ಕೋಲ್ಕತ್ತಾ: ಟ್ರೈನಿ ಡಾಕ್ಟರ್ ಅತ್ಯಾಚಾರ ಮತ್ತು ಕೊಲೆ ಪ್ರಕರಣ ವಿರುದ್ಧ ವ್ಯಕ್ತವಾಗುತ್ತಿರುವ ಭಾರೀ ಪ್ರತಿಭಟನೆ ಕುರಿತು ಪಶ್ಚಿಮ ಬಂಗಾಳ ರಾಜ್ಯಪಾಲರಾದ ಸಿವಿ ಆನಂದ್ ಬೋಸ್ ಅವರು ಇಂದು ರಾಷ್ಟ್ರಪತಿ ದ್ರೌಪದಿ ಮುರ್ಮ ಮತ್ತು ಉಪರಾಷ್ಟ್ರಪತಿ ಜಗದೀಪ್ ಧನಕರ್ ಅವರನ್ನು ಭೇಟಿಯಾಗಿ ವರದಿ ಮಾಡಿದ್ದಾರೆ. ಮಧ್ಯಾಹ್ನದ ಬಳಿಕ ಅವರು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿಯಾಗುವ ಸಾಧ್ಯತೆ ಇದೆ.
ಸಂತ್ರಸ್ತೆಗೆ ನ್ಯಾಯ ನೀಡುವಲ್ಲಿ ಆಗುತ್ತಿರುವ ವಿಳಂಬ ಕುರಿತು ಎಎಪಿ ರಾಜ್ಯಸಭಾ ಸದಸ್ಯ, ಕ್ರಿಕೆಟಿಗ ಹರ್ಭಜನ್ ಸಿಂಗ್ ಪತ್ರ ಬರೆದಿದ್ದರು. ಈ ಬೆನ್ನಲ್ಲೇ ರಾಜ್ಯಪಾಲರು ಪ್ರಕರಣ ಸಂಬಂಧ ನಡೆಸಲಾದ ಕ್ರಮಗಳ ಕುರಿತು ವಿವಿಧ ಸಮಾಜದ ಪ್ರತಿನಿಧಿಗಳ ತುರ್ತು ಸಭೆಯನ್ನು ಕರೆದಿದ್ದಾರೆ.
ಪ್ರಕರಣ ಸಂಬಂಧ ಸ್ವಯಂ ಅರ್ಜಿ ದಾಖಲಿಸಿರುವ ಸುಪ್ರೀಂ ಕೋರ್ಟ್ನ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ ಮತ್ತು ನ್ಯಾಯಮೂರ್ತಿ ಜೆಬಿ ಪರ್ದಿವಲಾ ಮತ್ತು ಮನೋಜ್ ಮಿಶ್ರಾ ಅವರನ್ನೊಳಗೊಂಡ ಪೀಠ ಇಂದು ಪ್ರಕರಣ ಆಲಿಸಿದೆ. ಈ ನಡುವೆ ಆರ್ಕೆ ಮೆಡಿಕಲ್ ಕಾಲೇಜ್ ಮತ್ತು ಆಸ್ಪತ್ರೆಯಲ್ಲಿ ನಡೆಯುತ್ತಿರುವ ಪ್ರತಿಭಟನೆಗೆ ವಕೀಲರು ಕೂಡ ಬೆಂಬಲ ನೀಡಿದ್ದಾರೆ.
ಸಹೋದರಿಯರ ರಕ್ಷಣೆಗೆ ಪ್ರತಿಜ್ಞೆ: 'ಪಶ್ಚಿಮ ಬಂಗಾಳದಲ್ಲಿ ಪ್ರಜಾಪ್ರಭುತ್ವ ಅವನತಿಯತ್ತ ಸಾಗುತ್ತಿದೆ. ಇದು ಹೀಗೆ ಮುಂದುವರೆಯಲು ಸಾಧ್ಯವಿಲ್ಲ. ಮಹಿಳೆಯರ ಸುರಕ್ಷತೆಗೆ ಸಮಗ್ರ ಕ್ರಮಕ್ಕೆ ಒತ್ತಾಯಿಸುತ್ತೇನೆ. ಇಂದು ನಮ್ಮ ಮಗಳು, ತಂಗಿಯರ ರಕ್ಷಣೆಗೆ ನಾವು ಪ್ರತಿಜ್ಞೆ ಮಾಡಬೇಕಿದೆ ಎಂದು ರಾಜ್ಯಪಾಲರು ತಿಳಿಸಿದ್ದರು. ಆಗಸ್ಟ್ 15ರಂದು ಆಸ್ಪತ್ರೆಗೆ ಭೇಟಿ ನೀಡಿದ್ದ ಅವರು, ಪ್ರತಿಭಟನಾನಿರತ ವೈದ್ಯರ ಜೊತೆ ಮಾತನಾಡಿ, ಶೀಘ್ರದಲ್ಲಿಯೇ ನ್ಯಾಯ ಒದಗಿಸುವ ಭರವಸೆ ನೀಡಿದ್ದರು'.
