ಇಡುಕ್ಕಿ(ಕೇರಳ): ಇಡುಕ್ಕಿಯಲ್ಲಿ ಇಂದು (ಸೋಮವಾರ) ಕಾಡಾನೆ ದಾಳಿಗೆ ವೃದ್ಧೆಯೊಬ್ಬರು ಸಾವನ್ನಪ್ಪಿದ್ದಾರೆ. ಆದಿಮಲಿ ಪಂಚಾಯತ್‌ನ ಕಂಜಿರವೇಲಿ ಪ್ರದೇಶದಲ್ಲಿ ಘಟನೆ ವರದಿಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
65 ವರ್ಷದ ಇಂದಿರಾ ಎಂಬವರು ಆನೆ ದಾಳಿಗೆ ತುತ್ತಾಗಿರುವ ಮಹಿಳೆ. ಇಂದು ಬೆಳಗ್ಗೆ ಅರಣ್ಯ ಪ್ರದೇಶದ ಬಳಿಯಿರುವ ಇವರ ಜಮೀನಿಗೆ ಕಾಡಾನೆ ನುಗ್ಗಿ ದಾಳಿ ಮಾಡಿದೆ. ಓಡಿ ಹೋಗಲು ಯತ್ನಿಸಿದ ಇಂದಿರಾ ಅವರು ಕಾಲು ಜಾರಿ ಕೆಳಗೆ ಬಿದ್ದಿದ್ದಾರೆ. ಈ ಸಂದರ್ಭದಲ್ಲಿ ಆಕೆಯನ್ನು ಆನೆ ತುಳಿದು ಹಾಕಿದೆ.
ಮಹಿಳೆಯ ಕಿರುಚಾಟ ಕೇಳಿದ ನೆರೆಹೊರೆಯವರು ಸಹಾಯಕ್ಕೆ ಧಾವಿಸಿದ್ದಾರೆ. ಗಂಭೀರವಾಗಿ ಗಾಯಗೊಂಡ ಮಹಿಳೆಯನ್ನು ಕೊತ್ತಮಂಗಲಂನ ಹತ್ತಿರದ ಆಸ್ಪತ್ರೆಗೆ ಕರೆದೊಯ್ದರೂ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಇತ್ತೀಚಿನ ಪ್ರಕರಣ-ಕಾಡಾನೆ ದಾಳಿಗೆ ವೃದ್ಧ ಬಲಿ: ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲೂಕಿನ ಕರಳಕಟ್ಟೆ ಗ್ರಾಮದಲ್ಲಿ ಇತ್ತೀಚೆಗೆ ಕಾಡಾನೆ ದಾಳಿಗೆ ಸಿಲುಕಿ ಸಣ್ಣಮಾದ (72) ಎಂಬ ವ್ಯಕ್ತಿ ಸಾವನ್ನಪ್ಪಿದ್ದರು. ಬಿಆರ್ಟಿ ಹುಲಿ ಸಂರಕ್ಷಿತ ಅರಣ್ಯ ಪ್ರದೇಶ ವ್ಯಾಪ್ತಿಯಲ್ಲಿ ಬರುವ ಕರಳಕಟ್ಟೆ ಗ್ರಾಮದಲ್ಲಿ ಘಟನೆ ನಡೆದಿತ್ತು.
