ತಿರುವನಂತಪುರಂ: ಮತದಾನ ಪ್ರತಿಯೊಬ್ಬರ ಹಕ್ಕು. ಮತ ಚಲಾಯಿಸಿ ಸೂಕ್ತ ಅಭ್ಯರ್ಥಿ ಆಯ್ಕೆ ಎಲ್ಲರ ಆದ್ಯ ಕರ್ತವ್ಯ. ಆದರೂ ಕೆಲವರು ನೆಪ ಹೇಳಿ ಮತಗಟ್ಟೆಗಳತ್ತ ತಲೆಹಾಕದೇ ನುಣುಚಿಕೊಳ್ಳುತ್ತಾರೆ. ಆದರೆ ಇಲ್ಲೊಬ್ಬ ಯುವಕನಿಗೆ ಎರಡೂ ಕೈಗಳಿಲ್ಲ. ಕಾಲುಗಳಿದ್ದರೂ ನಡೆಯಲು ಆಗಲ್ಲ. ಆದರೂ ಸಹ ಮತಗಟ್ಟೆಗೆ ಬಂದು ಮೂಗಿನ ಮೂಲಕ ಮತದಾನದ ಬಟನ್ ಒತ್ತಿ ಹಕ್ಕು ಚಲಾಯಿಸಿದ್ದಾರೆ.
ಈ ವಿಶೇಷಚೇತನ ಯುವಕನ ಹೆಸರು ಅಜೀಮ್. ಕೇರಳದ ವೆಲಿಮನ್ ನಿವಾಸಿ. 90ರಷ್ಟು ಪ್ರತಿಶತ ವಿಶೇಷಚೇತನನಾಗಿರುವ ಈ ಯುವಕನಿಗೆ ಈಗ 18 ವರ್ಷ ವಯಸ್ಸು. ಇದರಿಂದಾಗಿ ಇದೇ ಮೊದಲ ಬಾರಿಗೆ ಮತಹಕ್ಕು ಪಡೆದಿದ್ದರು. ಇನ್ನು ಸಾಮಾನ್ಯವಾಗಿ ಕೈ ಬೆರಳಿಗೆ ಮತದಾನದ ಇಂಕ್ ಹಾಕುತ್ತಾರೆ. ಈ ಯುವಕನಿಗೆ ಕೈ ಇಲ್ಲದಿದ್ದರಿಂದ ಅಧಿಕಾರಿಗಳ ನಡೆ ಬಗ್ಗೆ ಕುತೂಹಲ ಮೂಡಿತ್ತು. ಆದರೆ, ಅಧಿಕಾರಿಗಳು ಕಾಲಿನ ಹೆಬ್ಬೆರಳಿಗೆ ಮಸಿ ಹಾಕಿದ್ದಾರೆ. ಬಳಿಕ ಮೂಗಿನ ಮೂಲಕ ಯುವಕ ಮತದಾನ ಮಾಡಿ ಗಮನ ಸೆಳೆದಿದ್ದಾನೆ.
ವ್ಹೀಲ್ ಚೇರ್ನಲ್ಲಿ ಪ್ರಯಾಣ: ಲೋಕಸಭೆ ಚುನಾವಣೆಯ ಎರಡನೇ ಹಂತದ ಮತದಾನದ ಹಿನ್ನೆಲೆಯಲ್ಲಿ ಕೇರಳದ ಕೊಯಿಕ್ಕೋಡ್ ಜಿಲ್ಲೆಯ ವೆಲಿಮನ್ ಸರ್ಕಾರಿ ಶಾಲೆಯ ಮತಗಟ್ಟೆಯಲ್ಲಿ ಅಜೀಮ್ ಇದೇ ಮೊದಲ ಬಾರಿಗೆ ಶುಕ್ರವಾರ ಮತಹಕ್ಕು ಚಲಾಯಿಸಿದರು. ಅಜೀಮ್ಗೆ ಕೈಗಳು ಇಲ್ಲ. ಜೊತೆಗೆ ಕಾಲು, ದವಡೆ ಹಲ್ಲು, ಬಾಯಿಯಲ್ಲೂ ಸಮಸ್ಯೆ ಇದೆ. ಅಂತೆಯೇ ನಡೆದಾಡುವ ಸ್ಥಿತಿಯೂ ಇಲ್ಲ. ಆದ್ದರಿಂದ ವ್ಹೀಲ್ ಚೇರ್ನಲ್ಲಿ ಪ್ರಯಾಣಿಸುತ್ತಾರೆ. ಇಷ್ಟೆಲ್ಲ ದೈಹಿಕ ಸಮಸ್ಯೆಗಳಿದ್ದರೂ ಕೂಡ ಮತಗಟ್ಟೆಗೆ ಬಂದು ಮೂಗಿನಿಂದ ಇವಿಎಂ ಬಟನ್ ಒತ್ತುವ ಮೂಲಕ ಮಾದರಿಯಾಗಿದ್ದಾರೆ.
