ವಯನಾಡ್(ಕೇರಳ): ವಯನಾಡ್ ಭೂಕುಸಿತ ದುರಂತದಲ್ಲಿ 9 ಜನರ ಕುಟುಂಬ, ಬಳಿಕದ ರಸ್ತೆ ಅಪಘಾತದಲ್ಲಿ ಭಾವಿ ಪತಿಯ ಮರಣ ಸೇರಿ ಸರ್ವಸ್ವವನ್ನೇ ಕಳೆದುಕೊಂಡಿದ್ದ ಯುವತಿಗೆ ಕೇರಳ ಸರ್ಕಾರ ಉದ್ಯೋಗ ನೀಡಿ ಬದುಕಿಗೆ ಹೊಸ ಭರವಸೆಯ ದಾರಿ ತೋರಿಸಿದೆ.
ಪ್ರಕೃತಿ ವಿಕೋಪದಲ್ಲಿ ಕುಟುಂಬಸ್ಥರೆಲ್ಲರನ್ನೂ ಕಳೆದುಕೊಂಡು ಒಬ್ಬಳೇ ಬದುಕುಳಿದಿದ್ದ ಶೃತಿ ಎಂಬಾಕೆಗೆ ಸಿಎಂ ಪಿಣರಾಯಿ ವಿಜಯನ್ ನೇತೃತ್ವದ ಸರ್ಕಾರ ಸರ್ಕಾರಿ ಉದ್ಯೋಗ ನೀಡುವುದಾಗಿ ಆಶ್ವಾಸನೆ ನೀಡಿತ್ತು. ಈ ಬಗ್ಗೆ ಸಚಿವ ಸಂಪುಟದಲ್ಲೂ ಅಂಗೀಕರಿಸಲಾಗಿತ್ತು. ಕೊಟ್ಟ ಮಾತಿನಂತೆ ಆಕೆಗೆ ಕಂದಾಯ ಇಲಾಖೆಯಲ್ಲಿ ಗುಮಾಸ್ತ ಹುದ್ದೆಗೆ ಸೇರ್ಪಡೆ ಮಾಡಲಾಗಿದೆ.
ಕೆಲಸಕ್ಕೆ ಹಾಜರಾದ ಯುವತಿ: ಯುವತಿ ಶೃತಿ ಅವರು, ಕಂದಾಯ ಇಲಾಖೆಯಲ್ಲಿ ಕ್ಲರ್ಕ್ ಹುದ್ದಗೆ ಸೋಮವಾರ ವರದಿ ಮಾಡಿಕೊಂಡರು. ಕೆಲಸಕ್ಕೆ ಹಾಜರಾದ ದಿಟ್ಟೆಗೆ ಸಿಬ್ಬಂದಿ ಚಪ್ಪಾಳೆ ಕರತಾಡನದ ಮೂಲಕ ಬರಮಾಡಿಕೊಂಡರು. ಈ ವೇಳೆ ಸ್ಥಳೀಯ ರಾಜಕೀಯ ಮುಖಂಡರು ಶೃತಿ ಅವರ ವೃತ್ತಿಜೀವನದ ಮುಂದಿನ ಹಾದಿಗೆ ಶೂಭ ಕೋರಿದರು. ಇದಲ್ಲದೇ, ಕಂದಾಯ ಸಚಿವ ಕೆ.ರಾಜನ್ ಅವರು ಶೃತಿಗೆ ಕರೆ ಮಾಡಿ ಹೊಸ ವೃತ್ತಿಗೆ ಶುಭಾಶಯ ತಿಳಿಸಿದ್ದಾರೆ.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಶೃತಿ, "ಭೂಕುಸಿತದಲ್ಲಿ ಪೋಷಕರು, ಸಹೋದರಿ ಸೇರಿದಂತೆ 9 ಮಂದಿಯನ್ನು ಕಳೆದುಕೊಂಡೆ. ಈ ಆಘಾತದಲ್ಲಿರುವಾಗಲೇ ಈ ಮೊದಲೇ ಕುಟುಂಬಸ್ಥರು ನಿಶ್ಚಯ ಮಾಡಿದ್ದ ವರನೂ ಅಪಘಾತದಲ್ಲಿ ಮೃತಪಟ್ಟರು. ಇಂತಹ ಕಷ್ಟದ ಸಮಯದಲ್ಲಿ ಬೆಂಬಲ ನೀಡಿದ ಸರ್ಕಾರ ಮತ್ತು ಉಳಿದೆಲ್ಲರಿಗೂ ಧನ್ಯವಾದ" ಎಂದರು.
ಈ ಬಗ್ಗೆ ಫೇಸ್‌ಬುಕ್ ಪೋಸ್ಟ್‌ನಲ್ಲಿ ಮಾಹಿತಿ ಹಂಚಿಕೊಂಡಿರುವ ಮುಖ್ಯಮಂತ್ರಿ ಪಿಣರಾಯಿ ವಿಜಯನ್, ಭೂಕುಸಿತದ ಸಂತ್ರಸ್ತರಿಗೆ ಬೆಂಬಲ ಮತ್ತು ಭವಿಷ್ಯಕ್ಕೆ ಮಾರ್ಗದರ್ಶನ ನೀಡುವುದು ಎಲ್‌ಡಿಎಫ್ ಸರ್ಕಾರದ ಬದ್ಧತೆಯಾಗಿದೆ. ಚೂರಲ್‌ಮಲಾ-ಮುಂಡಕ್ಕೈ ಭೂಕುಸಿತ ದುರಂತದಲ್ಲಿ ತನ್ನ ಕುಟುಂಬವನ್ನು ಕಳೆದುಕೊಂಡ ಶೃತಿ ಅವರಿಗೆ ಕಂದಾಯ ಇಲಾಖೆಯಲ್ಲಿ ಉದ್ಯೋಗಕ್ಕೆ ಸೇರ್ಪಡೆ ಮಾಡಲಾಗಿದೆ. ಸರ್ಕಾರ ನೀಡಿದ ಭರವಸೆಯನ್ನು ಈಡೇರಿಸಿದೆ ಎಂದು ತಿಳಿಸಿದ್ದಾರೆ.
ವಯನಾಡ್ ಭೂಕುಸಿತ: ಜುಲೈ 30ರಂದು ನಡೆದ ಭೀಕರ ಭೂಕುಸಿತದಲ್ಲಿ 400ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ. ನೂರಾರು ಮನೆಗಳು ಮತ್ತು ಇತರ ಕಟ್ಟಡಗಳು ಸಂಪೂರ್ಣವಾಗಿ ನಾಶವಾಗಿವೆ. 130ಕ್ಕೂ ಹೆಚ್ಚು ಜನರು ಇನ್ನೂ ನಾಪತ್ತೆಯಾಗಿದ್ದಾರೆ.
ಇದನ್ನೂ ಓದಿ: ಬೆಳಗಾವಿಯಲ್ಲಿ ಮರಾಠಿ ಭಾಷಿಕರಿಗೆ ಅನ್ಯಾಯ, ಕೇಂದ್ರಾಡಳಿತ ಪ್ರದೇಶ ಮಾಡಿ: ಆದಿತ್ಯ ಠಾಕ್ರೆ