ಸಣ್ಣಮಾದ ತಮ್ಮ ಪತ್ನಿ ಜಡೆ ಮಾದಮ್ಮ, ನಾದಿನಿ ರಂಗಮ್ಮ ಅವರೊಂದಿಗೆ ಕರಳಕಟ್ಟೆ ಸಮೀಪದ ಮೇಗಲದೊಡ್ಡಿಗೆ ಹೋಗುತ್ತಿದ್ದರು. ಈ ಸಂದರ್ಭದಲ್ಲಿ ದಾರಿಯಲ್ಲಿ ನಿಂತಿದ್ದ ಕಾಡಾನೆ ದಾಳಿ ಮಾಡಿದೆ. ತಪ್ಪಿಸಿಕೊಳ್ಳಲು ಸಣ್ಣಮಾದ ಓಡಲು ಹೋಗಲು ಆರಂಭಿಸಿದ್ದರು. ಆದರೆ, ಅಟ್ಟಾಡಿಸಿಕೊಂಡು ಹಿಂಬಾಲಿಸಿದ ಆನೆ ಅವರನ್ನು ತುಳಿದು ಸಾಯಿಸಿತ್ತು. ಜಡೆ ಮಾದಮ್ಮ, ನಾದಿನಿ ರಂಗಮ್ಮ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಘಟನಾ ಸ್ಥಳಕ್ಕೆ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ನಂದಕುಮಾರ್, ಗ್ರಾಮಾಂತರ ಠಾಣೆ ಪಿಎಸ್‍ಐ ಗಣೇಶ್ ಭೇಟಿ ನೀಡಿ, ಪರಿಶೀಲಿಸಿದರು. ಮೃತನ ಸಂಬಂಧಿಕರು, ಸೂಕ್ತ ಪರಿಹಾರ ನೀಡಬೇಕು ಎಂದು ಆಗ್ರಹಿಸಿದ್ದರು.
"ಕಾಡಾನೆ ದಾಳಿಗೆ ಮನುಷ್ಯ ಮೃತಪಟ್ಟರೆ ಸರ್ಕಾರದಿಂದ ದೊರೆಯುವ ಸೌಲಭ್ಯವನ್ನು ಅವರ ಕುಟುಂಬಕ್ಕೆ ತಲುಪಿಸುವ ಕೆಲಸ ಮಾಡುತ್ತೇವೆ" ಎಂದು ಎಸಿಎಫ್ ನಂದಕುಮಾರ್ ಭರವಸೆ ಕೊಟ್ಟಿದ್ದರು.
ಕಾಡಾನೆ ದಾಳಿಯಿಂದ ಅರಣ್ಯ ಇಲಾಖೆ ವೀಕ್ಷಕ ಸಾವು: ಕರ್ತವ್ಯಕ್ಕೆ ತೆರಳಿದ್ದ ಅರಣ್ಯ ಇಲಾಖೆಯ ವೀಕ್ಷಕನ ಮೇಲೆ ಕಾಡಾನೆ ದಾಳಿ ನಡೆಸಿದ್ದರಿಂದ ಆತ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಮೈಸೂರು ಜಿಲ್ಲೆಯ ಸರಗೂರು ತಾಲೂಕಿನ ಕೆಬ್ಬೆಪುರ ಹಾಡಿಯ ಹತ್ತಿರ ಇತ್ತೀಚೆಗೆ ನಡೆದಿತ್ತು. ಬಂಡೀಪುರ ಅರಣ್ಯ ವ್ಯಾಪ್ತಿಯ ಮೊಳೆಯೂರು ವಿಭಾಗದ ಕೆಬ್ಬೆಪುರ ಹಾಡಿಯ ನಿವಾಸಿ ಮತ್ತು ಅರಣ್ಯ ಇಲಾಖೆಯಲ್ಲಿ ವಾಚರ್ ಆಗಿ ಸೇವೆ ಸಲ್ಲಿಸುತ್ತಿದ್ದ ಬಿ. ರಾಜು (38) ಮೃತಪಟ್ಟಿದ್ದರು. ಎಂದಿನಂತೆ ಕೆಲಸಕ್ಕೆ ಸಿದ್ಧರಾಗಿ ಬಸ್ ಹತ್ತಲು ಕೆಬ್ಬೆಪುರದ ಹಾಡಿಯಿಂದ ಮೊಳೆಯೂರಿಗೆ ನಡೆದುಕೊಂಡು ಬರುವ ವೇಳೆ ಕಾಡಾನೆ ಏಕಾಏಕಿ ದಾಳಿ ನಡೆಸಿ ರಾಜು ಅವರನ್ನು ಬಲಿ ಪಡೆದಿದೆ.
ಇದನ್ನೂ ಓದಿ: ಆನೆ ದಾಳಿಯಿಂದ ಕೂದಲೆಳೆಯಲ್ಲಿ ಪಾರಾದ ಕೂಲಿ ಕಾರ್ಮಿಕ: ವಿಡಿಯೋ ವೈರಲ್