉಧಮ್ಪುರ್ದಲ್ಲಿ ವಿವಾಹ ಕಾರ್ಯಕ್ರಮ ನೆರವೇರಿದ ನಂತರ, ನವ ದಂಪತಿ ತಮ್ಮ ಮತದಾನದ ಹಕ್ಕು ಚಲಾಯಿಸಿದರು. ವಧು ರಾಧಿಕಾ ಶರ್ಮಾ ಮಾತನಾಡಿ, ''ನಿನ್ನೆ ನಮ್ಮ ವಿವಾಹ ಸಮಾರಂಭ ನಡೆಯಿತು. ಮತ್ತು ಇಂದು ಅತ್ತೆಯ ಮನೆಗೆ ಹೋಗುವ ಹಿನ್ನೆಲೆ ನಡೆದ ವಿಧಿವಿಧಾನಗಳ ನಂತರ, ನಾನು ನನ್ನ ಪತಿಗೆ ನಮ್ಮ ಮತವನ್ನು ಚಲಾಯಿಸಬೇಕು ಎಂದು ಹೇಳಿದೆ. ತಮ್ಮ ವೋಟ್ ಅನ್ನು ವ್ಯರ್ಥ ಮಾಡಬಾರದು ಎಂದು ನಾನು ಎಲ್ಲರಿಗೂ ತಿಳಿಸುತ್ತೇನೆ" ಎಂದು ಹೇಳಿದರು.
ಮತ ಹಾಕಿದ ವಿಶ್ವದ ಅತ್ಯಂತ ಕುಬ್ಜ ಮಹಿಳೆ: ವಿಶ್ವದ ಅತ್ಯಂತ ಕುಬ್ಜ ಮಹಿಳೆ ಜ್ಯೋತಿ ಅಮ್ಗೆ ಮಹಾರಾಷ್ಟ್ರದ ನಾಗ್ಪುರದ ಮತಗಟ್ಟೆಯಲ್ಲಿ ಮತದಾನ ಮಾಡಿದರು. ಜ್ಯೋತಿ ಅಮ್ಗೆ ಅವರು ಪ್ರಜಾಪ್ರಭುತ್ವ ಹಬ್ಬದಲ್ಲಿ ಉತ್ಸಾಹದಿಂದ ಪಾಲ್ಗೊಂಡರು.
ಬೈಕ್ ಏರಿ ಬಂದು ವೋಟ್ ಹಾಕಿದ ಪುದುಚೇರಿ ಸಿಎಂ: ಬೈಕ್ ಚಲಾಯಿಸಿಕೊಂಡು ಬಂದ ಪುದುಚೇರಿ ಸಿಎಂ ಎನ್.ರಂಗಸಾಮಿ ವೋಟ್ ಹಾಕಿದರು. ಪುದುಚೇರಿಯ ದೇಲಾರ್ಶಪೇಟ್‌ನಲ್ಲಿರುವ ಮತಗಟ್ಟೆಯಲ್ಲಿ ಎನ್.ರಂಗಸಾಮಿ ಅವರು ಮತ ಚಲಾಯಿಸಿದರು. ಪುದುಚೇರಿ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ವಿ. ವೈತಿಲಿಂಗನ್ ಮತ್ತು ಬಿಜೆಪಿಯ ಎ. ನಮಸ್ಶಿವಾಯಂ ಕಣದಲ್ಲಿದ್ದಾರೆ.