'ಸಮಾಜವು ಮಹಿಳೆಯರಿಗೆ ಸುರಕ್ಷಿತ ಮತ್ತು ಖುಷಿಯನ್ನು ನೀಡಬೇಕು. ನಮ್ಮ ಸಹೋದರಿಯರಿಗೆ ಇದನ್ನು ನೀಡುವಲ್ಲಿ ನಾವು ವಿಫಲವಾಗುತ್ತಿದ್ದೇವೆ. ಕನಿಷ್ಠ ನಾಗರಿಕ ಸಮಾಜ ನೀಡುವ ಭರವಸೆಗಳಿವು. ರಾಜ್ಯಪಾಲರಾಗಿ ಜನರ ಸೇವೆ ಮಾಡುವುದು ನನ್ನ ಜವಾಬ್ಧಾರಿ. ಗುರಿ ಮತ್ತು ದಾರಿ ದೂರವಿದೆ ಎಂದು ನನಗೆ ತಿಳಿದಿದೆ. ಆದರೆ, ನನ್ನ ನಡಿಗೆ ನಿರತರವಾಗಿರಲಿದೆ. ನಾನು ನಿಮ್ಮ ಜೊತೆ ಇದ್ದೇನೆ. ನಿಮಗಾಗಿ ಇದ್ದೇನೆ' ಎಂದಿದ್ದಾರೆ.
ಸಿಬಿಐ ತನಿಖೆ: 36ಗಂಟೆಗಳ ಶಿಫ್ಟ್ ನಡೆಸಿದ ಆರ್ಕೆ ಕರ್ ಮೆಡಿಕಲ್ ಆಸ್ಪತ್ರೆಯ 31 ವರ್ಷದ ಸ್ನಾತಕೋತ್ತರ ಟ್ರೈನಿ ವೈದ್ಯೆ ಮೇಲೆ ಅತ್ಯಾಚಾರ ಎಸಗಿ, ಕೊಲೆ ಮಾಡಲಾಗಿತ್ತು. ಮರು ದಿನ ಬೆಳಗ್ಗೆ ಆಗಸ್ಟ್ 9ರಂದು ಆಕೆಯ ಸಹೋದ್ಯೋಗಿ ಸೆಮಿನಾರ್ ರೂಂಗೆ ಬಂದಾಗ ಪ್ರಕರಣ ಬೆಳಕಿಗೆ ಬಂದಿತು. ಈ ಹೀನಕೃತ್ಯದ ವಿರುದ್ಧ ನ್ಯಾಯಕ್ಕಾಗಿ ಮತ್ತು ಅತ್ಯಾಚಾರಿ ಹಾಗೂ ಪ್ರಕರಣದಲ್ಲಿ ಭಾಗಿಯಾದವರನ್ನು ಕಠಿಣ ಶಿಕ್ಷೆಗೆ ಆಗ್ರಹಿಸಿ, ವೈದ್ಯರು ಪ್ರತಿಭಟನೆ ನಡೆಸಿದ್ದಾರೆ. ಸದ್ಯ ಈ ಪ್ರಕರಣವನ್ನು ಸಿಬಿಐ ತನಿಖೆ ನಡೆಸುತ್ತಿದೆ.
ಇದನ್ನೂ ಓದಿ: ಬಂಗಾಳ ವೈದ್ಯೆ ಅತ್ಯಾಚಾರ, ಕೊಲೆ ವಿರುದ್ಧ ಒಗ್ಗೂಡಿದ ಫುಟ್ಬಾಲ್ನ 'ಶತ್ರು ಕ್ಲಬ್ಗಳು'