ಶ್ರದ್ಧೆ, ಆತ್ಮವಿಶ್ವಾಸವೇ ಅಜೀಮ್ ಶಕ್ತಿ: ದೈಹಿಕವಾಗಿ ಸಮಸ್ಯೆಗಳಿದ್ದರೂ ಕೂಡ ಅಜೀಮ್ನಲ್ಲಿ ಆತ್ಮವಿಶ್ವಾಸ, ಶ್ರದ್ಧೆಗೆ ಕೊರತೆ ಇಲ್ಲ. ಇದಕ್ಕೆ ನಿದರ್ಶನವೆಂಬಂತೆ ಇಂಟರ್ನ್ಯಾಷನಲ್ ಚಿಲ್ಡ್ರನ್ಸ್ ಪೀಸ್ ಅವಾರ್ಡ್ ಸ್ಪರ್ಧೆಯಲ್ಲಿ ಫೈನಲಿಸ್ಟ್ ಹಂತ ತಲುಪಿದ್ದರು. ಪ್ಯಾರಾ ಈಜು ಚಾಂಪಿಯನ್ಶಿಪ್ನಲ್ಲಿ ಚಿನ್ನದ ಪದಕ ಪಡೆದಿದ್ದಾರೆ. ಅಷ್ಟೇ ಅಲ್ಲ ಉಜ್ವಲ್ ಬಾಲ್ಯಂ ಮತ್ತು ಬಾಲ ಸಾಧಕ ಪ್ರಶಸ್ತಿಗಳನ್ನು ಕೊರಳಿಗೇರಿಸಿಕೊಂಡಿದ್ದಾರೆ.
ಅಜೀಮ್ ತಾನು ಓದಿದ ವೆಲಿಮನ್ ಹಿರಿಯ ಪ್ರಾಥಮಿಕ ಶಾಲೆಯನ್ನು ಪ್ರೌಢಶಾಲೆಯಾಗಿ ಮೇಲ್ದರ್ಜೆಗೇರಿಸಬೇಕು ಎಂದು ಸುಪ್ರೀಂ ಕೋರ್ಟ್ನಲ್ಲಿ ಕಾನೂನು ಹೋರಾಟಕ್ಕೂ ಮುಂದಾಗಿದ್ದಾರೆ. ಸದ್ಯ 18 ವರ್ಷದ ಅಜೀಮ್ ಎಸ್ಎಸ್ಎಲ್ಸಿ ಪರೀಕ್ಷೆಯ ಫಲಿತಾಂಶಕ್ಕಾಗಿ ಕಾಯುತ್ತಿದ್ದಾರೆ.
ಇದನ್ನೂ ಓದಿ: ಮೊದಲ ಬಾರಿ ವೋಟ್ ಮಾಡಿದ ಅನುಭವ ಹೇಗಿತ್ತು? ಯುವ ಮತದಾರರ ಪ್ರತಿಕ್ರಿಯೆಗಳು - First Time Voters Reaction
ಇನ್ನು ಕೇರಳ ಸಿಎಂ ಪ್ರಧಾನ ಕಾರ್ಯದರ್ಶಿ ಕೆಎಂ ಅಬ್ರಾಹಂ ಅವರಿಗೆ ಮತದಾನ ಮಾಡಲು ಸಾಧ್ಯವಾಗಿಲ್ಲ. 'ಇನ್ನೊಬ್ಬ ವ್ಯಕ್ತಿಯ ಮತ್ತು ನನ್ನ ವೋಟರ್ ಐಡಿ ನಂಬರ್ ಒಂದೇ ಆಗಿದ್ದರಿಂದ ಮತಹಕ್ಕು ಚಲಾಯಿಸಲು ಸಾಧ್ಯವಾಗಿಲ್ಲ. ಈ ಬಗ್ಗೆ ಜಿಲ್ಲಾ ಚುನಾವಣಾಧಿಕಾರಿಗೆ ದೂರು ಸಲ್ಲಿಸಿದ್ದೇನೆ' ಎಂದು ಪ್ರತಿಕ್ರಿಯೆ ನೀಡಿದ್ದಾರೆ.
ಇದನ್ನೂ ಓದಿ: ಬೆಂಗಳೂರು: ಮತಗಟ್ಟೆ ಬಳಿ ಮಹಿಳೆಗೆ ಹೃದಯ ಸ್ತಂಭನ, ಮತದಾನಕ್ಕೆ ಬಂದ ವೈದ್ಯ ಉಳಿಸಿದ್ರು ಪ್ರಾಣ - CARDIAC ARREST
ಎರಡನೇ ಹಂತದಲ್ಲಿ ಶುಕ್ರವಾರ ಕರ್ನಾಟಕದ ಹಳೆ ಮೈಸೂರು, ಬೆಂಗಳೂರು ಭಾಗದ 14 ಲೋಕಸಭೆ ಕ್ಷೇತ್ರಗಳು ಸೇರಿ ದೇಶದ ವಿವಿಧೆಡೆಯ ಒಟ್ಟು 88 ಕ್ಷೇತ್ರಗಳಲ್ಲಿ ಮತದಾನ ನಡೆಯಿತು. ಅಸ್ಸಾಂ-5, ಬಿಹಾರ-5, ಛತ್ತೀಸ್‌ಗಢ-3, ಕೇರಳ-20, ಮಧ್ಯಪ್ರದೇಶ-6, ಮಹಾರಾಷ್ಟ್ರ-8, ಮಣಿಪುರ-1, ರಾಜಸ್ಥಾನ-13, ತ್ರಿಪುರಾ-1, ಉತ್ತರ ಪ್ರದೇಶ-8, ಪಶ್ಚಿಮ ಬಂಗಾಳ-3 ಮತ್ತು ಜಮ್ಮು ಮತ್ತು ಕಾಶ್ಮೀರದ ಒಂದು ಕ್ಷೇತ್ರದಲ್ಲಿ ಮತದಾರರು ಮತಹಕ್ಕು ಚಲಾಯಿಸಿದ್ದಾರೆ.
ಇದನ್ನೂ ಓದಿ: ಸೆಂಚುರಿ ದಾಟಿದರೂ ಬತ್ತದ ಉತ್ಸಾಹ: ಮತಗಟ್ಟೆಗೆ ಬಂದು ಮತದಾನದ ಹಕ್ಕು ಚಲಾಯಿಸಿದ ಹಿರಿಯ ನಾಗರಿಕರು - Lok Sabha election 2024